ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ| ಮಳೆ ಬಂದರೆ ಕೆರೆಯಂತಾಗುವ ಹೆಗ್ಗವಾಡಿಪುರದ ಬಡಾವಣೆ

ಸಂತೇಮರಹಳ್ಳಿ: ಹೆಗ್ಗವಾಡಿಪುರದ ವೀರಶೈವರ ಬಡಾವಣೆಯಲ್ಲಿ ರಸ್ತೆ, ಚರಂಡಿಯ ಸ್ಥಿತಿ ಇದು
Last Updated 1 ಜೂನ್ 2020, 1:51 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಮಳೆ ಬಂತೆಂದರೆ ಬಡಾವಣೆ ಕೆರೆಯಾಗಿ ಪರಿವರ್ತನೆಯಾಗುತ್ತದೆ. ನಿವಾಸಿಗಳು ಮನೆಯಿಂದ ಹೊರ ಬಂದಾಗ ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲೇ ಓಡಾಡಬೇಕಾಗುತ್ತದೆ.

ಹೋಬಳಿಯ ಹೆಗ್ಗವಾಡಿಪುರದ ವೀರಶೈವರ ಬಡಾವಣೆಯ ಕಥೆ ಇದು. ಇಲ್ಲಿನ ನಿವಾಸಿಗಳು ರಸ್ತೆ ಹಾಗೂ ಚರಂಡಿಗಾಗಿ ಹಲವು ವರ್ಷಗಳಿಂದ ಹಂಬಲಿಸುತ್ತಿದ್ದಾರೆ. ಆದರೆ, ಅದಿನ್ನೂ ಈಡೇರಿಲ್ಲ.

ಈಗ ಮತ್ತೆ ಮಳೆಗಾಲ ಆರಂಭವಾಗಿದೆ. ಬಡಾವಣೆ ವ್ಯಾಪ್ತಿಯಲ್ಲಿ ಮಳೆ ನೀರು ಗ್ರಾಮದಿಂದ ಹೊರ ಹೋಗುವ ವ್ಯವಸ್ಥೆ ಇಲ್ಲ. ಪರಿಣಾಮವಾಗಿ ನೀರು ಬಡಾವಣೆಯನ್ನು ಆವರಿಸಿ ಜನ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಯಾಗುತ್ತಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಬಡಾವಣೆಯ ನಿವಾಸಿಗಳು ಈ ಯಾತನೆಯನ್ನು ಅನುಭವಿಸುತ್ತಿದ್ದಾರೆ.

ಇಲ್ಲಿ 250 ಕುಟುಂಬಗಳು ವಾಸ ಇದ್ದು, ಪ್ರಮುಖವಾಗಿ ಮೂರು ರಸ್ತೆಗಳಲ್ಲಿ ನಿವಾಸಿಗಳು ವಾಸಿಸುತ್ತಿದ್ದಾರೆ. ಈ ರಸ್ತೆಗಳು ಉತ್ತಮ ಚರಂಡಿ ವ್ಯವಸ್ಥೆ ಹೊಂದಿಲ್ಲ. ಕೆಲವು ಬಡಾವಣೆಗಳಲ್ಲಿ ಅವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸಲಾಗಿದೆ. ಇದರಿಂದ ಮಳೆನೀರು ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗುತ್ತಿಲ್ಲ. ಮಳೆ ಬಿದ್ದಾಗ ನೀರು ಮುಖ್ಯ ರಸ್ತೆಯಲ್ಲಿ ಬಂದು ಶೇಖರಣೆಯಾಗುತ್ತಿದೆ. ಇದರಿಂದ ಬಡಾವಣೆ ಜಲಾವೃತವಾಗಿ ಜನಸಂಚಾರಕ್ಕೆ ತೊಂದರೆಯಾಗುತ್ತಿದೆ.

ಮಳೆಗಾಲದ ಸಮಯದಲ್ಲಿ ದ್ವಿಚಕ್ರ ಸೇರಿದಂತೆ ಯಾವುದೇ ವಾಹನಗಳು ಓಡಾಡಲು ಸಾಧ್ಯವಾಗುವುದಿಲ್ಲ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತದೆ. ನಿವಾಸಿಗಳು ತಮ್ಮ ಮನೆ ಮುಂಭಾಗ ಮಣ್ಣಿನ ಕಟ್ಟೆ ನಿರ್ಮಿಸಿಕೊಂಡು ಮಳೆ ನೀರಿನಿಂದ ರಕ್ಷಣೆ ಪಡೆಯುತ್ತಿದ್ದಾರೆ.

‘ಚರಂಡಿಗಳನ್ನು ಸಮರ್ಪಕವಾಗಿ ನಿರ್ಮಿಸಿಲ್ಲ. ಮನೆಗಳಲ್ಲಿ ಉತ್ಪತ್ತಿಯಾ ಗುವ ತ್ಯಾಜ್ಯ ನೀರು ಚರಂಡಿಯ ಮೂಲಕ ಗ್ರಾಮದಿಂದ ಹೊರಕ್ಕೆ ಹೋಗುತ್ತಿಲ್ಲ. ಚರಂಡಿಯಲ್ಲಿ ಕೊಳಚೆ ನೀರು ನಿಂತಲ್ಲಿಯೇ ನಿಂತು ದುರ್ವಾಸನೆ ಬೀರುತ್ತಿದೆ. ಪ್ಲಾಸ್ಟಿಕ್ ಬಾಟಲಿಗಳು, ಕಸಕಡ್ಡಿಗಳು ಹೂಳು ತುಂಬಿ ಬಡಾವಣೆಯ ಅನೈರ್ಮಲ್ಯಕ್ಕೆ ಕಾರಣವಾಗಿದೆ. ಕೊಳಚೆ ನೀರು ಮಳೆ ನೀರಿನೊಂದಿಗೆ ಬೆರೆತು ಮನೆಗಳಿಗೆ ನುಗ್ಗುವಂತಾಗಿದೆ. ಚರಂಡಿಯ ಹೂಳು ತೆಗೆದು ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡಿ ದ್ದರೂ ಪ್ರಯೋಜನ ವಾಗಿಲ್ಲ’ ಎಂದು ನಿವಾಸಿಗಳು ದೂರುತ್ತಾರೆ.

‘ಚರಂಡಿಯ ಕೊನೆಗೊಳ್ಳುವ ಭಾಗದಲ್ಲಿ ನೀರು ಹರಿದು ಹೋಗುತ್ತಿಲ್ಲ. ಚರಂಡಿ ಸುತ್ತಲೂ ಕಳೆ ಗಿಡಗಳು ಬೆಳೆದು ಹೂಳು ತುಂಬಿಕೊಂಡಿದೆ. ನೀರು ಕಟ್ಟಿಕೊಂಡಿರುವುದರಿಂದ ಮನೆಯ ಗೋಡೆಗಳು ತೇವವಾಗುತ್ತಿವೆ. ಇದರಿಂದ ಗೋಡೆಗಳು ಕುಸಿಯುವ ಹಂತದಲ್ಲಿವೆ’ ಎಂದು ನಿವಾಸಿ ಮಹದೇವಪ್ಪ ಹೇಳಿದರು.

ಪ್ರತಿಭಟನೆಯ ಎಚ್ಚರಿಕೆ

‘ಪ್ರತಿ ಗೌರಿ-ಗಣೇಶ ಹಬ್ಬದ ಸಮಯದಲ್ಲಿ ವರ್ಷಕೊಮ್ಮೆ ಮಾತ್ರ ಚರಂಡಿಯಲ್ಲಿ ಹೂಳು ತೆಗೆದು ಸ್ವಚ್ಛಗೊಳಿಸುತ್ತಾರೆ. ಬಡಾವಣೆಯ ಚರಂಡಿ ಸ್ವಚ್ಛಗೊಳಿಸಲು ಅಧಿಕಾರಿಗಳು ಗಮನ ಹರಿಸಬೇಕು’ ಮುಖಂಡ ಚಿನ್ನಸ್ವಾಮಿ ಒತ್ತಾಯಿಸಿದರು.

ಚರಂಡಿ ಹಾಗೂ ರಸ್ತೆ ವ್ಯವಸ್ಥೆ ಇಲ್ಲದೇ ಮನೆಗಳಿಗೆ ಮಳೆನೀರು ನುಗ್ಗುವ ಸ್ಥಿತಿ ಇದೆ. ರಸ್ತೆ ಹಾಗೂ ಚರಂಡಿಯನ್ನು ದುರಸ್ತಿಗೊಳಿಸಬೇಕು ಎಂದು ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡಿದ್ದರೂ ಗಮನಹರಿಸಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ನಮ್ಮ ಸಮಸ್ಯೆ ತಿಳಿಸಿದ್ದೇವೆ. ಇದುವರೆಗೆ ಯಾರೂ ಇಲ್ಲಿಗೆ ಬಂದಿಲ್ಲ. ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ಮುಖಂಡ ವಿನಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ನಿವಾಸಿಗಳು ಸಹಕರಿಸುತ್ತಿಲ್ಲ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ಅವರು, ‘ಬಡಾವಣೆಯಲ್ಲಿ ರಸ್ತೆ, ಚರಂಡಿ ಸಮಸ್ಯೆ ಬಗೆ ಹರಿಸಲು ಎಲ್ಲ ನಿವಾಸಿಗಳು ಸರಿಯಾಗಿ ಸಹಕಾರ ನೀಡುತ್ತಿಲ್ಲ. ಅವರ ಮನವೊಲಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT