ಮಂಗಳವಾರ, ಡಿಸೆಂಬರ್ 7, 2021
21 °C
ಅಪರಾಧ ಪತ್ತೆಗೆ ಶ್ವಾನ ನಿಯೋಜನೆ, ಏಳು ತಿಂಗಳ ತರಬೇತಿ ಬಳಿಕ ಅರಣ್ಯ ಇಲಾಖೆಗೆ ಸೇರ್ಪಡೆ

ಚಾಮರಾಜನಗರ: ಬಿಆರ್‌ಟಿ ರಕ್ಷಣೆಗೆ ‘ಝಾನ್ಸಿ’ಯ ಶಕ್ತಿ!

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮಾದರಿಯಲ್ಲಿ ಅರಣ್ಯ ಅಪರಾಧಗಳ ಪತ್ತೆಗೆ ಅನುಕೂಲವಾಗುವಂತೆ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲೂ ತರಬೇತಿ ಪಡೆದ ಶ್ವಾನವೊಂದನ್ನು ಅರಣ್ಯ ಇಲಾಖೆ ನಿಯೋಜಿಸಿದೆ. 

ಜರ್ಮನ್‌ ಶೆಫರ್ಡ್‌ ತಳಿಯ, ಝಾನ್ಸಿ ಎಂಬ ಹೆಣ್ಣು ಶ್ವಾನ ಗುರುವಾರ ಅರಣ್ಯ ಇಲಾಖೆಗೆ ಸೇರ್ಪಡೆಗೊಂಡಿದೆ. ಒಂಬತ್ತು ತಿಂಗಳ ಈ ‘ಝಾನ್ಸಿ’ಯು ಏಳು ತಿಂಗಳ ಕಾಲ ಚಂಡೀಗಡದ ಐಟಿಬಿಪಿ ತರಬೇತಿ ಕೇಂದ್ರದಲ್ಲಿ ಅಪರಾಧ ಪತ್ತೆಗೆ ಸಂಬಂಧಿಸಿದ ತರಬೇತಿ ಪಡೆದಿದೆ. 

ಅರಣ್ಯ ರಕ್ಷಕ ಬಸವರಾಜು ಹಾಗೂ ವಾಚರ್‌ ಸಿದ್ದರಾಮಣ್ಣ ಅವರು ಶ್ವಾನದ ಪಾಲನೆಯ ಜವಾಬ್ದಾರಿ ಹೊತ್ತಿದ್ದು, ಚಂಡೀಗಡದಲ್ಲಿ ನಡೆದ ತರಬೇತಿಯಲ್ಲೂ ಭಾಗವಹಿಸಿದ್ದರು. ಪುಣಜನೂರು ವಲಯದಲ್ಲಿ ಶ್ವಾನವನ್ನು ನಿಯೋಜಿಸಲು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಆಡಳಿತ ನಿರ್ಧರಿಸಿದೆ. 

ಎನ್‌ಜಿಒ ಸಹಾಯ: ಟ್ರಾಫಿಕ್‌ ಇಂಡಿಯಾ ಎಂಬ ಸ್ವಯಂ ಸೇವಾ ಸಂಸ್ಥೆಯ ಸಹಕಾರದೊಂದಿಗೆ ಶ್ವಾನವನ್ನು ಇಲಾಖೆಗೆ ಸೇರ್ಪಡೆಗೊಳಿಸಲಾಗಿದೆ. 

‘ಕೆಲವು ತಿಂಗಳ ಹಿಂದೆ ಟ್ರಾಫಿಕ್‌ ಇಂಡಿಯಾದ ಪ್ರತಿನಿಧಿಗಳು, ತರಬೇತಿ ಪಡೆದ ಶ್ವಾನ ಇದ್ದರೆ, ಅರಣ್ಯ ಅಪರಾಧ ಚಟುವಟಿಕೆಗಳ ಮೇಲೆ ನಿಗಾ ಇಡುವುದಕ್ಕೆ ಹಾಗೂ ಪ್ರಕರಣಗಳನ್ನು ಭೇದಿಸಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದ್ದರು. ಬೆಂಬಲ ನೀಡಲೂ ಅವರು ಮುಂದೆ ಬಂದರು. ಅವರ ನೆರವಿನಿಂದ ಈ ಯೋಜನೆ ಕಾರ್ಯಗತವಾಗಿದೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಜಿ.ಸಂತೋಷ್‌ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ತರಬೇತಿ ಪಡೆದ ಶ್ವಾನದ ನಿಯೋಜನೆಯಿಂದ ಅರಣ್ಯ ಸಂರಕ್ಷಣೆಗೆ ನೆರವಾಗಲಿದೆ. ಕಳ್ಳಬೇಟೆ ಸೇರಿದಂತೆ ಇತರೆ ಅರಣ್ಯ ಅಪರಾಧ ಚಟುವಟಿಕೆಗಳ ಮೇಲೆ ನಿಗಾ ಇಡಲು ಹಾಗೂ ಅವರ ಬಗ್ಗೆ ಸುಳಿವು, ಮಾಹಿತಿ ಸಂಗ್ರಹಿಸಲು ಇಲಾಖೆಯ ಸಹಾಯವಾಗಲಿದೆ’ ಎಂದು ಅವರು ಹೇಳಿದರು. 

ಸದ್ಯ ಝಾನ್ಸಿಯು ತನ್ನ ಪಾಲಕರಾದ ಬಸವರಾಜು, ಸಿದ್ದರಾಮಣ್ಣ ಅವರ ಸೂಚನೆಯನ್ನು ಪಾಲಿಸುತ್ತಿದೆ. ಸೆಲ್ಯೂಟ್‌ ಮಾಡುವುದು, ಉರುಳಾಡುವುದು, ಸೂಚನೆಗೆ ಅನುಸಾರವಾಗಿ ಎದ್ದುನಿಲ್ಲುವುದು, ಕುಳಿತುಕೊಳ್ಳುವುದು, ಬೊಗಳುವುದು... ಹೀಗೆ ಎಲ್ಲವನ್ನೂ ಮಾಡುತ್ತಿದೆ. ಬಿಆರ್‌ಟಿ ಅರಣ್ಯ ಪರಿಚಯ, ಸ್ಥಳೀಯ ವಾತಾವರಣಕ್ಕೆ ಅದು ಇನ್ನಷ್ಟೇ ಹೊಂದಿಕೊಳ್ಳಬೇಕಿದೆ. ಬಿಆರ್‌ಟಿ ಸಿಬ್ಬಂದಿ ಇನ್ನೂ ಕೆಲವು ತಿಂಗಳು ಝಾನ್ಸಿಗೆ ತರಬೇತಿ ನೀಡಲಿದ್ದಾರೆ.

ಬಂಡೀಪುರ ಮಾದರಿ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಅರಣ್ಯ ಇಲಾಖೆ 2015ರಲ್ಲಿ ‘ರಾಣಾ’ ಎಂಬ ಜರ್ಮನ್‌ ಶೆಫರ್ಡ್‌ ತಳಿಯ ಗಂಡು ಶ್ವಾನವನ್ನು ನಿಯೋಜಿಸಲಾಗಿತ್ತು. 

ಸೂಕ್ಷ್ಮಮತಿ ಹಾಗೂ ಚುರುಕು ಬುದ್ಧಿಯ ರಾಣಾ, ಬಂಡೀಪುರ ಸೇರಿದಂತೆ ಇತರೆ ರಕ್ಷಿತಾರಣ್ಯಗಳಲ್ಲಿ ನಡೆದ ಅಪರಾಧ ಪತ್ತೆ ಕಾರ್ಯಾಚರಣೆ, ಹುಲಿ ಸೆರೆಹಿಡಿಯುವ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದೆ. ಬಂಡೀಪುರದಲ್ಲಿ ಹಲವು ಅಪರಾಧ ಪ್ರಕರಣಗಳನ್ನು ಭೇದಿಸಲು ಇದು ಅಧಿಕಾರಿಗಳಿಗೆ ನೆರವಾಗಿದೆ. ನಿವೃತ್ತಿಯ ಅಂಚಿನಲ್ಲಿದ್ದರೂ ಈಗಲೂ ಅದು ಕರ್ತವ್ಯದಲ್ಲಿದೆ. ಅದರ ಜಾಗಕ್ಕೆ, ಮಾರ್ಗರೇಟ್‌ ಎಂಬ ಹೆಸರಿನ ಮುಧೋಳ ತಳಿಯ ಹೆಣ್ಣು ಶ್ವಾನವನ್ನು ನಿಯೋಜಿಸಲಾಗಿದೆ. ರಾಣಾನ ಮಾರ್ಗದರ್ಶನದಲ್ಲಿ ಮಾರ್ಗರೆಟ್‌, ಅಪರಾಧ ಪತ್ತೆಯ ಪಟ್ಟುಗಳನ್ನು ಕಲಿಯುತ್ತಿದೆ. 

ಈಗ ಇದೇ ಮಾದರಿಯಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಅರಣ್ಯ ಇಲಾಖೆಯು ಶ್ವಾನವನ್ನು ನಿಯೋಜಿಸಿದೆ.

***

7 ತಿಂಗಳು ತರಬೇತಿ ಪಡೆದು ಬಂದಿದ್ದರೂ, ಶ್ವಾನಕ್ಕೆ ಸ್ಥಳೀಯವಾಗಿ ಇನ್ನಷ್ಟು ತರಬೇತಿಯ ಅಗತ್ಯವಿದೆ. ನಮ್ಮ ಸಿಬ್ಬಂದಿಯೇ ನೀಡಲಿದ್ದಾರೆ.
-ಡಾ.ಜಿ.ಸಂತೋಷ್‌ಕುಮಾರ್‌, ಬಿಆರ್‌ಟಿ ಡಿಸಿಎಫ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು