ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಘಟನೆ: ಕಠಿಣ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ

Last Updated 4 ಅಕ್ಟೋಬರ್ 2021, 15:55 IST
ಅಕ್ಷರ ಗಾತ್ರ

ಚಾಮರಾಜನಗರ:ಉತ್ತರಪ್ರದೇಶದ ಲಖಿಂಪುರ್‌ ಖೇರಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ವಾಹನಗಳು ಹರಿದು ನಾಲ್ವರು ಮೃತಪಟ್ಟಿರುವ ಘಟನೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಎಸ್‌ಡಿಪಿಐ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.

ಡೀವಿಯೇಷನ್‌ ರಸ್ತೆಯಲ್ಲಿರುವ ಲಾರಿ ನಿಲ್ದಾಣದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಕೇಂದ್ರ ಸಚಿವರ ಪುತ್ರ ಕಾರು ಹರಿಸಿ ರೈತರನ್ನು ಹತ್ಯೆ ಮಾಡಿದ್ದು, ಆಘಾತಕಾರಿ ಘಟನೆ.ರೈತರನ್ನು ಕೊಂದ ಆರೋಪಿಗಳ ವಿರುದ್ಧ ಕೊಲೆ ಸೇರಿದಂತೆ ಐಪಿಸಿಯ ಕಠಿಣ ಕಲಂಗಳಡಿ ಪ್ರಕರಣ ದಾಖಲಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಎಸ್‌ಡಿಪಿಐನ ಜಿಲ್ಲಾ ಘಟಕದ ಅಧ್ಯಕ್ಷ ಅಬ್ರಾರ್ ಆಹಮದ್ ಅವರು ಮಾತನಾಡಿ, ‘ಇದು ವ್ಯವಸ್ಥಿತವಾಗಿ ಮಾಡಿರುವ ಕೊಲೆ.ಮೋಹನ್ ಬಿಶ್ತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಉತ್ತರ ಪ್ರದೇಶವು ಅಕ್ಷರಶಃ ಜಂಗಲ್ ರಾಜ್ ಆಗಿ ಬದಲಾಗಿದ್ದು, ಆಡಳಿತ ಪಕ್ಷ ಮತ್ತು ಅವರ ಬೆಂಬಲಿಗ ಗುಂಪುಗಳ ನಿರಂತರ ಗೂಂಡಾಗಿರಿಗೆ ರಾಜ್ಯ ಸಾಕ್ಷಿಯಾಗಿದೆ. ಮುಸ್ಲಿಮರನ್ನು ಮತ್ತು ದಲಿತರನ್ನು ಗುಂಪು ಹತ್ಯೆ ಮಾಡುವುದು, ಎನ್‌ಕೌಂಟರ್, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಇತ್ಯಾದಿ ಅಲ್ಲಿ ಸಾಮಾನ್ಯವಾಗಿದೆ’ ಎಂದು ದೂರಿದರು.

‘ಇಂತಹ ಕ್ರಿಮಿನಲ್ ಕೃತ್ಯಗಳ ಬಗ್ಗೆ ಸರ್ಕಾರ ಮೌನ ವಹಿಸಿದ್ದು, ಕೃತ್ಯಕ್ಕೆ ಅನುಮೋದನೆ ನೀಡಿದಂತೆ ಆಗಿದೆ. ಇದು ಗೂಂಡಾಗಳನ್ನು ಮತ್ತಷ್ಟು ಹಿಂಸೆ ಮತ್ತು ಗೂಂಡಾಗಿರಿಯಲ್ಲಿ ತೊಡಗಲು ಪ್ರೇರೇಪಿಸುತ್ತದೆ. ಈ ಪ್ರಕರಣದಲ್ಲಿ ಕೇಂದ್ರ ಸಚಿವರ ಮಗನನ್ನು ರಕ್ಷಿಸಲು ಪ್ರಯತ್ನಿಸುವುದು ಕಂಡುಬರುತ್ತಿದೆ. ಸುಪ್ರೀಂ ಕೋರ್ಟ್ ಈ ಕೃತ್ಯದ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸಚಿವರ ಪುತ್ರ ಸೇರಿದಂತೆ ಎಲ್ಲ‌ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷರಾದ ಸೈಯದ್ ಆರೀಫ್, ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್, ಕಾರ್ಯದರ್ಶಿ ಜಬೀನೂರ್, ನಗರಸಭಾ ಸದಸ್ಯರಾದ ಖಲೀಲ್ ಉಲ್ಲಾ, ಸಿ.ಕೆ.ನಯಾಜ್ ಉಲ್ಲಾ, ಪಿಎಫ್ಐ ಅಧ್ಯಕ್ಷರಾದ ಕಫೀಲ್ ಅಹಮದ್, ರೈತ ಸಂಘದ ಅಧ್ಯಕ್ಷರಾದ ಹೆಬ್ಬಸೂರು ಬಸವಣ್ಣ, ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಸಂಘಸೇನಾ, ಸಿ.ಎಂ.ಶಿವಣ್ಣ, ಶೋಹೇಬ್, ಸೈಯದ್ ಇರ್ಫಾನ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT