ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಶ್ರೀರಾಮನಾಮ ಜಪ ಮಹಾಯಜ್ಞಕ್ಕೆ ಚಾಲನೆ

Published 26 ಅಕ್ಟೋಬರ್ 2023, 5:37 IST
Last Updated 26 ಅಕ್ಟೋಬರ್ 2023, 5:37 IST
ಅಕ್ಷರ ಗಾತ್ರ

ಚಾಮರಾಜನಗರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ತಿನ ಸಹಕಾರದೊಂದಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಯಶಸ್ವಿಯಾಗಿ ನೆರವೇರಲಿ ಹಾಗೂ ಲೋಕ ಕಲ್ಯಾಣಕ್ಕಾಗಿ ರಾಜ್ಯದಾದ್ಯಂತ ಆರಂಭಿಸಿರುವ ಶತಕೋಟಿ ಶ್ರೀರಾಮನಾಮ ಜಪ ಮಹಾಯಜ್ಞ ಹಾಗೂ ತಾರಕ ಯಜ್ಞ ಜಪ ಸಂಕಲ್ಪ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲೂ ಮಂಗಳವಾರ ಚಾಲನೆ ಸಿಕ್ಕಿದೆ.

ವಿಜಯದಶಮಿಯಂದು ಆರಂಭಗೊಂಡಿರುವ ಈ ಅಭಿಯಾನವು 2024ರ ಜನವರಿ 23ರವರೆಗೆ ನಡೆಯಲಿದೆ.

ಜಿಲ್ಲಾ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ನಗರದ ಶಂಕರಪುರದ ಶ್ರೀರಾಮ ಮಂದಿರ ಹಾಗೂ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಅಭಿಯಾನದ ಉದ್ಘಾಟನೆ ನೆರವೇರವೇರಿತು.

ಜಿಲ್ಲಾ ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಋಗ್ವೇದಿ ಮಾತನಾಡಿ, ‘ಶ್ರೀರಾಮ ಭಾರತೀಯ ಸಂಸ್ಕೃತಿಯಲ್ಲಿ ಧರ್ಮರಕ್ಷಣೆ ಹಾಗೂ ದುಷ್ಟ ಶಕ್ತಿಗಳ ನಿವಾರಣೆ ಮಾಡಿದ ಮಹಾನ್ ಪುರುಷ. ಶ್ರೀ ರಾಮನಾಮ ಸ್ಮರಣೆಯಿಂದ ಮನುಷ್ಯ ಜನ್ಮ ಸಾರ್ಥಕವಾಗುವುದು. ಜಾತಿ ಮತ ಪಂಥ ಭೇದವಿಲ್ಲದೆ ಸರ್ವರೂ ಶ್ರೀ ರಾಮನಾಮಸ್ಮರಣೆಯನ್ನು ಮಾಡಬೇಕು, ಶ್ರೀ ರಾಮ ನಾಮಸ್ಮರಣೆ ಮನುಷ್ಯನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸಿ, ಆಧ್ಯಾತ್ಮಿಕ ಶಕ್ತಿಯನ್ನು ತುಂಬುತ್ತದೆ’ ಎಂದರು.

ಸಂಘದ ಖಜಾಂಚಿ ಎಸ್.ಬಾಲಸುಬ್ರಹ್ಮಣ್ಯಂ ಮಾತನಾಡಿ, ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲಿ ಹಾಗೂ ಲೋಕದ ಸಮಸ್ತರಿಗೂ ಕಲ್ಯಾಣವಾಗಲಿ ಎಂಬ ಆಶಯದೊಂದಿಗೆ ಶತಕೋಟಿ ಶ್ರೀ ರಾಮನಾಮ ಜಪ ಯಜ್ಞವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆರಂಭಿಸಿದೆ. ಜಿಲ್ಲೆಯ ಸಮಸ್ತ ಜನರು ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕು’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾಮೂಹಿಕವಾಗಿ ಶ್ರೀರಾಮ ಜಯರಾಮ ಜಯ ಜಯ ರಾಮ ಮಂತ್ರವನ್ನು ಪಠಿಸಲಾಯಿತು.

ಬ್ರಾಹ್ಮಣ ಮಹಾಸಭೆಯ ಪ್ರತಾಪ್, ಸತೀಶ್, ಕೇಶವ ಮೂರ್ತಿ , ರಂಗನಾಥ್, ನಾಗಸುಂದರ್, ನಾಗೇಂದ್ರ, ರಾಜಗೋಪಾಲ್, ಮಹಿಳಾ ಸಂಘದ ವತ್ಸಲ ರಾಜಗೋಪಾಲ್, ಕುಸುಮ ಋಗ್ವೇದಿ, ವಿಜಯಲಕ್ಷ್ಮಿ ಗಾಯತ್ರಿ, ವಾಣಿಶ್ರೀ, ನಾಗಶ್ರೀ, ಮಾಲಾ, ಪದ್ಮಿನಿ, ಸುಧಾ, ಶ್ರಾವ್ಯ, ಶರಣ್ಯ, ಮಣಿಯಮ್ಮ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT