ಗುಂಡ್ಲುಪೇಟೆ: ತಾಲ್ಲೂಕಿನ ಗರಗನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಏಳು ವಿದ್ಯಾರ್ಥಿಗಳು ಗುರುವಾರ ಆಹಾರ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾಲ್ಲೂಕಿನ ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ಯಾಂಪಸ್‌ನಲ್ಲಿ ಗರಗನಹಳ್ಳಿ ವಸತಿ ಶಾಲೆಯೂ ಕಾರ್ಯನಿರ್ವಹಿಸುತ್ತಿದೆ.
ಗುರುವಾರ ಬೆಳಿಗ್ಗೆ ತಿಂಡಿಗೆ ಟೊಮೆಟೊ ಬಾತ್ ಮಾಡಲಾಗಿತ್ತು. ತಿಂಡಿ ಹೆಚ್ಚು ಖಾರವಾವಾಗಿತ್ತು ಎನ್ನಲಾಗಿದೆ. ಅದನ್ನು ತಿಂದಿದ್ದ ವರ್ಣಿತ (13), ಹರ್ಷಿತಾ (13), ಪ್ರಿಯ (13), ರಚನಾ (15), ಸಂಜನಾ (15), ಸಂಗೀತ (13) ಮತ್ತು ಪ್ರಜ್ವಲ್ (15) ಎಂಬ ಏಳು ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ಉರಿ, ವಾಂತಿ ಕಾಣಿಸಿಕೊಂಡಿತು.
ಅವರನ್ನು ಕೂಡಲೇ ಸಮೀಪದ ಹೊರೆಯಾಲ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಇದರಲ್ಲಿ ಪ್ರಜ್ವಲ್ ಎಂಬ ವಿದ್ಯಾರ್ಥಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದುದರಿಂದ ಆತನನ್ನು ಬೇಗೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
‘ಹೊರೆಯಾಲ ಆಸ್ಪತ್ರೆ ವೈದ್ಯರಾದ ಡಾ.ದೀಪಕ್ ಅಸ್ವಸ್ಥ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವಸತಿ ಶಾಲೆ ಪ್ರಾಂಶುಪಾಲ ಲೋಕೇಶ್ ಹಾಗೂ ಬೇಗೂರು ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಗಿರಿದಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕೆಲವು ದಿನಗಳ ಹಿಂದೆ ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾತ್ರಿ ಚಿಕನ್ ಊಟ ಮಾಡಿದ್ದ 24 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.