ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ತಿಂಗಳಲ್ಲಿ 71 ಮಕ್ಕಳ ಸಾವು

ತಾಯಿ, ಮಕ್ಕಳ ಮರಣ ತಗ್ಗಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ
Last Updated 6 ನವೆಂಬರ್ 2021, 16:49 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಈ ವರ್ಷದ ಏಪ್ರಿಲ್‌ ನಿಂದ ಸೆಪ್ಟೆಂಬರ್‌ವರೆಗೆ ಹೆರಿಗೆ ಸಂದರ್ಭದಲ್ಲಿ ಜಿಲ್ಲೆಯ ಐವರು ತಾಯಂದಿರುವ ಮೃತಪಟ್ಟಿದ್ದಾರೆ. 71 ಮಕ್ಕಳು ಕೂಡ ಕೊನೆಯುಸಿರೆಳೆದಿದ್ದಾರೆ. ನಾಲ್ವರು ತಾಯಂದಿರುವ ಮೈಸೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಒಬ್ಬರು ಜಿಲ್ಲಾಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಜಿಲ್ಲೆಯಲ್ಲಿ ತಾಯಿ, ಮಕ್ಕಳ ಮರಣ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳಿಗೆ ಶನಿವಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾ ಹೆಲ್ತ್‌ ಮಿಷನ್‌ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದಿರುವ ಪ್ರಕರಣಗಳನ್ನು ಉಲ್ಲೇಖಿಸಿದರು.

‘ಮಗು ಹುಟ್ಟುವಾಗ ಕಡಿಮೆ ತೂಕ, ನಿಗದಿತ ಅವಧಿಗಿಂತ ಮೊದಲೇ ಜನನ, ತಾಯಿಗೆ ಮಧುಮೇಹ, ರಕ್ತದೊತ್ತಡ ಹಾಗೂ ಜಾಂಡೀಸ್‌ನಂತಹ ಕಾಯಿಲೆಗಳಿಂದ ಮಕ್ಕಳ ಮರಣ ಸಂಭವಿಸಿದೆ. ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಅಗತ್ಯ ಪೂರಕ ಕ್ರಮಗಳನ್ನು ವಹಿಸಿ ತಾಯಿ, ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡಲು ಅಧಿಕಾರಿಗಳು ಮುಂದಾಗಬೇಕು’ ಎಂದು ಹೇಳಿದರು.

‘ಮಳೆಗಾಲ ಆರಂಭವಾಗಿರುವುದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಒಡೆದು ನೀರು ಪೋಲಾಗುವುದಲ್ಲದೇ ಕಲುಷಿತ ನೀರು ಸೇರಿ ಸಾರ್ವಜನಿಕರಿಗೆ ಅನಾರೋಗ್ಯ ಕಾಡಬಹುದು. ಇದನ್ನು ತಡೆಯಲು ಆರೋಗ್ಯ ಅಧಿಕಾರಿಗಳು ಅವಶ್ಯಕ ಮುನ್ನೆಚ್ಚರಿಕೆ ವಹಿಸಿ ಸಂಬಂಧಪಟ್ಟ ಗ್ರಾಮಪಂಚಾಯಿತಿಯೊಂದಿಗೆ ಸಮನ್ವಯ ಸಾಧಿಸಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗದಂತೆ ಎಚ್ಚರ ವಹಿಸಬೇಕು’ ಎಂದು ಸೂಚಿಸಿದರು.

ಕಣ್ಣಿನ ಆಸ್ಪತ್ರೆಗೆ ಸ್ಥಳ ಗುರುತಿಸಿ:ಸಂತೇಮರಹಳ್ಳಿಯಲ್ಲಿರುವ ಎಂ.ಸಿ.ಎಚ್. ಆಸ್ಪತ್ರೆಯನ್ನು ಪುನಾರಂಭ ಮಾಡಲು ವಿದ್ಯುತ್ ಸಮಸ್ಯೆ ಇದೆ. ಆಸ್ಪತ್ರೆಗೆ ವಿದ್ಯುತ್ ಸರಬರಾಜಿಗೆ ಇಲಾಖೆಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳಬೇಕು. ಜಿಲ್ಲೆಯಲ್ಲಿ ಕಣ್ಣಿನ ಆಸ್ಪತ್ರೆಯ ಅವಶ್ಯವಿದ್ದು, ಇದಕ್ಕಾಗಿ ಆರೋಗ್ಯ ಅಧಿಕಾರಿಗಳು ಸ್ಥಳ ಗುರುತಿಸಬೇಕು. ಜಾಗದ ಅವಶ್ಯವಿದ್ದರೆ ಸರ್ಕಾರದಿಂದ ಜಾಗ ನೀಡಲಾಗುವುದು. ಎಚ್.ಐ.ವಿ ನಿಯಂತ್ರಣಕ್ಕಾಗಿ ಐ.ಇ.ಸಿ ಚಟುವಟಿಕೆ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.

ಮಳೆಗಾಲದಲ್ಲಿ ಸಾಮಾನ್ಯವಾಗಿ ಡೆಂಗಿ ಹಾಗೂ ಚಿಕುನ್‌ಗೂನ್ಯ ಲಕ್ಷಣಗಳು ಕಾಣಿಸಿಕೊಳ್ಳಲಿದ್ದು, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿನಿಲಯಗಳ ಮಕ್ಕಳ ಸುರಕ್ಷತೆಗಾಗಿ ಕಿಟಕಿ ಹಾಗೂ ಬಾಗಿಲುಗಳಿಗೆ ಸೊಳ್ಳೆಪರದೆ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಶ್ವೇಶ್ವರಯ್ಯ, ಆರ್.ಸಿ.ಎಚ್. ಅಧಿಕಾರಿ ಡಾ. ಅಂಕಪ್ಪ, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ನಾಗರಾಜು, ತಾಲ್ಲೂಕುಗಳ ವೈದ್ಯಾಧಿಕಾರಿಗಳು ಇತರರು ಸಭೆಯಲ್ಲಿ ಹಾಜರಿದ್ದರು.

‘ಹೆಚ್ಚು ಶುಲ್ಕ ಪಡೆಯುವ ಆಸ್ಪತ್ರೆ ಗುರುತಿಸಿ’

‘ಆಸ್ಪತ್ರೆಗಳಿಗೆ ಹೆರಿಗೆಗಾಗಿ ಬರುವವರಿಗೆ ಸ್ವಾಭಾವಿಕ ಹೆರಿಗೆಗಳನ್ನು ಮಾಡಿಸಲು ಗಮನ ನೀಡಬೇಕು. ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆಗಳು ಸಿಸೇರಿಯನ್ ಹೆರಿಗೆಗೆ ಆದ್ಯತೆ ನೀಡಿ ಜನರಿಂದ ಅಧಿಕ ಶುಲ್ಕ ಪಡೆಯುತ್ತಿರುವುದು ಕಂಡುಬಂದಿದ್ದು, ಇದರಿಂದ ಬಡಜನರಿಗೆ ತೊಂದರೆಯಾಗುತ್ತಿದೆ. ಆರೋಗ್ಯ ಅಧಿಕಾರಿಗಳು ಅಂತಹ ಆಸ್ಪತ್ರೆಗಳನ್ನು ಗುರುತಿಸಿ ಪಟ್ಟಿಮಾಡಿ ವರದಿ ಸಲ್ಲಿಸಬೇಕು’ ಎಂದು ಡಾ.ಎಂ.ಆರ್.ರವಿ ಅವರು ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT