ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆರವು ನೀಡುವ ಕೈಗಳನ್ನು ಪ್ರೋತ್ಸಾಹಿಸಿ’

ರೋಟರಿ ಸಿಲ್ಕ್‌ ಸಿಟಿ: ಮುರುಗೇಂದ್ರಸ್ವಾಮಿ ತಂಡಕ್ಕೆ ಪದವಿ ಪ್ರದಾನ
Last Updated 26 ಜೂನ್ 2022, 16:17 IST
ಅಕ್ಷರ ಗಾತ್ರ

ಚಾಮರಾಜನಗರ: 'ಹಲವುಕಾಣದ ಕೈಗಳು ರೋಟರಿ ಸಂಸ್ಥೆಗೆ ಸಹಕಾರ ನೀಡುತ್ತಿವೆ. ಅವುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕು’ ಎಂದು ರೋಟರಿ ಜಿಲ್ಲೆ 3181ರ ನಿಯೋಜಿತ ಜಿಲ್ಲಾ ಗವರ್ನರ್‌ ಪಿ.ಎಚ್.ಎಂ.ವಿಕ್ರಂ ದತ್ತ ಅವರು ಭಾನುವಾರ ಅಭಿಪ್ರಾಯಪಟ್ಟರು.

ರೋಟರಿ ಸಿಲ್ಕ್ ಸಿಟಿಯ 2022–23ನೇ ಸಾಲಿನ ಅಧ್ಯಕ್ಷ ಎಂ.ಜಿ.ಮುರುಗೇಂದ್ರಸ್ವಾಮಿ ಮತ್ತು ತಂಡದವರಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ‘ಜೀವನದಲ್ಲಿ ವಿದ್ಯೆ, ಶ್ರೀಮಂತಿಕೆ/ಬಡತನ, ಗೌರವ ಹಾಗೂ ಮುಪ್ಪು/ ಸಾವು ಎಂಬ ನಾಲ್ಕು ಗೆಳೆಯರು ಇರುತ್ತಾರೆ. ವಿದ್ಯೆ ನಮ್ಮನ್ನು ಎಂದೂ ಕೈಬಿಡುವುದಿಲ್ಲ. ಶ್ರೀಮಂತಿಗೆ ಅಥವಾ ಬಡತನ ಬಂದು ಹೋಗುತ್ತದೆ. ಗೌರವಕ್ಕೆ ಚ್ಯುತಿ ಬರುವ ಯಾವ ಕೆಲಸವನ್ನೂ ನಾವು ಮಾಡಬಾರದು. ಮುಪ್ಪು, ಸಾವು ಬಂದೇ ಬರುತ್ತದೆ. ಈ ನಾಲ್ವರೂ ಗೆಳೆಯರನ್ನು ಜೊತೆಯಾಗಿಟ್ಟುಕೊಂಡು ನಾವು ಒಳ್ಳೆಯ ಜೀವನ ನಡೆಸಬೇಕು’ ಎಂದರು.

ರೋಟರಿ ಸಂಸ್ಥೆಗೆ ಹಲವಾರು ಮಂದಿ ದುಡಿಯುತ್ತಿರುತ್ತಾರೆ. ಕೆಲವರು ನಮಗೆ ಗೊತ್ತಾಗದಂತೆ ನೆರವು ನೀಡುತ್ತಾ ಇರುತ್ತಾರೆ. ಅವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಸಂಸ್ಥೆಯ ಪದಾಧಿಕಾರಿಗಳು ಮಾಡಬೇಕು. ಆಗ ರೋಟರಿ ಭವಿಷ್ಯ ಉಜ್ವಲವಾಗುತ್ತದೆ’ ಎಂದರು.

ರೋಟರಿಸಿಲ್ಕ್ ಸಿಟಿ ನೂತನ ಅಧ್ಯಕ್ಷ ಎಂ.ಜಿ.ಮುರುಗೇಂದ್ರಸ್ವಾಮಿ ಅವರು ಮುಂದಿನ ಒಂದು ವರ್ಷ ಯೋಜನೆಗಳನ್ನು ವಿವರಿಸಿದರು.

‘ರೋಟರಿಸಿಲ್ಕ್ ಸಿಟಿ ವತಿಯಿಂದ ಅರಣ್ಯ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ವನಸಿರಿ, ನೀರು ಉಳಿಸುವ ನಿಟ್ಟಿನಲ್ಲಿ ಜಲಸಿರಿ, ಆರೋಗ್ಯ ತಪಾಸಣೆ ಶಿಬಿರ, ಶೈಕ್ಷಣಿಕ ಚಟುವಟಿಕೆ ಉತ್ತೇಜಿಸುವ ವಿದ್ಯಾಸಿರಿ, ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ವಲಯ-9ರ ಪ್ರತಿನಿಧಿ ಆರ್.ಎಂ.ಸ್ವಾಮಿ ಮಾತನಾಡಿ, ‘ನೂತನ ಅಧ್ಯಕ್ಷರು ತಂಡದ ಸದಸ್ಯರ ಸಹಕಾರ ಪಡೆದು ಸಂಸ್ಥೆಯಿಂದ ಹಲವಾರು ಜನಪರ ಕಾರ್ಯಕ್ರಮ ಹಮ್ಮಿಕೊಂಡು, ಸಂಸ್ಥೆಯನ್ನು ಎತ್ತರಕ್ಕೇರಿಸಬೇಕು’ ಎಂದು ಕಿವಿಮಾತು ಹೇಳಿದರು.

ಸಹಾಯಕ ಗವರ್ನರ್‌ ಡಾ.ಉಮಾಶಂಕರ್‌ ಮಾತನಾಡಿ, ‘ರೋಟರಿ ಸಂಸ್ಥೆಯಲ್ಲಿ ಒಂದೇ ವರ್ಷ ಮಾತ್ರ ಅಧ್ಯಕ್ಷ ಸ್ಥಾನ ಸಿಗುತ್ತದೆ. ಬೇರೆ ಯಾವ ಸಂಸ್ಥೆಯಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ. ಪ್ರಪಂಚದಾದ್ಯಂತ ರೋಟರಿ ಸಂಸ್ಥೆ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹಲವು ಸಮಾಜ ಸೇವೆಗಳನ್ನು ಮಾಡುತ್ತಿದೆ. ಇದರಲ್ಲಿ ಸಕ್ರಿಯವಾಗಿರುವವರನ್ನು ಸಮಾಜವೂ ಗುರುತಿಸುತ್ತಿದೆ’ ಎಂದರು.

ನೂತನ ಕಾರ್ಯದರ್ಶಿ,ಆರ್.ಎಸ್.ಶ್ರೀಧರ್, ತಂಡದ ನೂತನ ಸದಸ್ಯರು, ನಿಕಟಪೂರ್ವ ಅಧ್ಯಕ್ಷ ಎ.ಎಸ್.ರವಿ, ಕಾರ್ಯದರ್ಶಿ ಅಕ್ಷಯ್‌, ಸದಸ್ಯರಾದ ದೊಡ್ಡರಾಯಪೇಟೆ ಗಿರೀಶ್, ರವಿಶಂಕರ್, ಅಜಯ್‌ ಹೆಗ್ಗವಾಡಿಪುರ, ಆಲೂರು ಪ್ರದೀಪ್‌ ಸೇರಿದಂತೆ ರೋಟರಿ ಸಿಲ್ಕ್ ಸಿಟಿ ಜಿಲ್ಲೆಯ ತಾಲ್ಲೂಕು ಘಟಕಗಳ ಅಧ್ಯಕ್ಷರು, ಸದಸ್ಯರು, ಸಂಘಸಂಸ್ಥೆಗಳ ಮುಖಂಡರು ಇದ್ದರು.

ಸಾಧಕರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ

ಸಮಾರಂಭದಲ್ಲಿ ವನ್ಯಜೀವಿ ಮಂಡಳಿ ಸದಸ್ಯ ಜಿ.ಮಲ್ಲೇಶಪ್ಪ, ಪತ್ರಕರ್ತ ಬನಶಂಕರ ಆರಾಧ್ಯ, ನಾದಸ್ವರ ಕಲಾವಿದ ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಮಲ್ಲೇಶಪ್ಪ ಹಾಗೂ ಬನಶಂಕರ ಆರಾಧ್ಯ ಅವರು ಅನಿಸಿಕೆಗಳನ್ನು ಹಂಚಿಕೊಂಡರು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಸ್ಥೆಯ ಸದಸ್ಯರ ಮಕ್ಕಳಾದ ಅಮೋಘ್ ಹಾಗೂ ಅಂಜಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರೋಟರಿ ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಶಮಿತ್‌ಕುಮಾರ್, ಬಸವರಾಜು, ರಾಜು ಅವರಿಗೆ ಪ್ರಮಾಣ ವಚನ ಬೋಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT