ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಮಕ್ಕಳಿಗೆ ‘ರಾಮಾಯಣ ದರ್ಶನಂ’ ಪಾಠ

ಕವಯಿತ್ರಿ ಎಚ್‌.ಆರ್‌.ಸುಜಾತ ಪರಿಕಲ್ಪನೆ, ವಾಚನಾಭಿನಯದ ಮೂಲಕ ಕುವೆಂಪು ಕಾವ್ಯದ ವಿವರಣೆ
Last Updated 16 ಜುಲೈ 2019, 20:00 IST
ಅಕ್ಷರ ಗಾತ್ರ

ಚಾಮರಾಜನಗರ: ರಾಷ್ಟ್ರಕವಿ ಕುವೆಂಪು ಅವರ ‘ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಕಾಲೇಜು ಮಕ್ಕಳಿಗೆ ಪರಿಚಯಿಸುವ ಅಭಿಯಾನ ರಾಜ್ಯದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.

‘ರಾಮಾಯಣ ದರ್ಶನಂ–ಓದು’ ಎಂದು ಹೆಸರಿನ ಅಡಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕುವೆಂಪು ಅವರ ಮಹಾಕಾವ್ಯಕ್ಕೆ ‘ಜ್ಞಾನಪೀಠ ಪ್ರಶಸ್ತಿ ಸಂದ 50 ವರ್ಷಗಳ ಸವಿನೆನಪಿಗಾಗಿ ಅಭಿಯಾನ ಆರಂಭವಾಗಿದೆ.201‌8ರ ನವೆಂಬರ್‌ನಲ್ಲಿ ಆರಂಭವಾಗಿರುವ ಈ ಅಭಿಯಾನ ಇದುವರೆಗೆ 36 ಕಡೆಗಳಲ್ಲಿ ನಡೆದಿದೆ.

ಕವಯಿತ್ರಿ ಎಚ್‌.ಆರ್‌.ಸುಜಾತ ಅವರ ಪರಿಕಲ್ಪನೆಯಲ್ಲಿ ರೂಪು ತಳೆದಿರುವ ಈ ವಿಭಿನ್ನ ಕಾರ್ಯಕ್ರಮವನ್ನು ವಾಚನಾಭಿನಯದ ಮೂಲಕ ಕಾಲೇಜು ವಿದ್ಯಾರ್ಥಿಗಳ ಮುಂದೆ ಪ್ರಸ್ತುತಪಡಿಸಲಾಗುತ್ತಿದೆ. ರಂಗಕರ್ಮಿ ಎಂ. ಗಣೇಶ್ ಉಡುಪಿ ಅವರು ಇದನ್ನು ನಿರ್ವಹಿಸುತ್ತಾರೆ. ನಂತರ ಕುವೆಂಪು ಸಾಹಿತ್ಯದ ಬಗ್ಗೆ ಉಪನ್ಯಾಸವೂ ಇರುತ್ತದೆ.

ಒಂದೂವರೆ ವರ್ಷ ಹಿಂದಿನ ಕಲ್ಪನೆ: ‘ಹಿಂದೊಮ್ಮೆ ಗಣೇಶ್‌ ಅವರು ರಾಮಾಯಣ ದರ್ಶನಂ ವಾಚಿಸುವುದನ್ನು ನೋಡಿದ್ದೆ. ಅದು ಗಮನ ಸೆಳೆದಿತ್ತು. ಒಂದೂವರೆ ವರ್ಷದ ಹಿಂದೆ ಈ ಕಲ್ಪನೆ ಬಂದಿತ್ತು. ಅಲ್ಲಿವರೆಗೆ ಕುವೆಂ‍ಪು ಅವರ ಎಲ್ಲ ಕೃತಿಗಳನ್ನು ಓದಿದ್ದೆ. ರಾಮಾಯಣ ದರ್ಶನಂ ಅನ್ನು ಓದಿರಲಿಲ್ಲ. ಓದಿದ ಮೇಲೆ ತುಂಬಾ ಇಷ್ಟವಾಯಿತು. ಕಾವ್ಯದಲ್ಲಿ ಅವರು ವರ್ಣಿಸಿರುವ ಕಾಡು, ಕಾಡಿನ ಅನುಭವಗಳು ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಈ ಕಾವ್ಯದಲ್ಲಿ ಸಮಾಜಕ್ಕೆ ತಿಳಿಸಬೇಕಾದುದು ತುಂಬಾ ಇದೆ ಎನ್ನಿಸಿತು’ ಎಂದು ಅಭಿಯಾನದ ಕಲ್ಪನೆ ಮೊಳಕೆಯೊಡೆದ ಬಗೆಯನ್ನು ಸುಜಾತ ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

‘ಕುವೆಂಪು ಅವರ ಕೃತಿ, ವಾಲ್ಮೀಕಿ ರಾಮಾಯಣದಿಂದ ವಿಭಿನ್ನವಾಗಿದೆ. ಈ ಕಾವ್ಯವು ರಾಮಾಯಣವನ್ನು ಸಾಕಷ್ಟು ಸುಧಾರಿಸಿದೆ. ಇವುಗಳನ್ನು ಕಾಲೇಜು ಮಕ್ಕಳಿಗೆ ತಿಳಿ ಹೇಳುವ ಕೆಲಸ ಆಗಬೇಕು ಎಂದುಕೊಂಡೆ. ಅದಕ್ಕಾಗಿ ಗಣೇಶ್‌ ಅವರನ್ನು ಸಂಪರ್ಕಿಸಿದೆ. ಅವರು ಒಪ್ಪಿಕೊಂಡರು’ ಎಂದು ಅವರು ವಿವರಿಸಿದರು.

‘2018ರ ನವೆಂಬರ್‌ನಲ್ಲಿ ಮೊದಲ ಕಾರ್ಯಕ್ರಮ ಆರಂಭವಾಯಿತು. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಯಕ್ರಮ ನಡೆದಿದೆ. ಇದುವರೆಗೆ 36 ಕಡೆಗಳಲ್ಲಿ ಮಾಡಿದ್ದೇವೆ. ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ಗೊತ್ತಿಲ್ಲ’ ಎಂದು ಅವರು ಹೇಳಿದರು.

‘ಮೊದಲ ಮತ್ತು ಎರಡನೇ ಸೆಮಿಸ್ಟರ್‌ಗಳಲ್ಲಿ ಕಾಲೇಜಿನಲ್ಲಿ ಮಕ್ಕಳು ಲಭ್ಯವಿರುವಾಗ ಕಾರ್ಯಕ್ರಮವನ್ನು ಮಾಡುತ್ತೇವೆ. ಒಂದರಿಂದ ಒಂದೂವರೆ ಗಂಟೆ ಅವಧಿಯ ಕಾರ್ಯಕ್ರಮ. ಮಹಾಕಾವ್ಯದ ಒಂದು ಅಧ್ಯಾಯವನ್ನು ವಾಚನಾಭಿಯನದ ಮೂಲಕ ವಿವರಿಸುತ್ತೇವೆ. ರಾಮಾಯಣದಲ್ಲಿ ಬರುವ ವಿವಿಧ ಪಾತ್ರಗಳನ್ನು ವಿವರಿಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಮಹಾಕಾವ್ಯದಲ್ಲಿನ ರಾಮ, ರಾವಣ, ಸೀತೆ, ಮಂಡೋದರಿ, ಕೈಕೇಯಿ, ಮಂಥರೆ, ಲಕ್ಷ್ಮಣ, ಮಾರೀಚ, ಚಂದ್ರನಖಿ, ವಿಭೀಷಣನ ಮಗಳು ಅನಲಾ, ವಾಲಿ, ಸುಗ್ರೀವ, ಹನುಮಂತ ಇತ್ಯಾದಿ ಪಾತ್ರಗಳನ್ನು ಕಾರ್ಯಕ್ರಮದಲ್ಲಿ ವಿವರಿಸಲಾಗುತ್ತದೆ.

‘ಇದುವರೆಗೆ ಮಾಡಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರತಿಕ್ರಿಯೆ ಚೆನ್ನಾಗಿದೆ. ಚೆನ್ನಾಗಿ ಸ್ವೀಕರಿಸಿದ್ದಾರೆ. ಎಲ್ಲವೂ, ಎಲ್ಲರೂ ನಾವು ಅಂದುಕೊಂಡ ಹಾಗೆ ಇರುವುದಿಲ್ಲ. ವಿದ್ಯಾರ್ಥಿಗಳೂ ಈ ಮಹಾಕಾವ್ಯದ ಬಗ್ಗೆ ಕುತೂಹಲ ಇಟ್ಟುಕೊಂಡಿದ್ದಾರೆ. ವಾಚನಾಭಿನಯದ ಮೂಲಕ ವಿವರಿಸುವುದರಿಂದ ಕಾರ್ಯಕ್ರಮ ಆಕರ್ಷಕವಾಗಿರುತ್ತದೆ’ ಎಂದು ಸುಜಾತ ಅವರು ಪ್ರತಿಪಾದಿಸಿದರು.

ಚಾಮರಾಜನಗರದಲ್ಲಿ ಇಂದು
‘ರಾಮಾಯಣ ದರ್ಶನಂ–ಓದು’ ಎಂದು ಹೆಸರಿನ ಅಡಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕುವೆಂಪು ಅವರ ಮಹಾಕಾವ್ಯಕ್ಕೆ ‘ಜ್ಞಾನಪೀಠ ಪ್ರಶಸ್ತಿ ಸಂದ 50 ವರ್ಷಗಳ ಸವಿನೆನಪಿಗಾಗಿ ಅಭಿಯಾನ ಆರಂಭವಾಗಿದೆ. 201‌8ರ ನವೆಂಬರ್‌ನಲ್ಲಿ ಆರಂಭವಾಗಿರುವ ಈ ಅಭಿಯಾನ ಇದುವರೆಗೆ 36 ಕಡೆಗಳಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT