ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲೂರು ಮಠ ಮೂರನೇ ವ್ಯಕ್ತಿ ಉತ್ತರಾಧಿಕಾರಿಯಾಗಲಿ

ಸುತ್ತಮುತ್ತಲ ಗ್ರಾಮಸ್ಥರ ಸಭೆ, ಗುರುಸ್ವಾಮಿ ಸಂಬಂಧಿ ಆಯ್ಕೆಗೆ ಪ್ರಯತ್ನ–ಆರೋಪ
Last Updated 5 ಆಗಸ್ಟ್ 2020, 15:12 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಸಾಲೂರು ಮಠದ ಪೀಠಾಧ್ಯಕ್ಷರಾದ ಗುರುಸ್ವಾಮಿ ಸಂಬಂಧಿ ಎಂ.ನಾಗೇಂದ್ರ ಎಂಬುವವರನ್ನು ಉತ್ತರಾಧಿಕಾರಿಯಾಗಿ ಮಾಡಲು ಮಠದ ಪ್ರಮುಖರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಕೆಲವು ಭಕ್ತರು, ಗುರುಸ್ವಾಮಿ ಹಾಗೂ ಈಗ ಜೈಲಿನಲ್ಲಿರುವ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಅವರ ಸಂಬಂಧಿಕರನ್ನು ಬಿಟ್ಟು ಮೂರನೇಯವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಬೇಕು ಎಂದು ಸಹಿ ಅಭಿಯಾನ ನಡೆಸಲು ಮುಂದಾಗಿದ್ದಾರೆ.

ಭಕ್ತರ ಸಹಿಗಳನ್ನೊಳಗೊಂಡ ಮನವಿ ಪತ್ರವನ್ನು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರಿಗೆ ಸಲ್ಲಿಸಲು ಅವರು ನಿರ್ಧರಿಸಿದ್ದಾರೆ.

ಕೆಲವು ಭಕ್ತರು ಬುಧವಾರ ಬೆಟ್ಟದಲ್ಲಿ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.

‘ಗುರುಸ್ವಾಮಿ ಅವರು ಈ ಹಿಂದೆ ನಾಗೇಂದ್ರ ಎಂಬುವವರ ಹೆಸರಿಗೆ ಉಯಿಲು ಮಾಡಿದ್ದನ್ನು ಖಂಡಿಸಿದ ನಂತರ, ಅದನ್ನು ರದ್ದುಗೊಳಿಸಿದ್ದರು. ಅವರನ್ನು ಮಠದಿಂದ ದೂರ ಇಡಬೇಕು, ಉತ್ತರಾಧಿಕಾರಿ ಮಾಡಬಾರದು. ಮೂರನೇ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕು ಎಂದು ಭಕ್ತರು ಒತ್ತಾಯ ಮಾಡಿದ್ದಾಗ, ಅದಕ್ಕೆ ಮಠದ ಪ್ರಮುಖರು ಒಪ್ಪಿಗೆ ನೀಡಿದ್ದರು. ಆದರೆ, ಈಗ ನಾಗೇಂದ್ರ ಅವರನ್ನೇ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲು ಹೊರಟಿರುವುದು ಭಕ್ತ ಸಮುದಾಯಕ್ಕೆ ಮಾಡಿರುವ ದ್ರೋಹ’ ಎಂದು ಸಾಲೂರು ಮಠದ ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಗೇಂದ್ರ ಅವರು ಮಠದ ಆಸ್ತಿಯನ್ನು ಹಾಗೂ ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಭಕ್ತರು, ಇಷ್ಟೆಲ್ಲ ತಿಳಿದಿದ್ದರೂ, ನಾಗೇಂದ್ರ ಅವರನ್ನೇ ಆಯ್ಕೆ ಮಾಡಲು ಸಮಿತಿಯವರು ಮುಂದಾಗಿದ್ದಾರೆ ಎಂದು ದೂರಿದ್ದಾರೆ.

‘ಇಬ್ಬರೂ ಸ್ವಾಮೀಜಿಗಳಿಗೆ ಸಂಬಂಧ ಪಡದ ವ್ಯಕ್ತಿಯನ್ನು ಮಠದ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಅನಾಹುತಗಳಿಗೆ ಉತ್ತರಾಧಿಕಾರಿ ನೇಮಕ ಸಮಿತಿ ಸದಸ್ಯರೇ ನೇರ ಹೊಣೆ’ ಎಂದು ಹೇಳಿದ್ದಾರೆ.

ಸಭೆಯಲ್ಲಿ ಸ್ಥಳೀಯ ಮುಖಂಡರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT