ಸೋಮವಾರ, ಮೇ 16, 2022
30 °C

ಸರಿಯಾಗಿ ಸಂಬಳ ಕೊಡುತ್ತಿಲ್ಲ, ಕೆಲಸ ಕಾಯಂ ಮಾಡಿ... ಪೌರಕಾರ್ಮಿಕರ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಮ್ಮ ಕೆಲಸವನ್ನು ಕಾಯಂ ಮಾಡಿ, ಸರಿಯಾಗಿ ಸಂಬಳ ಕೊಡುತ್ತಿಲ್ಲ. ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ. ಕಾಲೋನಿಯಲ್ಲಿ ಮೂಲ ಸೌಕರ್ಯಗಳಿಲ್ಲ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೂ ನಿವೇಶನ, ಮನೆ ಕೊಡಿ....

ನಗರಕ್ಕೆ ಭೇಟಿ ನೀಡಿದ್ದ ರಾಜ್ಯ ಸಫಾಯಿ ಕರ್ಮಾಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ (ಕೋಟೆ) ಅವರ ಎದುರು ಜಿಲ್ಲೆಯ ಪೌರಕಾರ್ಮಿಕರು ಇಟ್ಟ ಬೇಡಿಕೆಗಳು ಹಾಗೂ ದೂರುಗಳಿವು.

ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ನಡೆದ ಸಂವಾದದಲ್ಲಿ ಪೌರ ಕಾರ್ಮಿಕರು ತಾವು ಎದುರಿಸುತ್ತಿರುವ ಸಂಕಷ್ಟಗಳ ಸರಮಾಲೆಯನ್ನೇ ಬಿಚ್ಚಿಟ್ಟರು. ಆಯುಕ್ತರು ಹಾಗೂ ಆರೋಗ್ಯ ನಿರೀಕ್ಷಕರು ಸೇರಿದಂತೆ ಅಧಿಕಾರಿಗಳ ವಿರುದ್ಧ ಆರೋಪಗಳನ್ನೂ ಸಂವಾದಕ್ಕೂ ಮುನ್ನ ಶಿವಣ್ಣ ಅವರು ಚಾಮರಾಜನಗರದಲ್ಲಿರುವ ಪೌರ ಕಾರ್ಮಿಕರ ಕಾಲೊನಿಗೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಿದರು. ಅವರು ಎದುರಿಸುತ್ತಿರುವ ಕಷ್ಟಗಳನ್ನು ಕಣ್ಣಾರೆ ಕಂಡರು.

ಸಂವಾದ ಕಾರ್ಯಕ್ರಮಕ್ಕೆ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ,ಮಹದೇಶ್ವರ ಬೆಟ್ಟ ಸೇರಿದಂತೆ ವಿವಿಧ ಕಡೆಗಳಿಂದ ಪೌರ ಕಾರ್ಮಿಕರು ಬಂದಿದ್ದರು.

ಮಹದೇಶ್ವರ ಬೆಟ್ಟದ ಪೌರಕಾರ್ಮಿಕ ಮುರುಗೇಶ್ ಅವರು ಮಾತನಾಡಿ, ‘ನನ್ನ ಮಗುವಿಗೆ ಗುದದ್ವಾರದ ರಂದ್ರ ಮುಚ್ಚಿ ಹೋಗಿದ್ದು, ಈಗಾಗಲೇ ₹3.5 ಲಕ್ಷ ಖರ್ಚು ಮಾಡಿ ಆಪರೇಷನ್ ಮಾಡಿಸಿದ್ದೇನೆ. ಈಗಾಗಲೇ ನಾಲ್ಕು ಆಪರೇಷನ್ ಆಗಿದೆ. ಹೃದಯದ ಆಪರೇಷನ್ ಮಾಡಿಸುವಂತೆ ವೈದ್ಯರು ಸೂಚಿಸಿದ್ದಾರೆ. ನನ್ನ ಬಳಿ ಹಣ ಇಲ್ಲ’ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಮಲೆಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು ಅವರು, ‘ಇದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಎಷ್ಟು ಹಣ ಖರ್ಚಾಗುತ್ತದೆ ಎಂದು ಮಾಹಿತಿ ಕೊಟ್ಟರೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಕ್ರಮವಹಿಸಲಾಗುವುದು’ ಎಂದರು.

ಶಿವಮ್ಮ ಹಾಗೂ ಸರಸ್ವತಿ ಮಾತನಾಡಿ, ‘ಚಾಮರಾಜನಗರ ನಗರಸಭೆಯಲ್ಲಿ 19 ವರ್ಷಗಳಿಂದ ಕೆಲಸ ಮಾಡುತ್ತಿದ್ದೆವು. ಈಗ ನಮ್ಮನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಇದರಿಂದ ಜೀವನಕ್ಕೆ ತೊಂದರೆಯಾಗಿದೆ’ ಎಂದು ದುಃಖಿಸಿದರು.

ನಗರಸಭಾ ಆಯುಕ್ತ ರಾಜಣ್ಣ ಮಾತನಾಡಿ, ‘ಇಬ್ಬರ ದಾಖಲೆಗಳನ್ನು ಪರಿಶೀಲಿಸಿ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

‘ನನ್ನ ಗಂಡ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಈಗ ಅವರು ತೀರಿಕೊಂಡಿದ್ದಾರೆ. ನನಗೆ ಮೂರು ಮಕ್ಕಳಿದ್ದು ಕೆಲಸ ಇಲ್ಲದೇ ತೊಂದರೆಯಾಗಿದೆ’ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು. ಕೆಲಸ ಕೊಡಿಸುವಂತೆ ಮಾಡಿದ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಆಯುಕ್ತ ರಾಜಣ್ಣ ಅವರು ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ಮೂವರು ಪೌರಕಾರ್ಮಿಕರು ನಿಧನರಾಗಿದ್ದಾರೆ. ಇವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಬದಲಿ ಕೆಲಸಕ್ಕೆ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಪೌರಕಾರ್ಮಿಕ ನಾಗರಾಜು ಮಾತನಾಡಿ, ‘2002ರಿಂದಲೂ ಕೆಲಸ ಮಾಡುತ್ತಿದ್ದೇನೆ. ಹಿರಿತನದ ಪಟ್ಟಿಯಿಂದ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಿದ್ದಾರೆ. ನ್ಯಾಯ ಕೇಳಿದರೆ ಕಾರಣ ಕೇಳಿ ನೋಟಿಸ್ ಕೊಡುತ್ತಾರೆ. ಆದ್ದರಿಂದ ನನಗೆ ಕಾಯಂ ನೇಮಕಾತಿ ಮಾಡಿಕೊಳ್ಳಬೇಕು’ ಎಂದರು.

ಗುಂಡ್ಲುಪೇಟೆ ಪೌರಕಾರ್ಮಿಕ ಕುಮಾರ್ ಮಾತನಾಡಿ, ‘ನನಗೆ ಪಿಎಫ್, ಇಎಸ್‌ಐ ವ್ಯವಸ್ಥೆ ಇಲ್ಲ. ಸಂಬಳವನ್ನು ವಿಳಂಬವಾಗಿ ಕೊಡುತ್ತಾರೆ’ ದೂರಿದರು.

ಎಂ.ಶಿವಣ್ಣ ಪ್ರತಿಕ್ರಿಯಿಸಿ, ‘ಯಾರೂ ಭಯಪಡುವ ಅಗತ್ಯವಿಲ್ಲ. ಕಾನೂನಿನ ಅಡಿಯಲ್ಲಿ ಬರಬೇಕಾದ ಎಲ್ಲ ಸೌಲಭ್ಯಗಳನ್ನು ಕೊಡಿಸಲಾಗುವುದು. ತಪ್ಪು ಮಾಡುವ ಅಧಿಕಾರಿಗಳನ್ನು ಜೈಲಿಗೆ ಕಳಿಸುವ ಕಾನೂನು ಇದೆ’ ಎಂದು ಪೌರಕಾರ್ಮಿಕರನ್ನು ಸಮಾಧಾನ ಪಡಿಸಿದರು.

ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ರಮಾ, ನಗರಸಭಾ ಆಯುಕ್ತ ರಾಜಣ್ಣ, ನಗರಾಭಿವೃದ್ಧಿ ಕೋಶದ
ಯೋಜನಾ ನಿರ್ದೇಶಕ ಸುರೇಶ್ ಇತರರಿದ್ದರು.

ಹಕ್ಕು ಪತ್ರ ನೀಡಲು ಒತ್ತಾಯ
ನಗರಸಭೆಯ 9ನೇ ವಾರ್ಡ್‌ ಸದಸ್ಯ ಮಹೇಶ್‌ ಅವರು ಮಾತನಾಡಿ, ‘9ನೇ ವಾರ್ಡ್‌ನಲ್ಲಿರುವ ಪೌರ ಕಾರ್ಮಿಕರ ಕಾಲೊನಿಯಲ್ಲಿ ಹಲವಾರು ವರ್ಷಗಳಿಂದ ಕುಟುಂಬಗಳು ವಾಸುತ್ತಿದ್ದು, ಯಾವುದೇ ಕುಟುಂಬಗಳಿಗೆ ಹಕ್ಕು ಪತ್ರ ನೀಡಿಲ್ಲ. ಈ ಮನೆಗಳಲ್ಲಿ ವಾಸ ಮಾಡುತ್ತಿರುವ ಪೌರಕಾರ್ಮಿಕರ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ಕೊಡಿಸಬೇಕು’ ಎಂದು ಶಿವಣ್ಣ ಅವರಿಗೆ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು