ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ಮುಚ್ಚಿದ ಹೂಳು; ಕಳೆಯೂ ಸಮೃದ್ಧ!

ಯಳಂದೂರು: ನಾಲೆಗಳಿಗೆ ನೀರು ಬಿಡಲು ಸಿದ್ಧತೆ ಆರಂಭ; ಸರಾಗವಾಗಿ ಹರಿಯದಿರುವ ಆತಂಕ
Last Updated 7 ಜುಲೈ 2021, 15:47 IST
ಅಕ್ಷರ ಗಾತ್ರ

ಯಳಂದೂರು:ತಾಲ್ಲೂಕಿನ ಕಬಿನಿ ಉಪ ಕಾಲುವೆಗಳಿಗೆ ನೀರು ಹರಿಸಲು ಸಿದ್ಧತೆ ನಡೆದಿದೆ. ಆದರೆ, ಕಾಲುವೆಗಳು ಹೂಳು ಹಾಗೂ ಕಳೆ ಗಿಡಗಳಿಂದ ಆವೃತವಾಗಿವೆ.

ಇದರಿಂದ ನೀರಿನ ಸರಾಗ ಹರಿವಿಗೆ ಹಿನ್ನಡೆಯಾಗಲಿದ್ದು, ಹರಿಯುವಿಕೆಯ ವೇಗ ಕುಸಿಯುತ್ತದೆ ಎಂಬ ಆತಂಕವನ್ನು ಈ ಭಾಗದ ಹಿಡುವಳಿದಾರರು ವ್ಯಕ್ತಪಡಿಸಿದ್ದಾರೆ.

ಸಂತೇಮರಹಳ್ಳಿಯಿಂದ ಜಿಲ್ಲೆಯನ್ನು ಪ್ರವೇಶಿಸುವ ಕಬಿನಿ ನಾಲೆಯು ಅಲ್ಲಲ್ಲಿ ಉಪ ಕಾಲುವೆ ಹೊಂದಿದ್ದು, ಅವುಗಳ ಮೂಲಕ ಕೆಳ ಹಂತದ ಕೃಷಿ ಭೂಮಿಗೆ ನೀರನ್ನು ಹರಿಸಲಾಗುತ್ತದೆ. ಚಾಮರಾಜನಗರ ತಾಲ್ಲೂಕಿನ ಗೂಳಿಪುರ ಗ್ರಾಮದ ಬಳಿ ಯಳಂದೂರು ತಾಲ್ಲೂಕಿಗೆ ಉಪ ಕಾಲುವೆ ತಿರುವು ಪಡೆಯುತ್ತದೆ.

ಈ ಕಾಲುವೆ ಮಧ್ಯೆ ಹಸಿರು ಸಸ್ಯ, ಕಳೆ ಸಸ್ಯಗಳು ಬೆಳೆದಿವೆ. ನಿರ್ವಹಣೆ ಇಲ್ಲದೆ ಕಾಲುವೆ ಸೊರಗಿದೆ. ಸಮೀಪದ ರಸ್ತೆಗಳು ಮುಳ್ಳು ಗಿಡಗಳಿಂದ ತುಂಬಿವೆ. ಜಾಸ್ತಿ ಹೂಳು ಇರುವ ಕಡೆ ತೆರವುಗೊಳಿಸಲಾಗಿದೆ. ಉಳಿದ ಭಾಗಗಳನ್ನು ನಿರ್ಲಕ್ಷಿಸಲಾಗಿದೆ.

‘ಕಾಲುವೆ ಹಾಗೂ ಸನಿಹದರಸ್ತೆ ಭಾಗವನ್ನು ಕಾವೇರಿ ನೀರಾವರಿ ನಿಗಮ ನಿರ್ವಹಣೆ ಮಾಡುತ್ತಿದೆ. ಅಲ್ಲಲ್ಲಿ ಕಾಮಗಾರಿ ನಡೆದಿದೆ. ನೀರಿನ ಸರಾಗ ಹರಿವಿಗೆ ತೊಂದರೆ ಇರುವ ಕಿರು ಸೇತುವೆ ಭಾಗಗಳಲ್ಲಿ ಮಾತ್ರ ಹೂಳು ತೆಗೆಯಲಾಗಿದೆ. ಉಳಿದಂತೆ ಕಳೆ ಸಸ್ಯಗಳನ್ನು ಹಾಗೆ ಬಿಡಲಾಗಿದೆ. ಇದರಿಂದ ಹೆಚ್ಚಿನ ನೀರು ಕಾಲುವೆಗಳಲ್ಲಿ ಹರಿಯದೆ ಕೆಳ ಪಾತ್ರದ ಕೃಷಿಕರಿಗೆ ತೊಂದರೆಯಾಗುತ್ತದೆ’ ಎಂದು ವೈ.ಕೆ.ಮೋಳೆಯ ರೈತ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಗ್ಗೆ'ಪ್ರಜಾವಾಣಿ'ಗೆ ಪ್ರತಿಕ್ರಿಯಿ ಸಿದ ಸಂತೇಮರಹಳ್ಳಿ ಕಾವೇರಿ ನೀರಾವರಿ ನಿಗಮದ ಎಇಇ ಉಮೇಶ್, ‘ಕಾಲುವೆಗಳಲ್ಲಿ ನೀರು ಹರಿಯಲು ಅಡೆತಡೆ ಇರುವ ಭಾಗಗಳಲ್ಲಿ ಮಾತ್ರ ಹೂಳು ತೆಗೆಸಲಾಗಿದೆ.

ದುರಸ್ತಿ ಮತ್ತು ಸ್ವಚ್ಛತೆಗೆಇನ್ನೂ ಸಮಯಾವಕಾಶ ಇದ್ದು, ಹೂಳು ಮತ್ತು ಕಳೆ ಸಸ್ಯ ತೆಗೆಸಲು ಕ್ರಮ ವಹಿಸಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ಕಾಮಗಾರಿ ಶಾಸ್ತ್ರ ಮಾಡಿದ್ದಾರೆ’

‘ಕಾಲುವೆಗಳಲ್ಲಿ ನೆಪ ಮಾತ್ರಕ್ಕೆ ಹೂಳು ತೆಗೆಯಲಾಗುತ್ತದೆ. ನಂತರ ಕೆಸರನ್ನು ನಾಲೆ ಬದಿಯೇ ಸುರಿಯುತ್ತಾರೆ. ಮಳೆ ಬಂದಾಗ ಈ ಕೆಸರು ಮತ್ತೆನಾಲೆಗೆ ಸೇರುತ್ತದೆ. ಪ್ರತಿ ವರ್ಷ ನಾಲೆ ಸ್ವಚ್ಛಗೊಳಿಸುವ ಕಾಮಗಾರಿ ಇದೇ ರೀತಿ ನಡೆಯುತ್ತದೆ. ಇದನ್ನು ನಿಗಮದ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ನಾಲೆಯ ಸಮೀಪದ ರಸ್ತೆ ಮತ್ತು ಕಾಲುವೆಗಳ ಸುತ್ತ ಮುಳ್ಳಿನ ಪೊದೆಗಳು ಆವರಿಸಿಕೊಂಡು, ಸಂಚಾರಕ್ಕೂ ತೊಂದರೆ ಆಗುತ್ತದೆ’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಆರೋಪಿಸಿದರು.

‘ಎಲ್ಲಾ ಕಾಲುವೆಗಳಲ್ಲಿ ಅರ್ಧ ಭಾಗ ಹೂಳು ತುಂಬಿದೆ. ಕಾಲುವೆ ಸ್ವಚ್ಛಗೊಳಿಸುವ ಕೆಲಸಕ್ಕೆ ಅಧಿಕಾರಿಗಳು ಯೋಜನೆ ರೂಪಿಸುವುದಿಲ್ಲ. ಕಾಲುವೆಯಲ್ಲಿ ನೀರು ಹರಿಸುವ ಸಮಯ ಬಂದಾಗ ಮಾತ್ರ ಕಾಮಗಾರಿ ನಡೆಸಿದಂತೆ ಮಾಡಿ, ಕೈತೊಳೆದುಕೊಳ್ಳುತ್ತಾರೆ. ಇದರಿಂದ ನೀರಿನ ಅಪವ್ಯಯ ಹೆಚ್ಚಾಗುತ್ತದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT