ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ ಹಿಂಗಾರು ಮಳೆ ಕೊರತೆ

ಸದ್ಯಕ್ಕೆ ಬೆಳೆಗೆ ತೊಂದರೆ ಇಲ್ಲ, ಮಳೆಯಾಗದಿದ್ದರೆ ಬೆಳೆ ಒಣಗುವುದು ಖಚಿತ
Last Updated 9 ನವೆಂಬರ್ 2020, 15:27 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂಗಾರು ಉತ್ತಮವಾಗಿದ್ದ ಜಿಲ್ಲೆಯಲ್ಲಿ ಹಿಂಗಾರು ಮಳೆಯ ಕೊರತೆ ಉಂಟಾಗಿದೆ. ವಾಡಿಕೆಯ ಮಳೆಗೆ ಹೋಲಿಸಿದರೆ ಈ ಬಾರಿ ಇದುವರೆಗೆ ಶೇ 32ರಷ್ಟು ಕಡಿಮೆ ಮಳೆಯಾಗಿದೆ.

ಅಕ್ಟೋಬರ್‌ ತಿಂಗಳಿನಿಂದ ಈಶಾನ್ಯ ಮುಂಗಾರು ಅವಧಿ ಆರಂಭವಾಗುತ್ತದೆ. ಇದನ್ನೇ ಹಿಂಗಾರು ಅವಧಿ ಎನ್ನಲಾಗುತ್ತದೆ. ಗಡಿ ಜಿಲ್ಲೆಯಲ್ಲಿ ಹಿಂಗಾರು ಅವಧಿಯಲ್ಲೂ ಉತ್ತಮ ಮಳೆಯಾಗುತ್ತದೆ. ತಾಲ್ಲೂಕಿನ ಪ್ರಮುಖ ಜಲಾಶಯಗಳಾದ ಸುವರ್ಣಾವತಿ, ಚಿಕ್ಕಹೊಳೆಗಳಿಗೆ ಹಿಂಗಾರು ಅವಧಿಯಲ್ಲೇ ಹೆಚ್ಚು ನೀರು ಹರಿದು ಬರುತ್ತದೆ.

ಸಾಮಾನ್ಯವಾಗಿ ಅಕ್ಟೋಬರ್‌ 1ರಿಂದ ನವೆಂಬರ್‌ 8ರವರೆಗೆ ಜಿಲ್ಲೆಯಲ್ಲಿ 19.8 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ ಈ ಅವಧಿಯಲ್ಲಿ 13.5 ಸೆಂ.ಮೀ ಮಳೆ ಸುರಿದಿದೆ.

ಅಕ್ಟೋಬರ್‌ ತಿಂಗಳಲ್ಲಿ ವಾಡಿಕೆಯಲ್ಲಿ 16.2 ಸೆಂ.ಮೀ ಮಳೆಯಾಗುತ್ತದೆ. ಈ ವರ್ಷ 10.3 ಸೆಂ.ಮೀಗಳಷ್ಟು ಮಾತ್ರ ಮಳೆಯಾಗಿದೆ.ಈ ತಿಂಗಳ ಆರಂಭದಲ್ಲಿ ಸ್ವಲ್ಪ ಹೆಚ್ಚು ಮಳೆಯಾಗಿದೆ. ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ಸಾಮಾನ್ಯವಾಗಿ 2.7 ಸೆ.ಮೀ ಮಳೆಯಾಗುತ್ತದೆ. ಈ ಸಲ 2.9 ಸೆಂ.ಮೀ ಮಳೆ ಸುರಿದಿದೆ.

ಈ ವರ್ಷದ ಜನವರಿ 1ರಿಂದ ಇಲ್ಲಿಯವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ, ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಮಾಣ ಶೇ 11ರಷ್ಟು ಹೆಚ್ಚಿದೆ.

ಬೆಳೆಗೆ ತೊಂದರೆ ಇಲ್ಲ: ಹಿಂಗಾರಿನ ಆರಂಭದಲ್ಲಿ ಕಡಿಮೆ ಮಳೆಯಾದರೂ ಸದ್ಯದ ಮಟ್ಟಿಗೆ ಬೆಳೆಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರು.

ಮುಂಗಾರು ಮಳೆ ಉತ್ತಮವಾಗಿದ್ದರಿಂದ ಸಾಕಷ್ಟು ನೀರು ಲಭ್ಯವಾಗಿದೆ. ಹಿಂಗಾರು ಬಿತ್ತನೆ ಸಮಯದಲ್ಲಿ ವರ್ಷಧಾರೆಯಾಗಿದೆ. ಅಕ್ಟೋಬರ್‌ನಲ್ಲಿ ಕಡಿಮೆ ಮಳೆಯಾಗಿದ್ದರೂ, ಬೆಳೆಗೆ ಅಗತ್ಯವಿದ್ದಾಗಲೆಲ್ಲ ನೀರು ಸಿಕ್ಕಿದೆ. ಕಳೆದ ವಾರ ಮಳೆಯಾಗಿರುವುದು ಬೆಳೆದಿರುವ ಪೈರಿಗೆ ಅನುಕೂಲಕರವಾಗಿದೆ ಎಂಬುದು ಅವರ ಹೇಳಿಕೆ.

‘ಹಿಂಗಾರು ಆರಂಭದಲ್ಲಿ ನಮ್ಮಲ್ಲಿ ಕಡಿಮೆ ಮಳೆಯಾಗಿದೆ. ಆದರೆ, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿಲ್ಲ. ಕಳೆದ ವಾರ ಮಳೆಯಾಗಿರುವುದು ರೈತರಿಗೆ ಪ್ರಯೋಜನಕಾರಿ. ಇದೇ ರೀತಿ ಮುಂದಿನ ದಿನಗಳಲ್ಲೂ ಮಳೆಯಾಗಬೇಕು. ಒಂದು ವೇಳೆ, ಆಗ ಬೆಳೆಗಳಿಗೆ ನೀರು ಸಿಗದಿದ್ದರೆ ಒಣಗುವ ಸಾಧ್ಯತೆ ಇದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿ ದಿನ ಮೋಡ ಕವಿದ ವಾತಾವರಣ ಇದ್ದು ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿ ಮುಂದುವರಿಯಲಿದೆ ಎಂದು ಹೇಳುತ್ತಾರೆ ಅವರು.

‘ಇದು ವಿಶಾಖ ಮಳೆ ಸುರಿಯುವ ಸಮಯ. ನಮ್ಮಲ್ಲಿ ಸಾಮಾನ್ಯವಾಗಿ ಬರುತ್ತದೆ. ಅಕ್ಟೋಬರ್‌ ನಂತರ ಕಡಿಮೆ ಮಳೆಯಾಗಿದೆ. ಅದೃಷ್ಟವಶಾತ್‌ ರೈತರ ಬಿತ್ತನೆಗೆ ತೊಂದರೆಯಾಗಿಲ್ಲ. ನೀರು ಇಲ್ಲ ಎಂಬ ಕಾರಣದಿಂದ ಪೈರು ಒಣಗಿಲ್ಲ’ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಶಾಖ ಮಳೆಯಿಂದ ಪ್ರಯೋಜನ ಹೆಚ್ಚು, ಕ್ರಿಮಿ ಕೀಟಗಳನ್ನು ನಾಶ ಮಾಡುವ ಸಾಮರ್ಥ್ಯ ಈ ಮಳೆಗಿದೆ. ಈ ಸಮಯದಲ್ಲಿ ಬೆಳೆಗಳಿಗೆ ರೋಗ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಈ ತಿಂಗಳ ಆರಂಭದಿಂದ ಮಳೆಯಾಗುತ್ತಿದ್ದು, ಮುಂದೆಯೂ ಬರಬಹುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT