ಶುಕ್ರವಾರ, ಫೆಬ್ರವರಿ 3, 2023
18 °C

ಯಳಂದೂರು: ಪತ್ನಿ ಶವವನ್ನು ಹೊತ್ತುಕೊಂಡು ನಡೆದ ಪತಿ, ಪೊಲೀಸರಿಂದ ಅಂತ್ಯಸಂಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು (ಚಾಮರಾಜನಗರ): ಅಂತ್ಯ ಸಂಸ್ಕಾರ ಮಾಡಲು ಹಣವಿಲ್ಲದೆ ವ್ಯಕ್ತಿಯೊಬ್ಬ ಪತ್ನಿಯ ಶವವನ್ನು ಪ್ಲಾಸ್ಟಿಕ್‌ ಗೋಣಿ ಚೀಲದಲ್ಲಿರಿಸಿ ಹೊತ್ತುಕೊಂಡು‌ ಹೋದ ಘಟನೆ ಯಳಂದೂರಿನಲ್ಲಿ ಮಂಗಳವಾರ ನಡೆದಿದೆ.

ಸ್ಥಳೀಯರು ವ್ಯಕ್ತಿಯನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಬುಧವಾರ ಮಧ್ಯಾಹ್ನ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಯಳಂದೂರು ಪೊಲೀಸರೇ ಮುಂದು ನಿಂತು ಹಿಂದೂ ಸಂಪ್ರದಾಯದಂ‌ತೆ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿನ ಬಗ್ಗೆ ತನಿಖೆ ನಡೆಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಕಾಗೆಪುರ ಗ್ರಾಮದ ಕಾಳಮ್ಮ (26) ಮೃತಪಟ್ಟ ಮಹಿಳೆ. ಆಕೆಯ ಪತಿ ಮಳವಳ್ಳಿಯ ರವಿ ಶವವನ್ನು ಗೋಣಿ ಚೀಲದಲ್ಲಿ ಹೊತ್ತುಕೊಂಡು ಹೋದವರು. ದಂಪತಿ ತಾಲ್ಲೂಕಿನ ಕಂದಹಳ್ಳಿ ಸಮೀಪ ವಾಸವಿದ್ದರು. ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದ ಇಬ್ಬರೂ ಕುಡಿತದ ಚಟ ಹೊಂದಿದ್ದರು.

ಮಂಗಳವಾರ ಕಾಳಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅಂತ್ಯ ಸಂಸ್ಕಾರ ಮಾಡಲು ಹಣವಿಲ್ಲದೆ ರವಿ ಅವರು ಶವವನ್ನು ಹೊತ್ತುಕೊಂಡು ಬರುತ್ತಿದ್ದರು. ಇದನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ರವಿಯನ್ನು ವಿಚಾರಣೆ ನಡೆಸಿ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು.

ಬುಧವಾರ ಆಸ್ಪತ್ರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ರವಿ, 'ನಮ್ಮವರು ಯಾರೂ ಇಲ್ಲ. ನಾವು ನಂಜನಗೂಡಿನಲ್ಲಿದ್ದೆವು. ವಾರದ ಹಿಂದೆಯೇ ಆಕೆ ಬಂದಿದ್ದಳು. ಮಂಗಳವಾರ ನಾನು ಬಂದು ನೋಡಿದಾಗ ಮೃತಪಟ್ಟಿದ್ದಳು. ನನ್ನ ಬಳಿ ಒಂದು ರೂಪಾಯಿಯೂ ಇರಲಿಲ್ಲ. ಶವವನ್ನು ಹೊತ್ತುಕೊಂಡು ಬಂದೆ. ನಂತರ ಜನರಲ್ಲಿ ಹಣ ಕೇಳಿ ಅಂತ್ಯ ಸಂಸ್ಕಾರ ಮಾಡಲು ಯೋಚಿಸಿದ್ದೆ. ಅಷ್ಟರಲ್ಲಿ ಸ್ಥಳೀಯರು ಬಂದರು. ಪೊಲೀಸರೂ ಬಂದು ಶವವನ್ನು ಜಿಲ್ಲಾಸ್ಪತ್ರೆಗೆ ತಂದರು' ಎಂದು ರವಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, 'ವಿಷಯ ಗೊತ್ತಾಗುತ್ತಿದ್ದಂತೆಯೇ ಪೊಲೀಸರು ಶವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ' ಎಂದರು.

ಅಂತ್ಯ ಸಂಸ್ಕಾರ: ಮರಣೋತ್ತರ ಪರೀಕ್ಷೆಯ ಬಳಿಕ ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಯಳಂದೂರು ಹೊರ ವಲಯದ ಕಾರಾಪುರ ಮಠದ ಬಳಿಯ ರುದ್ರಭೂಮಿಯಲ್ಲಿ ಮಹಿಳೆಯ ಅಂತ್ಯಸಂಸ್ಕಾರ ಮಾಡಲಾಯಿತು. ಪೊಲೀಸರೇ ಮುಂದೆ ನಿಂತು ಹಿಂದೂ ಪದ್ಧತಿ ಪ್ರಕಾರ ಅಂತ್ಯಸಂಸ್ಕಾರ ಮಾಡಿದರು.

ಯಳಂದೂರು ಸಬ್ ಇನ್‌ಸ್ಪೆಕ್ಟರ್‌ ವೆಂಕಟೇಶ್, ಕಾನ್‌ಸ್ಟೆಬಲ್‌ ನಾಗೇಂದ್ರ, ಚಾಲಕ ಸೋಮಣ್ಣ, ಸಿಬ್ಬಂದಿ ರೇಖಾ ಮಹೇಶ್ ಈ ಕಾರ್ಯದಲ್ಲಿ ನೆರವಾದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು