ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸತತ ಮಳೆಗೆ ನೆಲಕಚ್ಚಿದ ರಾಗಿ

ಹನೂರು: ಸಾವಿರಾರು ಎಕರೆಯಲ್ಲಿ ರಾಗಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತರು
Last Updated 11 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಹನೂರು: ಹಲವು ದಿನಗಳಿಂದ ಸುರಿದ ನಿರಂತರ ಮಳೆಗೆ ತಾಲ್ಲೂಕಿನಾದ್ಯಂತ ಸಾವಿರಾರು ಎಕರೆಯಲ್ಲಿ ಬೆಳೆದಿರುವ ರಾಗಿ ನೆಲ ಕಚ್ಚಿದ್ದು, ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.

ಹನೂರು, ರಾಮಾಪುರ, ಲೊಕ್ಕನಳ್ಳಿ ಹೋಬಳಿಗಳ ರೈತರು ಈ ಬಾರಿ 12,300 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆದಿದ್ದಾರೆ. ಉತ್ತಮ ಮಳೆಯಿಂದಾಗಿ ರಾಗಿ ಕೆಲವು ಕಡೆ ಕಟಾವಿಗೆ ಬಂದಿದೆ. ಮತ್ತೆ ಕೆಲವು ಕಡೆ ಉತ್ತಮವಾಗಿ ಇಳುವರಿ ಬಂದಿದೆ. ಆದರೆ ಅತಿಯಾದ ಮಳೆಯಿಂದಾಗಿ ಗಿಡಗಳೆಲ್ಲಾ ತುಂಬಾ ಎತ್ತರವಾಗಿ ಬೆಳೆದು, ತೆನೆ ಭಾರ ತಾಳಲಾರದೇ ಬಾಗಿ ನೆಲಕ್ಕೆ ಬಿದ್ದಿವೆ.

‘ರಾಮಾಪುರ ಹೋಬಳಿ ವ್ಯಾಪ್ತಿಯ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಈಗಾಗಲೇ ಕೆಲವು ಜಮೀನುಗಳಲ್ಲಿ ರಾಗಿ‌ ಮೊಳಕೆಯೊಡಯಲು ಪ್ರಾರಂಭವಾಗಿದೆ. ಹೀಗೆ ಇನ್ನು ಮೂರು ದಿನ ಇದೇ ರೀತಿ ಮಳೆಯಾದರೆ ಬೆಟ್ಟದ ತಪ್ಪಲಿನ ಎಲ್ಲ ಜಮೀನುಗಳಲ್ಲಿರುವ ರಾಗಿ ಸಂಪೂರ್ಣವಾಗಿ ಹಾನಿಯಾಗಲಿದೆ. ಇರುವ ಅಲ್ಪ ಜಮೀನಿನಲ್ಲಿ ಮಳೆಯನ್ನೇ ನಂಬಿ ರಾಗಿ ಬೆಳೆದಿದ್ದೆವು. ಆದರೆ, ಅದೇ ಮಳೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದೆ’ ಎಂದು ಹಳೆಯೂರು ಗ್ರಾಮದ ಮಾದತಂಬಡಿ ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

‘15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಭಾಗದ ಬಹುತೇಕ ಜಮೀನಿನಲ್ಲಿ ಬೆಳೆದಿರುವ ರಾಗಿ ಫಸಲು ಭಾಗಶಃ ನೆಲಕ್ಕೊರಗಿವೆ. ಇದನ್ನೇ ನಂಬಿ ಸಾಲ ಮಾಡಿ ಕೃಷಿ ಮಾಡಿದ್ದ ರೈತರು ಈಗ ತಲೆ ಮೇಲೆ ಕೈ ಹೊತ್ತು ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತೆನೆ ತೆಗೆಯಲು ಹೋದರೆ ಅದನ್ನು ಹೇಗೆ ಸಂಸ್ಕರಿಸುವುದು ಎಂಬುದೇ ಚಿಂತೆಯಾಗಿದೆ’ ಎಂದು ಶಿವಪುರ ಗ್ರಾಮದ ಮಹಾದೇವಪ್ರಭು ಹೇಳಿದರು.

‘ಉತ್ತಮ ಮಳೆಯಾಗಿದ್ದರಿಂದ ರಾಗಿ ಪೈರು ಚೆನ್ನಾಗಿ ಬೆಳೆದಿದೆ. ನಮ್ಮ ಭಾಗದಲ್ಲಿ ರಾಗಿ ಕಟಾವಿಗೆ ಇನ್ನೂ ತಿಂಗಳ ಸಮಯ ಇದೆ. ಮಳೆ ಮುಂದುವರೆದಿರುವುದರಿಂದ ರಾಗಿ ಪೈರುಗಳೆಲ್ಲಾ ನೆಲಕ್ಕುರುಳಿವೆ. ಜಮೀನುಗಳಲ್ಲಿ ಈ ಸಮಸ್ಯೆಯಾಗಿರುವ ಬಗ್ಗೆ ರೈತರು ಹೇಳಿದ್ದಾರೆ. ಶೀಘ್ರದಲ್ಲೇ ಜಮೀನುಗಳಿಗೆ ತೆರಳಿ ವಾಸ್ತವವನ್ನು ಪರಿಶೀಲಿಸಲಾಗುವುದು’ ಎಂದು ಹೇಳುತ್ತಾರೆ ಕೃಷಿ ಅಧಿಕಾರಿಗಳು.

ಪರಿಶೀಲಿಸಿ ಕ್ರಮ: ತಹಶೀಲ್ದಾರ್‌
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದತಹಶೀಲ್ದಾರ್ಜಿ.ಎಚ್.ನಾಗರಾಜು, ‘ಅತಿಯಾದ ಮಳೆಯಿಂದಾಗಿ ರಾಗಿ ಫಸಲಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ. ಕೂಡಲೇ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳನ್ನು ಜಮೀನುಗಳಿಗೆ ಕಳುಹಿಸಿ ಪರಿಶೀಲಿಸಿ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಕೃಷಿ ಅಧಿಕಾರಿ ರಘುವೀರ್ ಮಾತನಾಡಿ, ‘ಜಮೀನಿನಲ್ಲಿ ರಾಗಿ ಹಾನಿಗೊಳಗಾಗಿರುವ ರೈತರು ಪ್ರಕೃತಿ ವಿಕೋಪದಡಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದರೆ, ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ನೀರಾವರಿ ಪ್ರತಿ ಹೆಕ್ಟೇರ್‌ಗೆ ₹ 12,500, ಖುಷ್ಕಿ ಜಮೀನಿಗೆ ಪ್ರತಿ ಹೆಕ್ಟೇರ್‌ಗೆ ₹ 6,800 ಪರಿಹಾರ ನೀಡಲು ಕ್ರಮ ವಹಿಸಲಾಗುವುದು. ಆದ್ದರಿಂದ ನಷ್ಟಕ್ಕೊಳಗಾಗಿರುವ ರೈತರು ತಪ್ಪದೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT