ಶುಕ್ರವಾರ, ಡಿಸೆಂಬರ್ 4, 2020
22 °C
ವನ್ಯಜೀವಿಗಳ ಹಾವಳಿ; ಮೂಲಸೌಕರ್ಯ ಕೊರತೆ

ಚಂಗಡಿ ಗ್ರಾಮ ಸ್ಥಳಾಂತರ: 4 ವರ್ಷಗಳ ಹೋರಾಟ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

ಚಂಗಡಿ ಗ್ರಾಮದ ಉಪಗ್ರಹ ಆಧರಿತ ನಕ್ಷೆ

ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿರುವ ಕುಗ್ರಾಮ ಚಂಗಡಿ ಗ್ರಾಮವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಮನವಿ ಸಲ್ಲಿಸಿದ್ದರೂ ಅದಕ್ಕೆ ಸಮ್ಮತಿ ನೀಡಲು, ಸರ್ಕಾರ ನಾಲ್ಕು ವರ್ಷಗಳ ಸಮಯ ತೆಗೆದುಕೊಂಡಿತ್ತು.

ಸದ್ಯ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಪುನರ್ವಸತಿಗಾಗಿ ಗುರುತಿಸಲಾಗಿದ್ದ ಜಾಗಕ್ಕೆ ಸಂಬಂಧಿಸಿದಂತೆ ಸಮಸ್ಯೆ ಆಗಿರುವುದರಿಂದ ಬೇರೆ ಜಾಗ ಹುಡುಕುವ ಅನಿವಾರ್ಯತೆ ಉಂಟಾಗಿದೆ. 2021ರ ಒಳಗಾಗಿ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸುವ ಆಶಯವನ್ನು ಈ ಹಿಂದೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ವ್ಯಕ್ತಪಡಿಸಿತ್ತು. ಆದರೆ, ಈಗ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಮೂಲ ಸೌಕರ್ಯಗಳ ಕೊರತೆ ಹಾಗೂ ವನ್ಯಜೀವಿಗಳ ಹಾವಳಿಯಿಂದ ಬೇಸತ್ತ ಗ್ರಾಮಸ್ಥರು, ಗ್ರಾಮವನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ 2015ರಿಂದ ಮನವಿ ಮಾಡುತ್ತಲೇ ಬಂದಿದ್ದರು. ಈ ವರ್ಷದ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಇಡೀ ಗ್ರಾಮದ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿತ್ತು. ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸುವುದಕ್ಕಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ 13 ಸದಸ್ಯರನ್ನು ಒಳಗೊಂಡ ಜಿಲ್ಲಾ ಮಟ್ಟದ ಪುನರ್ವಸತಿ ಸಮಿತಿ ರಚಿಸಿತ್ತು. 

ಆ ನಂತರ, ಇದುವರೆಗೆ ಸಮಿತಿಯು ಎರಡು ಬಾರಿ ಸಭೆ ಸೇರಿದೆ. 906.187 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಮಲೆ ಮಹದೇಶ್ವರ ವನ್ಯಧಾಮದ ಕೋರ್‌ ವಲಯ ಹಾಗೂ ನಿರ್ಣಾಯಕ ವನ್ಯಜೀವಿ ಆವಾಸದ ವ್ಯಾಪ್ತಿಯಲ್ಲಿ ಈ ಗ್ರಾಮವಿದೆ. 226 ಕುಟುಂಬಗಳು ಇಲ್ಲಿದ್ದು, ಈ ಪೈಕಿ 65 ಕುಟುಂಬಗಳು ವಲಸೆ ಹೋಗಿವೆ. 195 ಕುಟುಂಬಗಳು ಸ್ಥಳಾಂತರಕ್ಕೆ ಈಗಾಗಲೇ ಒಪ್ಪಿಗೆ ಸೂಚಿಸಿವೆ. 

₹29.25 ಕೋಟಿ ವೆಚ್ಚದಲ್ಲಿ ಗ್ರಾಮಸ್ಥರ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಯೋಜನೆ ರೂಪಿಸಿದ್ದು, ಪುನರ್ವಸತಿಗಾಗಿ ಎರಡು ಪರಿಹಾರ ಪ್ಯಾಕೇಜ್‌ಗಳನ್ನು ಮುಂದಿಟ್ಟಿದೆ. ಕುಟುಂಬವೊಂದಕ್ಕೆ ₹15 ಲಕ್ಷ ನಗದು ಕೊಡುವುದು ಮತ್ತು ಇನ್ನೊಂದು, ನಿಗದಿತ ಸ್ಥಳದಲ್ಲಿ ಮೂರು ಎಕರೆ ಜಮೀನು, ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವುದು. 

‘ನಾಲ್ಕು ವರ್ಷಗಳಿಂದ ಮನವಿ ಮಾಡುತ್ತ ಬಂದಿದ್ದೆವು. ಕುಟುಂಬಗಳ ಪುನರ್ವಸತಿಗಾಗಿ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಬಳಿಯ ಸರ್ವೆ ನಂಬರ್‌ 326ರಲ್ಲಿ ಸರ್ಕಾರಿ ಜಾಗ ಗುರುತಿಸಲಾಗಿತ್ತು. ಎಲ್ಲರಿಗೂ ಪುನರ್ವಸತಿ ಕಲ್ಪಿಸುವಷ್ಟು ಜಮೀನು ಅಲ್ಲಿ ಲಭ್ಯವಿಲ್ಲ ಎಂಬ ಮಾಹಿತಿ ಇದೆ. ಹೊಸ ಸ್ಥಳವನ್ನು ಹುಡುಕಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.  ಆದಷ್ಟು ಬೇಗ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಚಂಗಡಿ ಗ್ರಾಮದ ರೈತ ಮುಖಂಡ ಕರಿಯಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪುನರ್ವಸತಿ ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ, ‘ಎರಡು ಸಭೆಗಳನ್ನು ನಡೆಸಿದ್ದೇವೆ. ಉಸ್ತುವಾರಿ ಸಚಿವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿದ್ದಾರೆ. ಗ್ರಾಮದ ಸರ್ವೆ ಕಾರ್ಯಕ್ಕೆ ಸೂಚನೆ ನೀಡಲಾಗಿದೆ. ಇನ್ನೊಂದು ಸಭೆ ಶೀಘ್ರದಲ್ಲಿ ನಡೆಯಲಿದೆ’ ಎಂದು ಹೇಳಿದರು. 

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಸೌಲಭ್ಯ ವಂಚಿತ ಹಲವು ಗ್ರಾಮಗಳಿವೆ. ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆದಗನಾಣೆ, ಪಡಸಲನತ್ತ ಗ್ರಾಮದ ಜನರು ಕೂಡ ಸ್ವಯಂ ಪ್ರೇರಿತರಾಗಿ ಸ್ಥಳಾಂತರಕ್ಕೆ ಮುಂದೆ ಬಂದಿದ್ದು, ಚಂಗಡಿ ಗ್ರಾಮದ ಸ್ಥಳಾಂತರಕ್ಕಾಗಿ ಕಾಯುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು