ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ಕೇಂದ್ರಗಳಿಗೆ ಸರ್ಕಾರದ ನಿರ್ಲಕ್ಷವೇ ಶಾಪ; ಆಧುನೀಕರಣಕ್ಕೆ ಹೆಚ್ಚಿದ ಬೇಡಿಕೆ

ಗ್ರಂಥಾಲಯಗಳಲ್ಲಿ ಮೂಲ ಸೌಕರ್ಯಗಳ ಕೊರತೆ
Last Updated 21 ನವೆಂಬರ್ 2021, 15:57 IST
ಅಕ್ಷರ ಗಾತ್ರ

ಚಾಮರಾಜನಗರ: ಜನರಲ್ಲಿ ಓದುವ ಅಭಿರುಚಿ ಬೆಳೆಸಿ, ಅವರ ಜ್ಞಾನ ದಾಹವನ್ನು ನೀಗಿಸಬೇಕಾಗಿದ್ದ ಸಾರ್ವಜನಿಕ ಗ್ರಂಥಾಲಯಗಳು ಸರ್ಕಾರದ ನಿರ್ಲಕ್ಷ್ಯದಿಂದ ಆರಕ್ಕೇರದೆ, ಮೂರಕ್ಕಿಳಿಯದೆ ತ್ರಿಶಂಕು ಸ್ಥಿತಿಯಲ್ಲಿವೆ.

ಗ್ರಂಥಾಲಯಗಳ ಅಭಿವೃದ್ಧಿಗೆ ಸೂಕ್ತ ಅನುದಾನ ಕೊಡದಿರುವುದರಿಂದ ಗ್ರಂಥಾಲಯಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಗ್ರಂಥಾಲಯಗಳ ನಿರ್ವಹಣೆ, ಅಗತ್ಯ ನಿಯತಕಾಲಿಕೆಗಳು, ಪತ್ರಿಕೆಗಳ ಖರೀದಿ, ಓದುಗರಿಗೆ ಕನಿಷ್ಠ ಮೂಲ ಸೌಕರ್ಯ ಒದಗಿಸುವುದಕ್ಕಾಗಿ ಜಿಲ್ಲಾ ಗ್ರಂಥಾಲಯ ಇಲಾಖೆಯು ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ಗ್ರಂಥಾಲಯ ಸೆಸ್‌ ಅನ್ನೇ ಅವಲಂಬಿಸಿದೆ.ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ಇಲ್ಲದಿರುವ ಕಾರಣಕ್ಕೆ ಇರುವ ಬೆರಳೆಣಿಕೆಯಷ್ಟು ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ.

ಜಿಲ್ಲೆಯ 130 ಗ್ರಾಮ ಪಂಚಾಯಿತಿ ಪೈಕಿ 120 ಪಂಚಾಯಿತಿಗಳಲ್ಲಿ ಗ್ರಂಥಾಲಯಗಳಿವೆ. ಜಿಲ್ಲಾ ಗ್ರಂಥಾ ಲಯ ಸೇರಿದಂತೆ ಐದು ಶಾಖಾ ಗ್ರಂಥಾಲಯಗಳಿವೆ. ಪಟ್ಟಣ ಪಂಚಾ ಯಿತಿಗಳಿಗೆ ಸೇರಿದ ಎರಡು, ಕೊಳಚೆ ಪ್ರದೇಶಗಳಲ್ಲಿ ನಾಲ್ಕು, ಅಲೆಮಾರಿ ಜನಾಂಗದವರಿಗಾಗಿ ಒಂದು ಗ್ರಂಥಾಲಯ, ಎರಡು ವಾಚನಾಲಯಗಳಿವೆ. ಜಿಲ್ಲಾ ಕೇಂದ್ರ ಸೇರಿ ಐದು ಕಡೆಗಳಲ್ಲಿ ಡಿಜಿಟಲ್‌ ಗ್ರಂಥಾಲಯಗಳಿವೆ.

ಎರಡು ವರ್ಷದ ಹಿಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಂಥಾ ಲಯಗಳ ಹೊಣೆಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಿರುವುದರಿಂದ ಗ್ರಂಥಾಲಯ ಇಲಾಖೆ ಮೇಲಿನ ಹೊರೆ ಕೊಂಚ ತಗ್ಗಿದೆ.

ಸ್ವಂತ ಕಟ್ಟಡ ಇಲ್ಲ: ಗ್ರಾಮ ಪಂಚಾ ಯಿತಿಗಳ ವ್ಯಾಪ್ತಿಯಲ್ಲಿ ಬಹುತೇಕ ಗ್ರಂಥಾಲಯಗಳು ಪಂಚಾಯಿತಿಗೆ ಸೇರಿದ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸು ತ್ತಿವೆ. ಕಟ್ಟಡ ಇಲ್ಲದಿದ್ದ ಕಡೆ ಬಾಡಿಗೆ ಕಟ್ಟಡ ಇಲ್ಲವೇ ಸಮೀಪದ ಶಾಲೆ, ಸಮುದಾಯ ಭವನ ಹೀಗೆ ಖಾಲಿ ಜಾಗ ಇರುವ ಕಡೆ ಕಾರ್ಯ ನಿರ್ವಹಿಸುತ್ತಿವೆ. ಗ್ರಂಥಾಲಯ ಇಲಾಖೆಯೇ ನೇರವಾಗಿ ನಿರ್ವಹಿಸುತ್ತಿರುವ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ.‌

ಜಿಲ್ಲಾ ಕೇಂದ್ರದಲ್ಲಿ ಶಿಕ್ಷಣ ಇಲಾಖೆಗೆ ಸೇರಿದ ಕಟ್ಟಡದಲ್ಲಿ ಗ್ರಂಥಾಲಯ ಇದೆ. ಈಗ ₹ 1 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ಜಿಲ್ಲಾ ಗ್ರಂಥಾಲಯದ ಅಧಿಕಾರಿ ಆರ್‌.ಶಿವಸ್ವಾಮಿ, ಸ್ಥಳೀಯ ವಾರ್ಡ್‌ ಸದಸ್ಯ ಎಂ.ಮಹೇಶ್‌ ಕಾಳಜಿ ಇದರ ಹಿಂದೆ ಕೆಲಸ ಮಾಡಿದೆ. ಸೆಸ್‌ ಸಂಗ್ರಹದಲ್ಲಿ ₹ 50 ಲಕ್ಷ ಉಳಿಸಿ, ಇನ್ನು ₹ 50 ಲಕ್ಷವನ್ನು ಇಲಾಖೆಯಿಂದ ಪಡೆದು ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಇನ್ನು ಏಳೆಂಟು ತಿಂಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಗ್ರಂಥಾಲಯ ಜನರ ಬಳಕೆಗೆ ಮುಕ್ತವಾಗುವ ಸಾಧ್ಯತೆ ಇದೆ.

ಉಳಿದಂತೆ ಗುಂಡ್ಲುಪೇಟೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗ ಇದ್ದರೂ, ಅಲ್ಲಿ ನಿರ್ಮಿಸಲು ಸಾಧ್ಯವಾಗದ ಸ್ಥಿತಿ ಇದೆ. ಯಳಂದೂರಿನಲ್ಲಿ ಜಾಗದ ಕೊರತೆಯಿಂದ ಸ್ವಂತ ಕಟ್ಟಡ ಆಗಿಲ್ಲ. ಸದ್ಯ ಪಟ್ಟಣ ಪಂಚಾಯಿತಿಗೆ ಸೇರಿದ ಹಾಲ್‌ನಲ್ಲಿ ನಡೆಯುತ್ತಿದೆ.ಕೊಳ್ಳೇಗಾಲದಲ್ಲಿ ನಗರ ಸಭೆಯ ಕಟ್ಟಡದಲ್ಲಿ ಗ್ರಂಥಾಲಯ ಇದೆ. ಹನೂರಿನಲ್ಲಿ ಅಂಗನವಾಡಿ ಕಟ್ಟಡ ವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಮೂಲ ಸೌಕರ್ಯಗಳ ಕೊರತೆ: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಗ್ರಂಥಾಲಯ ಸದಸ್ಯತ್ವ ಹೊಂದಿರುವವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ, ಬಹುತೇಕರು ಮೂಲ ಸೌಕರ್ಯಗಳ ಬಗ್ಗೆ ದೂರಿದರು.

ಗ್ರಾಮ ಪಂಚಾಯಿತಿ, ಹೋಬಳಿ, ತಾಲ್ಲೂಕು ಮಟ್ಟದಲ್ಲಿರುವ ಗ್ರಂಥಾ ಲಯಗಳ ಕಟ್ಟಡಗಳು ಹಳೆಯ ದಾಗಿದ್ದು, ಶಿಥಿಲವಾಗಿವೆ. ಕೆಲವು ಗ್ರಂಥಾಲಯಗಳಲ್ಲಿ ಕುಡಿಯುವ ನೀರು, ಶೌಚಾಲಯದಂತಹ ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲ. ಪುಸ್ತಕಗಳು ಲಭ್ಯವಿದ್ದರೂ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಅಗತ್ಯವಿರುವ ಪುಸ್ತಕಗಳು, ನಿಯತಕಾಲಿಕೆಗಳು ಇರು ವುದಿಲ್ಲ ಎಂಬುದು ಅವರ ಆರೋಪ.

ಕೆಲವು ವಾರದ ಹಿಂದೆ ಹಿಂದಿನ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಆಯ-ವ್ಯಯ ಸಮಿತಿ ಸಭೆ ನಡೆಸಿದ್ದರು. ‘ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಲ್ಲಿರುವ ಗ್ರಂಥಾಲಯಗಳನ್ನು ಆಧುನೀಕರಣ ಗೊಳಿಸಬೇಕು. ಗ್ರಂಥಾಲಯಗಳಲ್ಲಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಜನರು ಏನಂತಾರೆ?

ಮೂಲ ಸೌಕರ್ಯಗಳ ಕೊರತೆ

ಸಂತೇಮರಹಳ್ಳಿಯಲ್ಲಿನ ಗ್ರಂಥಾಲಯಕ್ಕೆ ಹೆಚ್ಚು ಓದುಗರು ಬರುತ್ತಾರೆ. ಆದರೆ, ಕಟ್ಟಡ ಹಳೆಯದಾಗಿರುವುದ ರಿಂದ ದುಃಸ್ಥಿತಿಯಲ್ಲಿದೆ. ಓದುಗರು ಒಂದೆಡೆ ಕುಳಿತು ಓದಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಓದುಗರು ಗ್ರಂಥಾಲಯದ ಹೊರಗೆ ಪತ್ರಿಕೆ ತಂದು ಓದಬೇಕಾಗಿದೆ. ಶೌಚಾಲಯ, ನೀರು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ.

–ಮಹದೇವಪ್ರಸಾದ್, ಸಂತೇಮರಹಳ್ಳಿ

*

ಸ್ಪರ್ಧಾತ್ಮಕ ಪುಸ್ತಕಗಳು ಬೇಕು

ಈಗಿನ ಓದುಗರಿಗೆ ತಕ್ಕಂತೆ ಗ್ರಂಥಾಲಯದಲ್ಲಿ ಹೊಸ ಪುಸ್ತಕ ಲಭ್ಯವಿಲ್ಲ. ದಿನಪತ್ರಿಕೆಗಳು ಹೆಚ್ಚಾಗಿ ಬರುತ್ತಿಲ್ಲ. ವಾರ ಪತ್ರಿಕೆ ಕೊರತೆಯೂ ಇದೆ. ಜತೆಗೆ ಇಂದಿನ ವಿದ್ಯಾರ್ಥಿಗಳಿಗೆ ತಕ್ಕಂತೆ ಸ್ಪರ್ಧಾತ್ಮಕ ಪುಸ್ತಕ ಒದಗಿಸಬೇಕು. ಇದರಿಂದ ಹೆಚ್ಚಾಗಿ ಹೊಸ ಓದುಗರು ಗ್ರಂಥಾಲಯಕ್ಕೆ ಬರಲು ಸಾಧ್ಯ.

–ಮಧು, ಸಂತೇಮರಹಳ್ಳಿ

*

ಪುಸ್ತಕದ ಕೊರತೆ

ನಮ್ಮ ಹಳ್ಳಿಯಲ್ಲಿ ಗ್ರಂಥಾಲಯವಿಲ್ಲ. ಹಾಗಾಗಿ ನಮಗೆ ಪುಸ್ತಕ ಬೇಕಾದರೆ ನಗರಕ್ಕೆ ಹೋಗಬೇಕು. ಇಲ್ಲವಾದರೆ ಕಾಲೇಜಿನಲ್ಲಿರುವ ಗ್ರಂಥಾಲಯಕ್ಕೆ ಬರಬೇಕು. ಪುಸ್ತಕದ ಕೊರತೆ ಇರುವುದರಿಂದ ನಮಗೆ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ಆಗುವುದಿಲ್ಲ.

–ಜ್ಯೋತಿ,ಜಾಗೇರಿ, ಕೊಳ್ಳೇಗಾಲ ತಾಲ್ಲೂಕು

*

ಗ್ರಂಥಾಲಯ ನಿರ್ಮಿಸಿ

ಹನೂರು ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿರುವ ಬಹು ತೇಕ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಪ್ರಯೋಜನಕ್ಕೆ ಬಾರದ ಕಾಮಗಾರಿಗಳಿಗೆ ಲಕ್ಷಾಂತರ ಹಣ ವ್ಯಯಿಸುವ ಬದಲು ಗ್ರಂಥಾಲಯ ನಿರ್ಮಾಣಕ್ಕೆ ಅನುದಾನ ಬಳಸಿದರೆ ಸಮಾಜದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತದೆ.

–ಸಿದ್ದರಾಜು, ಹನೂರು

*

ಓದುಗರಿಗೆ ಸೌಲಭ್ಯ ಇಲ್ಲ

ಯಳಂದೂರು ಪಟ್ಟಣದಲ್ಲಿ ಸೂಕ್ತ ಸ್ಥಳದಲ್ಲಿ ಗ್ರಂಥಾಲಯ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಇದರ ಉಪಯೋಗ ಆಗುತ್ತಿಲ್ಲ. ಕಟ್ಟಡದ ಆವರಣದಲ್ಲಿ ಬೇಲಿ ಬೆಳೆದಿದ್ದು, ಅಧ್ಯಯನಕ್ಕೆ ಬೇಕಾದ ಹೊಸ ಪುಸ್ತಕ, ಕೆಎಎಸ್, ಐಎಎಸ್‌ಗೆ ಸಿದ್ಧತೆ ನಡೆಸಲು ಬೇಕಾದ ರಾಜ್ಯ, ರಾಷ್ಟ್ರ ಮಟ್ಟದಪತ್ರಿಕೆಗಳು ಇಲ್ಲಿಲ್ಲ. ಇದರಿಂದ ಇದ್ದಷ್ಟೇ ಪುಸ್ತಕ, ಪತ್ರಿಕೆ ನೆರವು ಪಡೆಯಬೇಕಿದೆ.

–ವಿವೇಕ್,ಎಂಜಿನಿಯರಿಂಗ್ ವಿದ್ಯಾರ್ಥಿ, ಯಳಂದೂರು

*

ಹೈಟೆಕ್ ಗ್ರಂಥಾಲಯ ಬೇಕು

ಇನ್ನೂ ಆಧುನಿಕ ಗ್ರಂಥಾಲಯ, ಡಿಜಿಟಲ್ ಲೈಬ್ರರಿ, ಇಂಗ್ಲಿಷ್‌ ನಿಯತಕಾಲಿಕೆಗಳು ಮತ್ತು ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕಿದೆ. ಸಮಯಕ್ಕೆ ಅನುಗುಣವಾಗಿ ಗ್ರಂಥಾಲಯತೆರೆದು, ಪಟ್ಟಣಿಗರ ಜ್ಞಾನ ಭಂಡಾರ ಹೆಚ್ಚಿಸಲು ಪಂಚಾಯಿತಿ ಮುಂದಾಗಲಿ.

–ಎಂ.ಮಹೇಶ್,ಪದವಿ ವಿದ್ಯಾರ್ಥಿ, ಯಳಂದೂರು

*

ವಿದ್ಯಾರ್ಥಿಗಳಿಗೆ ತೊಂದರೆ

ಹಂಗಳದಲ್ಲಿರುವ ಹಳೆ ಕಟ್ಟಡದಲ್ಲಿ ಮಳೆ ಬಂದರೆ ನೀರು ಸುರಿಯುತ್ತದೆ. ಹೊಸ ಕಟ್ಟಡ ಕಾಮಗಾರಿ ಆರಂಭ ವಾಗಿ ವರ್ಷ ಕಳೆದರೂ ಪೂರ್ಣವಾಗಿಲ್ಲ. ಪಂಚಾಯಿತಿಗೆ ತಿಳಿಸಿದರೆ ನಮಗೆ ಸೇರುವುದಿಲ್ಲ ಎನ್ನುತ್ತಾರೆ. ಗ್ರಂಥಾಲಯ ಅಧಿಕಾರಿಗಳಿಗೆ ಕೇಳಿದರೆ ಪಂಚಾಯಿತಿಗೆ ವಹಿಸಲಾಗಿದೆ ಎನ್ನುತ್ತಿದ್ದಾರೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

–ಸಿದ್ದರಾಜು,ಹಂಗಳ, ಗುಂಡ್ಲುಪೇಟೆ ತಾಲ್ಲೂಕು

*

ಹೊಸ ಗ್ರಂಥಾಲಯದಿಂದ ಅನುಕೂಲ

ಗ್ರಂಥಾಲಯ ಜ್ಞಾನ ಮಂದಿರ ಹಾಗೂ ಜ್ಞಾನಭಂಡಾರದ ಸಂಗ್ರಹ. ವ್ಯಕ್ತಿಯ ಜ್ಞಾನವನ್ನು ವಿಸ್ತರಿಸಲು ಗ್ರಂಥಾಲಯ ಬಹಳ ಉಪಯುಕ್ತ. ನಮ್ಮ ಜಿಲ್ಲಾ ಕೇಂದ್ರದಲ್ಲಿರುವ ಗ್ರಂಥಾಲಯದಲ್ಲಿ 20 ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದರೂ ಉತ್ತಮ ಕಟ್ಟಡದ ವ್ಯವಸ್ಥೆ ಇರಲಿಲ್ಲ. ಹಾಗಾಗಿ ನಗರಸಭೆಯ ವತಿಯಿಂದ ನಿವೇಶನ ಮಂಜೂರಾಗಿ ಈಗ ₹ 1 ಕೋಟಿ ವೆಚ್ಚದಲ್ಲಿ ನೂತನ ಗ್ರಂಥಾಲಯ ಕಟ್ಟಡದ ಕಾಮಗಾರಿ ಪ್ರಾರಂಭವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಓದುಗರಿಗೆ ಅನುಕೂಲವಾಗಲಿದೆ.

ಎಂ.ಮಹೇಶ್‌, ನಗರಸಭಾ ಸದಸ್ಯ

*

7–8 ತಿಂಗಳಲ್ಲಿ ಸುಸಜ್ಜಿತ ಗ್ರಂಥಾಲಯ

ಸ್ಥಳೀಯ ಸಂಸ್ಥೆಗಳಲ್ಲಿ ಗ್ರಂಥಾಲಯ ಸೆಸ್‌ ಎಂದು ಶೇ 6ರಷ್ಟು ತೆರಿಗೆಯನ್ನು ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಸಂಗ್ರಹವಾಗುವ ಹಣದಿಂದ ಜಿಲ್ಲೆಯಲ್ಲಿರುವ ಗ್ರಂಥಾಲಯಗಳನ್ನು ನಿರ್ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ 29 ಸಾವಿರ ಚಂದಾದಾರರಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತವಾದ ಗ್ರಂಥಾಲಯ ನಿರ್ಮಾಣವಾಗಬೇಕು ಎಂಬ ಕನಸು ಈಗ ನನಸಾಗುತ್ತಿದೆ. ಸತತ ಪ್ರಯತ್ನಗಳ ಬಳಿಕ ₹ 1 ಕೋಟಿ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ಆರಂಭವಾಗಿದ್ದು, ಅಡಿಪಾಯದ ಕೆಲಸ ಪೂರ್ಣಗೊಂಡಿದೆ. ಏಳೆಂಟು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ.

ಆರ್‌.ಶಿವಸ್ವಾಮಿ, ಜಿಲ್ಲಾ ಗ್ರಂಥಾಲಯ ಅಧಿಕಾರಿ

*

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜು ನಾಥಸ್ವಾಮಿ, ಅವಿನ್‌ ಪ್ರಕಾಶ್‌ ವಿ. ಎಂ.ಮಲ್ಲೇಶ, ಬಿ.ಬಸವರಾಜು, ಮಹದೇವ್‌ ಹೆಗ್ಗವಾಡಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT