ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ನಾದಸ್ವರ ಮಾಂತ್ರಿಕ ಈಗ ‘ಕರ್ನಾಟಕ ಕಲಾಶ್ರೀ’

ರಾಮಸಮುದ್ರದ ರಂಗಸ್ವಾಮಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವ
Last Updated 8 ಸೆಪ್ಟೆಂಬರ್ 2021, 4:27 IST
ಅಕ್ಷರ ಗಾತ್ರ

ಚಾಮರಾಜನಗರ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2021–22ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ವಾರ್ಷಿಕ ಪ್ರಶಸ್ತಿಗೆ ನಾದಸ್ವರ ವಿದ್ವಾನ್‌, ನಗರದ ರಾಮಸಮುದ್ರದ ಆರ್‌.ರಂಗಸ್ವಾಮಿ ಭಾಜನರಾಗಿದ್ದಾರೆ.

ಕರ್ನಾಟಕ ಸಂಗೀತ ವಿಭಾಗದಲ್ಲಿ ರಂಗಸ್ವಾಮಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಾದಸ್ವರ ನುಡಿಸುವುದರಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚಿನ ಅನುಭವ ಹೊಂದಿರುವ ಆರ್‌.ರಂಗಸ್ವಾಮಿ ಅವರಿಗೆ ಈಗ 56ರ ಹರೆಯ. 1965ರ ಜುಲೈ 1ರಂದು ಜನಿಸಿರುವ ರಂಗಸ್ವಾಮಿ ಅವರದ್ದು ಸಂಗೀತ ಸೇವೆಯಲ್ಲಿ ತೊಡಗಿರುವ ಕುಟುಂಬ. ಅವರ ತಂದೆ ದಿವಂಗತ ರಂಗಸ್ವಾಮಿ ಕ್ಲಾರಿಯೋನೆಟ್‌ ವಿದ್ವಾನ್‌ ಆಗಿದ್ದರು. ತಾತ ಕೂಡ ಸಂಗೀತ ವಿದ್ವಾಂಸರೇ.

ರಂಗಸ್ವಾಮಿ ಅವರಿಗೆ ಬಾಲ್ಯದ ಸಂಗೀತ ಶಿಕ್ಷಣ ತಂದೆಯವರಿಂದಲೇ ಸಿಕ್ಕಿತ್ತು. ಬಳಿಕ ತಮಿಳುನಾಡಿನ ನಾದಸ್ವರ ವಿದ್ವಾನ್‌ ಕುಂಜಪ್ಪ ಅವರಿಂದ ನಾದಸ್ವರ ಕಲಿತರು. ಮೈಸೂರು ಅರಮನೆ ಆಸ್ಥಾನ ವಿದ್ವಾನ್‌ರಾಗಿದ್ದ, ವಿದ್ವಾನ್‌ ಮೈಸೂರು ಎನ್‌.ನಾಗರಾಜು ಅವರಲ್ಲಿ ನಾದಸ್ವರದ ಹೆಚ್ಚಿನ ಶಿಕ್ಷಣವನ್ನು ಪಡೆದಿದ್ದಾರೆ.

‘ನಮ್ಮದು ಸಂಗೀತಗಾರರ ಕುಟುಂಬ. ಮನೆಯಲ್ಲಿ ಸಂಗೀತದ ವಾತಾವರಣವೇ ಇತ್ತು. ಹಾಗಾಗಿ, ಬಾಲ್ಯದಿಂದಲೂ ಈ ಕ್ಷೇತ್ರದಲ್ಲಿ ಆಸಕ್ತಿ’ ಎಂದು ಹೇಳುವ ರಂಗಸ್ವಾಮಿ ಅವರು ಆಕಾಶವಾಣಿ ‘ಎ’ ಶ್ರೇಣಿ ಕಲಾವಿದರು. ದೂರದರ್ಶನ ಚಂದನ ವಾಹಿನಿಯಲ್ಲೂ ಕಾರ್ಯಕ್ರಮ ನೀಡಿದ್ದಾರೆ.

ರಾಜ್ಯದಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮೈಸೂರು ದಸರಾ ಪ್ರಯುಕ್ತ ದರ್ಬಾರ್‌ ಹಾಲ್‌ನಲ್ಲಿ ಕಾರ್ಯಕ್ರಮ ನೀಡಿರುವುದು ರಂಗಸ್ವಾಮಿ ಅವರ ಹೆಗ್ಗಳಿಕೆ. ತಲಕಾಡು ಪಂಚಲಿಂಗ ದರ್ಶನ ಉತ್ಸವ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ, 2005ರಲ್ಲಿ ಹಾಸನದಲ್ಲಿ ಸವಿತಾ ಸಮಾಜ ಹಮ್ಮಿಕೊಂಡಿದ್ದ ಸಂಗೀತ ಸಮ್ಮೇಳನದಲ್ಲೂ ನೀಡಿರುವ ಕಾರ್ಯಕ್ರಮ ಅವರ ನೆನಪಿನಲ್ಲಿ ಉಳಿದಿವೆ.

ರಾಜ್ಯವಷ್ಟೇ ಅಲ್ಲದೆ ಹೊರರಾಜ್ಯದ ಸಂಗೀತ ಪ್ರೇಮಿಗಳು ಕೂಡ ಇವರು ನುಡಿಸುವ ನಾದಸ್ವರಕ್ಕೆ ಕಿವಿಯಾಗಿದ್ದಾರೆ. ತಮಿಳುನಾಡಿನ ವಿವಿಧ ಕಡೆಗಳಲ್ಲಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಎರಡು ಬಾರಿ ಪ್ರದರ್ಶನ ನೀಡಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ರಂಗಸ್ವಾಮಿ ಅವರು.

2007ರಲ್ಲಿ ‘ಕರ್ನಾಟಕ ಸವಿತಾ ಕಲಾನಿಧಿ ಪ್ರಶಸ್ತಿ’, ‘ನಾದಸ್ವರ ಕಲಾ ಪ್ರವೀಣ ಪ್ರಶಸ್ತಿ’, ನಂಜನಗೂಡು ಶಿವಶರಣ ಹಡಪದ ಅಪ್ಪಣ್ಣನವರ ಸೇವಾ ಸಮಿತಿಯ ‘ಕಲಾಶ್ರೀ ಪ್ರಶಸ್ತಿ’ಗಳು ಇವರ ಮುಡಿಗೇರಿವೆ. ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಹೊಸ ಸೇರ್ಪಡೆ. ಜಿಲ್ಲೆ, ಹೊರಜಿಲ್ಲೆಗಳ ಸಂಘ ಸಂಸ್ಥೆಗಳು ಕೂಡ ಇವರ ಸಂಗೀತ ಸಾಧನೆಯನ್ನು ಗುರುತಿಸಿ ಗೌರವಿಸಿವೆ.

ಶಿಷ್ಯರಿಗೆ ಸಂಗೀತ ಧಾರೆ
ಆರ್.ರಂಗಸ್ವಾಮಿ ಅವರು ತಮ್ಮ ಮಗ ಶ್ರೀಧರ್‌ ಸೇರಿದಂತೆ 35 ಮಂದಿಗೆ ತಮ್ಮ ನಾದಸ್ವರದ ಜ್ಞಾನವನ್ನು ಧಾರೆ ಎರೆದಿದ್ದಾರೆ. ಈಗ ಅವರ ಜೊತೆಗೆ ಅವರ ಮಗನೂ ಸಂಗೀತಸೇವೆಯನ್ನು ಮುಂದುವರಿಸುತ್ತಿದ್ದಾರೆ.

‘35 ಶಿಷ್ಯರನ್ನು ತಯಾರು ಮಾಡಿದ್ದೇನೆ. ನಮ್ಮಲ್ಲಿ ಬಂದು ನಾದಸ್ವರ ಕಲಿತು ಈಗ ಬೇರೆ, ಬೇರೆ ಕಡೆಗಳಿಗೆ ಹೋಗಿದ್ದಾರೆ. ಸದ್ಯ ಇಬ್ಬರು ಮನೆಗೆ ಬಂದು ನಾದಸ್ವರ ಕಲಿಯುತ್ತಿದ್ದಾರೆ. ನಾವು ವಂಶಪಾರಂಪೈರ್ಯವಾಗಿ ಸಂಗೀತ ಸೇವೆ ಮಾಡುತ್ತಾ ಬಂದಿರುವುದರಿಂದ ಮುಂದಿನ ಪೀಳಿಗೆಗೂ ಅದು ಮುಂದುವರಿಯಬೇಕು ಎಂಬ ಉದ್ದೇಶದಿಂದ ನನ್ನ ಮಗನಿಗೂ ನಾದಸ್ವರ ಕಲಿಸಿದ್ದೇನೆ’ ಎಂದು ರಂಗಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

*
ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಸರ್ಕಾರ ನನ್ನ ಸಂಗೀತ ಸೇವೆಯನ್ನು ಗುರುತಿಸಿರುವುದಕ್ಕೆ ಹೆಮ್ಮೆ ಇದೆ
–ಆರ್‌.ರಂಗಸ್ವಾಮಿ, ನಾದಸ್ವರ ವಿದ್ವಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT