ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ಬೆಂಬಲ ಬೆಲೆ: ಭತ್ತ, ರಾಗಿ ಖರೀದಿ ಅವಧಿ ಮಾ 31ರವರೆಗೆ ವಿಸ್ತರಣೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 22 ಖರೀದಿ ಕೇಂದ್ರಗಳು ಆರಂಭ
Last Updated 26 ಫೆಬ್ರುವರಿ 2021, 14:35 IST
ಅಕ್ಷರ ಗಾತ್ರ

ಚಾಮರಾಜನಗರ: ಕನಿಷ್ಠಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಮತ್ತು ರಾಗಿ ಖರೀದಿಸುವ ಅವಧಿಯನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಜೊತೆಗೆ ಈಗಇರುವ ಒಂಬತ್ತು ಖರೀದಿ ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 22 ಖರೀದಿ ಕೇಂದ್ರಗಳನ್ನು ಹೋಬಳಿ ಕೇಂದ್ರ ಸ್ಥಾನಗಳಲ್ಲಿ ತೆರೆಯಲಾಗಿದೆ.

ಅಗತ್ಯಕ್ಕೆ ಅನುಗುಣವಾಗಿ ತಾಲ್ಲೂಕುವಾರು ಮತ್ತು ಹೋಬಳಿವಾರು ರೈತರ ಉತ್ಪಾದನೆಯ ಲಭ್ಯತೆಗೆ ಅನುಗುಣವಾಗಿ ಅಗತ್ಯ ಸಂಖ್ಯೆಯ ಖರೀದಿ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈಗಾಗಲೇ ಇರುವ ಖರೀದಿ ಕೇಂದ್ರಗಳ ಜೊತೆಗೆ ಜಿಲ್ಲೆಯ ಹೋಬಳಿ ಕೇಂದ್ರ ಸ್ಥಾನಗಳಲ್ಲಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಎಸಿಎಸ್), ಗಿರಿಜನರ ವಿವಿಧೋದ್ದೇಶ ಸಹಕಾರ ಸಂಘಗಳ (ಲ್ಯಾಂಪ್ಸ್ ಸೊಸೈಟಿ) ಮೂಲಕ ಭತ್ತ ಮತ್ತು ರಾಗಿ ಖರೀದಿಸಲಾಗುತ್ತದೆ.

ಚಾಮರಾಜನಗರ, ಕೊಳ್ಳೇಗಾಲ ತಾಲ್ಲೂಕಿನ ಒಂದು ಟಿಎಪಿಸಿಎಂಎಸ್ನಲ್ಲಿ, ಚಾಮರಾಜನಗರ, ಗುಂಡ್ಲುಪೇಟೆ ತಾಲ್ಲೂಕು ವ್ಯಾಪ್ತಿಯ ಐದು ಪಿಎಸಿಎಸ್ನಲ್ಲಿ, ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ತಾಲ್ಲೂಕಿನ ತಲಾ ಎರಡು ಪಿಎಸಿಎಸ್ನಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಭತ್ತ, ರಾಗಿಯನ್ನು ಖರೀದಿಸಲಾಗುತ್ತದೆ. ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ಹನೂರು ತಾಲ್ಲೂಕಿನ ತಲಾ ಒಂದು ಲ್ಯಾಂಪ್ಸ್ ಸೊಸೈಟಿಯಲ್ಲೂ ಖರೀದಿ ಕೇಂದ್ರ ತೆರೆಯಲಾಗಿದೆ.

ಗರಿಷ್ಠ ಮಿತಿ ತೆರವು:ವಿಶೇಷವಾಗಿ ರೈತರು ಬೆಳೆದಿರುವ ಜ್ಯೋತಿ ಭತ್ತವನ್ನೂ ಸಹ ಖರಿದೀಸಲಾಗುವುದು. ಮಾದರಿ ಒಪ್ಪಿಗೆಯಾದಲ್ಲಿ ಕೊಳ್ಳೇಗಾಲದ ಶ್ರೀ ಲಕ್ಷ್ಮಿ ವೆಂಕಟೇಶ್ವರ ರೈಸ್‍ಮಿಲ್‍ಗೆ ಭತ್ತ ನೀಡಬಹುದಾಗಿದೆ. ಭತ್ತ ಮತ್ತು ರಾಗಿಗೆ ನಿಗದಿಪಡಿಸಲಾಗಿದ್ದ ಗರಿಷ್ಠ ಮಿತಿಯನ್ನು ತೆರವುಗೊಳಿಸಲಾಗಿದ್ದು, ಪ್ರತಿ ಎಕರೆಗೆ 25 ಕ್ವಿಂಟಲ್ ಭತ್ತ, ಪ್ರತಿ ಎಕರೆಗೆ 10 ಕ್ವಿಂಟಲ್ ರಾಗಿ ನೀಡಬಹುದಾಗಿದೆ. ಗರಿಷ್ಠ ಮಿತಿ ತೆರವುಗೊಳಿಸಲಾಗಿರುವುದರಿಂದ ಹಾಗೂ ರಾಗಿಗೆ ಹೆಚ್ಚು ಬೆಂಬಲ ಬೆಲೆ ಘೋಷಿಸಿರುವುದರಿಂದ ಜಿಲ್ಲೆಯ ರೈತ ಬಾಂಧವರು ಹೆಚ್ಚಿನ ಪ್ರಮಾಣದಲ್ಲಿ ಭತ್ತ, ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ನೀಡುವ ಮೂಲಕ ಸರ್ಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT