ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭೀತಿ: ಕೊಳ್ಳೇಗಾಲ ರೇಷ್ಮೆ ಬೆಳೆಗಾರರು ಕಂಗಾಲು

ಸಂತೇಮರಹಳ್ಳಿ ರೇಷ್ಮೆ‌ಗೂಡಿನ ಮಾರುಕಟ್ಟೆ ಬಂದ್‌
Last Updated 26 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟು ನಿಟ್ಟಿನಲ್ಲಿ ಕೊಳ್ಳೇಗಾಲದ ಮುಂಡಿಗಿಂಡ ಹಾಗೂ ಸಂತೇಮರಹಳ್ಳಿಯಲ್ಲಿರುವ ರೇಷ್ಮೆ ಗೂಡಿನ ಮಾರುಕಟ್ಟೆಗಳನ್ನು ಬುಧವಾರದಿಂದ ಅನ್ವಯವಾಗುವಂತೆ ಮುಂದಿನ ಆದೇಶದವರಿಗೆ ಮುಚ್ಚಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮಾರುಕಟ್ಟೆಗಳನ್ನು ಮುಚ್ಚಿರುವ ಕಾರಣ ಜಿಲ್ಲೆಯಲ್ಲಿ ರೇಷ್ಮೆ ಗೂಡು ಬೆಳೆದಿರುವ ರೈತರಿಗೆ ಬೇರೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ, ಗೂಡನ್ನು ಖರೀದಿಸುವವರಿಲ್ಲದೇ ಬೆಳೆಗಾರರು ಕಂಗಾಲಾಗಿದ್ದಾರೆ.

ಹೋಬಳಿಯ ಕೇಂದ್ರಸ್ಥಾನದಲ್ಲಿರುವ ರೇಷ್ಮೆಗೂಡಿನ ಮಾರುಕಟ್ಟೆಯನ್ನು ಮುಚ್ಚಿರುವ ಪರಿಣಾಮ ಇಲ್ಲಿಗೆ ಬರಬೇಕಾಗಿದ್ದ ಗೂಡುಗಳನ್ನು ರೈತರು ಮನೆಯಲ್ಲಿ ಸಂಗ್ರಹಿಸಿಡುವಂತಾಗಿದೆ. ಗೂಡುಗಳನ್ನು ಗರಿಷ್ಠ 3ರಿಂದ 4 ದಿನಗಳವರೆಗೆ ಮಾತ್ರ ಇಟ್ಟುಕೊಳ್ಳಲು ಸಾಧ್ಯ. ದಿನ ಕಳೆದಂತೆ ರೇಷ್ಮೆಹುಳು ಚಿಟ್ಟೆ ರೂಪದಲ್ಲಿ ಹೊರ ಬಂದು, ಬೆಳೆಗಾರರಿಗೆ ನಷ್ಟವಾಗುವ ಪರಿಸ್ಥಿತಿ ಉಂಟಾಗಿದೆ. ರೇಷ್ಮೆಗೂಡು ಮಾರಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಬೆಳೆಗಾರರು ರೇಷ್ಮೆಕೃಷಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಸಂತೇಮರಹಳ್ಳಿ ಹೋಬಳಿ, ಹರವೆ ಹೋಬಳಿ, ನಂಜಗೂಡು ತಾಲ್ಲೂಕಿನ ದೇವನೂರು, ಚಿನ್ನಂಬಳ್ಳಿ ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕುಗಳಿಂದ ರೈತರು ರೇಷ್ಮೆ ಗೂಡನ್ನು ಸಂತೇಮರಹಳ್ಳಿಯಲ್ಲಿರುವ ರೇಷ್ಮೆಗೂಡು ಮಾರುಕಟ್ಟೆಗೆ ತಂದು ವ್ಯಾಪಾರ ಮಾಡಿ ಹೋಗುತ್ತಿದ್ದರು. ಪ್ರತಿದಿನ 40ರಿಂದ 50 ಲಾಟ್‍ಗಳು, ಅಂದರೆ ಒಂದು ಟನ್ ರೇಷ್ಮೆಗೂಡು ವ್ಯಾಪಾರವಾಗುತಿತ್ತು.

ಹೊನ್ನೂರು, ಕೆಸ್ತೂರು, ಮಾಂಬಳ್ಳಿ ಹಾಗೂ ಸಂತೇಮರಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಸಿಲ್ಕ್ ರೀಲರ್‌ಗಳು (ರೇಷ್ಮೆ ನೂಲು ಬಿಚ್ಚಿಸುವವರು) ಪ್ರತಿ ಕೆಜಿಗೆ ಸಣ್ಣಗೂಡು ₹ 280ರಿಂದ ₹300ರವರೆಗೆ ಖರೀದಿಸಿ ತಮ್ಮ ಗ್ರಾಮಗಳಲ್ಲಿ ಚರಕದ ಮೂಲಕ ನೂಲು ಬಿಚ್ಚಿಸುತ್ತಿದ್ದರು. ಇದೀಗ ಕೊರೊನಾ ವೈರಸ್‌ ಕಾರಣಕ್ಕೆ ಜನರು ಗೊಂಪು ಕೂಡುವುದಕ್ಕೆ ನಿರ್ಬಂಧ ಹೇರಿರುವುದರಿಂದ ಮಾರುಕಟ್ಟೆ ಮುಚ್ಚಲಾಗಿದೆ. ಮಾರುಕಟ್ಟೆ ಇದ್ದಿದ್ದರಿಂದಚರಕದ ಮೂಲಕ ನೂಲು ಬಿಚ್ಚುವುದರಿಂದ ಕಾರ್ಮಿಕರಿಗೆ ಪ್ರತಿದಿನ ಕೂಲಿ ಸಿಗುತಿತ್ತು. ಈಗ ಕಾರ್ಮಿಕರಿಗೆ ಕೆಲಸವೂ ಇಲ್ಲದಂತಾಗಿದೆ.

ರೀಲರ್‌ಗಳಿಗೆ ಕಡಿಮೆ ಬೆಲೆಗೆ ಮಾರಾಟ

‘ಬೆಳೆದಿರುವ ಗೂಡುಗಳನ್ನು ಎಲ್ಲಿಗೆ ರವಾನಿಸಬೇಕು ಎಂಬುದು ತಿಳಿಯದಾಗಿದೆ. ಗೂಡುಗಳ ಮಾರಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ನಂತರ ಮಾರುಕಟ್ಟೆ ಮುಚ್ಚಬೇಕಾಗಿತ್ತು’ ಎಂದು ರೇಷ್ಮೆ ಬೆಳೆಗಾರರು ಹೇಳಿದರು.

ಸದ್ಯ ಅಕ್ಕಪಕ್ಕದಲ್ಲಿರುವ ಸಿಲ್ಕ್ ರೀಲರ್‌ಗಳಿಗೆ ಅರ್ಧ ಬೆಲೆಯಲ್ಲಿ ರೇಷ್ಮೆಗೂಡುಗಳನ್ನು ಬೆಳೆಗಾರರು ಮಾರಾಟ ಮಾಡುತ್ತಿದ್ದಾರೆ. ಖರೀದಿಸಿದ ಗೂಡನ್ನು ಬಿಚ್ಚಲು ಕಾರ್ಮಿಕರು ಕೆಲಸಕ್ಕೆ ಬಾರದ ಕಾರಣ ರೀಲರ್‌ಗಳ ಕುಟುಂಬದ ಸದಸ್ಯರೇ ಚರಕದಲ್ಲಿ ನೂಲು ಕರಗಿಸಲು ಮುಂದಾಗಿದ್ದಾರೆ.

‘ಬೆಳೆದ ರೇಷ್ಮೆ ಗೂಡುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ. ₹550 ರಿಂದ ₹650 ರವರೆಗೆ ಮಾರಾಟವಾಗಬೇಕಾಗಿದ್ದ ದಪ್ಪ ರೇಷ್ಮೆಗೂಡನ್ನು ರೀಲರ್‌ಗೆ ಅರ್ಧಬೆಲೆಗೆ ಮಾರಾಟ ಮಾಡಿದ್ದೇನೆ. 100 ಮೊಟ್ಟೆಯ ರೇಷ್ಮೆ ಗೂಡಿಗೆ ₹50 ಸಾವಿರ ನಷ್ಟ ಉಂಟಾಗಿದೆ’ ಎಂದು ರೈತ ಚಿನ್ನಂಬಳ್ಳಿ ಮಹೇಶ್ ಅವರು ಅಳಲು ತೋಡಿಕೊಂಡರು.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ರೇಣುಕೇಶ್‌ ಅವರು, ‘ಕೊರೊನಾ ವೈರಸ್‌ ಹರಡುವಿಕೆ ತಡೆಗಾಗಿ ಮಾರುಕಟ್ಟೆ ಮುಚ್ಚಲಾಗಿದೆ. ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಖರೀದಿದಾರರ ಹೆಸರು ಮತ್ತು ಮೊಬೈಲ್ ನಂಬರ್ ಬರೆಯಲಾಗಿದೆ. ರೈತರು ಅವರನ್ನು ಸಂಪರ್ಕಿಸಿ ನೇರವಾಗಿ ರೇಷ್ಮೆಗೂಡು ಮಾರಾಟ ಮಾಡಬಹುದು ಅಥವಾ ಬೆಳೆದ ಗೂಡನ್ನು ಒಣಗಿಸಿ ಸಂಗ್ರಹಿಸಿಡಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT