ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡೀ ಜಿಲ್ಲೆಗೆ ಮಹಿಳಾ ಅಭ್ಯರ್ಥಿ ಒಬ್ಬರೇ!

Published 6 ಮೇ 2023, 16:11 IST
Last Updated 6 ಮೇ 2023, 16:11 IST
ಅಕ್ಷರ ಗಾತ್ರ

ಸೂರ್ಯನಾರಾಯಣ ವಿ.

ಚಾಮರಾಜನಗರ: ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಣದಲ್ಲಿರುವ 61 ಅಭ್ಯರ್ಥಿಗಳ ಪೈಕಿ ಕೇವಲ ಒಬ್ಬರು ಮಹಿಳೆ ಇದ್ದಾರೆ.  

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಜಯಶ್ರೀ ರಾಜು ಕೆ.ಎನ್‌ ಎಂಬುವವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಪಕ್ಷಗಳ ಅಭ್ಯರ್ಥಿಗಳಿಗೆ ಪೈಪೋಟಿ ನೀಡುವಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದುಕೊಂಡು ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. 

ನಾಮಪತ್ರ ಸಲ್ಲಿಸಿದವರೇ ಮೂವರು

ಪ್ರಮುಖ ಪಕ್ಷಗಳು ಮಾತ್ರವಲ್ಲ, ಇತರೆ ಪಕ್ಷಗಳು ಕೂಡ ಈ ಬಾರಿ ಮಹಿಳೆಯರಿಗೆ ಅವಕಾಶ ನೀಡಿಲ್ಲ. ನಾಲ್ಕೂ ಕ್ಷೇತ್ರಗಳಲ್ಲಿ ಕೇವಲ ಮೂವರು ಮಾತ್ರ ಮಹಿಳೆಯರು ನಾಮಪತ್ರ ಸಲ್ಲಿಸಿದ್ದರು. 

ಚಾಮರಾಜನಗರದಲ್ಲಿ ನಾಗು ರಮೇಶ್‌ ಅವರು ಪಕ್ಷೇತರರಾಗಿ, ಕೊಳ್ಳೇಗಾಲದಲ್ಲಿ ಬಹುಜನ ಸಮಾಜ ಪಕ್ಷದಿಂದ ರೇಖಾ ಮತ್ತು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಜಯಶ್ರೀ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. 

ನಾಗುರಮೇಶ್‌ ಅವರ ನಾಮಪತ್ರ ತಿರಸ್ಕೃತವಾಗಿತ್ತು. ಕೊಳ್ಳೇಗಾಲದಲ್ಲಿ ರೇಖಾ ನಾಮಪತ್ರ ಸ್ವೀಕೃತವಾಗಿದ್ದರೂ, ವರಿಷ್ಠರ ಸೂಚನೆ ಮೇರೆಗೆ ನಾಮಪತ್ರ ವಾಪಸ್‌ ಪಡೆದಿದ್ದರು. ಅಂತಿಮವಾಗಿ ಕಣದಲ್ಲಿ ಇದ್ದವರು ಒಬ್ಬರೇ. 

ಮಹಿಳೆಯರಿಗಿಲ್ಲ ಅವಕಾಶ

ಜಿಲ್ಲೆಯ ರಾಜಕೀಯ ಇತಿಹಾಸ ನೋಡಿದರೆ, ಮಹಿಳೆಯರು ಸ್ಪರ್ಧಿಸಿರುವುದು ಮತ್ತು ಶಾಸಕರಾಗಿ ಆಯ್ಕೆಯಾಗಿರುವುದು ಕಡಿಮೆ. ಈ ವರೆಗೆ ಜಿಲ್ಲೆಯಲ್ಲಿ ನಾಲ್ವರು ಮಹಿಳೆಯರು ಮಾತ್ರ ಶಾಸನಸಭೆಗೆ ಆಯ್ಕೆಯಾಗಿದ್ದಾರೆ. 

1957ರಲ್ಲಿ ಕೊಳ್ಳೇಗಾಲದ ದ್ವಿಸದಸ್ಯ ಕ್ಷೇತ್ರದಲ್ಲಿ ಕೆಂಪಮ್ಮ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದರು. ಗುಂಡ್ಲುಪೇಟೆ ಕ್ಷೇತ್ರದಿಂದ ಕೆ.ಎಸ್‌.ನಾಗರತ್ನಮ್ಮ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಸಚಿವರಾಗಿಯೂ, ವಿಧಾನಸಭಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಹನೂರು ಕ್ಷೇತ್ರದಿಂದ ಪರಿಮಳಾ ನಾಗಪ್ಪ ಶಾಸಕಿಯಾಗಿದ್ದರು.  ಗುಂಡ್ಲುಪೇಟೆ ಕ್ಷೇತ್ರದಲ್ಲಿ ದಿವಂಗತ ಎಚ್.ಎಸ್‌.ಮಹದೇವಪ್ರಸಾದ್‌ ಅವರ ಪತ್ನಿ ಎಂ.ಸಿ.ಮೋಹನಕುಮಾರಿ ಅವರು ಮೊದಲ ಚುನಾವಣೆಯಲ್ಲೇ ಗೆದ್ದಿದ್ದರು. ಸಚಿವರೂ ಆಗಿದ್ದರು. 

ಈ ಬಾರಿ ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸಿರುವ ಜಯಶ್ರೀ ಅವರು ಎಸ್ಸೆಸ್ಸೆಲ್ಸಿ ಓದಿದ್ದಾರೆ. ಬೇಗೂರು ಹೋಬಳಿಯ ಕೋಟಗೆರೆ ಗ್ರಾಮದವರಾಗಿರುವ ಅವರು, 2015–20ರ ಅವಧಿಯಲ್ಲಿ ಕೋಟೆಗೆರೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ರಾಜಕೀಯದ ಅನುಭವ ಅವರಿಗೆ ಅಷ್ಟೇ ಇರುವುದು. ಇದು ಅವರ ಮೊದಲ ಚುನಾವಣೆ. ತಮ್ಮ ಪತಿಯ ಪ್ರೋತ್ಸಾಹದಿಂದ ಅಖಾಡಕ್ಕೆ ಇಳಿದಿದ್ದು, ಸ್ನೇಹಿತರು, ನೆಂಟರಿಷ್ಟರು ಬೆಂಬಲ ನೀಡುತ್ತಿದ್ದಾರೆ. 

‘ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಸೇರಿದಂತೆ ಸೌಕರ್ಯಗಳಿಲ್ಲ. ಇದುವರೆಗೆ ಶಾಸಕರಾಗಿ ಆಯ್ಕೆಯಾದವರು ಕೆಲಸ ಮಾಡಿಲ್ಲ. ಜನರು ಅದರಲ್ಲೂ ವಿಶೇಷವಾಗಿ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಒಬ್ಬ ಮಹಿಳೆಯಾಗಿ ಎಲ್ಲ ಕಷ್ಟಗಳನ್ನು ಬಲ್ಲೆ. ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂಬ ಉದ್ದೇಶದಿಂದ ನಿಂತಿದ್ದೇನೆ. ‌ಮಹಿಳೆಯರು ನನ್ನ ಅಭ್ಯರ್ಥಿತನವನ್ನು ಒಪ್ಪಿಕೊಂಡಿದ್ದಾರೆ. ಚುನಾವಣೆಯಲ್ಲಿ ಮತದಾರರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ’ ಎಂದು ಹೇಳುತ್ತಾರೆ ಜಯಶ್ರೀ. 

ಅವಕಾಶಗಳನ್ನು ನಾವೇ ಸೃಷ್ಟಿಸಬೇಕು: ಜಯಶ್ರೀ ರಾಜು

‘ಯಾವ ರಾಜಕೀಯ ಪಕ್ಷಗಳೂ ಮಹಿಳೆಯರಿಗೆ ಪ್ರಾಮುಖ್ಯ ಕೊಡುವುದಿಲ್ಲ. ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕಾಗಿದೆ. ನಾನು ಗ್ರಾಮ ಪಂಚಾಯಿತಿ ಸದಸ್ಯೆ ಆಗಿದ್ದವಳು. ಚುನಾವಣೆ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ತಿಳಿದಿದೆ’ ಎಂದು ಜಯಶ್ರೀ ಹೇಳಿದರು.  ‘ಈ ಹಿಂದೆ ಮೈಸೂರಿನ ವೈದ್ಯರಾದ ಡಾ.ಅಜಯ್‌ಕುಮಾರ್‌ ಅವರು ಮಹಿಳೆಯರಿಗಾಗಿ ನಾಯಕತ್ವ ತರಬೇತಿ ಶಿಬಿರ ಏರ್ಪಡಿಸಿದ್ದರು. ಅದರಲ್ಲಿ ಭಾಗವಹಿಸಿದ್ದೆ. ಅದರಿಂದ ಸಾಮಾಜಿಕವಾಗಿ ತೆರೆದುಕೊಂಡೆ. ಮಹಿಳೆಯರು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಾಮಾಜಿಕ ಕೆಲಸಗಳನ್ನು ಮಾಡಲು ಮುಂದೆ ಬರಬೇಕು. ನನ್ನನ್ನು ನೋಡಿ ಉಳಿದವರು ಪ್ರೇರಣೆ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಜಯಶ್ರೀ ರಾಜು
ಜಯಶ್ರೀ ರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT