ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನಾವೂ ಮನುಷ್ಯರೇ, ಮಾನವರಂತೆ ನೋಡಿ....'

ಕೊಳ್ಳೇಗಾಲ: ಯರಕಟ್ಟೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ
Last Updated 20 ಮಾರ್ಚ್ 2022, 4:48 IST
ಅಕ್ಷರ ಗಾತ್ರ

ಕೊಳ್ಳೇಗಾಲ: ‘ನಾವೂ ಮನುಷ್ಯರೇ, ನಮ್ಮನ್ನೂ ಮನುಷ್ಯರಂತೆ ನೋಡಿ. ಇಲ್ಲವಾದರೆ ಒಂದಿಷ್ಟು ವಿಷವನ್ನಾದರೂ ನೀಡಿ...’

ತಾಲ್ಲೂಕಿನ ಯರಕಟ್ಟೆ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸೋಲಿಗ ಸಮುದಾಯದ ಮುಖಂಡರೊಬ್ಬರು ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ಮುಂದಿಟ್ಟ ಬೇಡಿಕೆ ಇದು.

ಗ್ರಾಮದ ಸೋಲಿಗ ಜನಾಂಗದ ದೊರೆಸ್ವಾಮಿ ಅವರು ಮಾತನಾಡಿ, ‘ನಮ್ಮ ಗ್ರಾಮದಲ್ಲಿ ಸೋಲಿಗರಿಗೆ ಸರಿಯಾಗಿ ಪಡಿತರ ಅಕ್ಕಿ ನೀಡುವುದಿಲ್ಲ. ಕೇಳಿದರೆ ‘ನಾಳೆ ಬಾ, ನಾಳೆ ಬಾ‘ ಎಂದು ಸಬೂಬು ಹೇಳುತ್ತಾರೆ. ನಾವು ಕಡು ಬಡವರು. ಗ್ರಾಮದಲ್ಲಿ 60 ಕ್ಕೂ ಹೆಚ್ಚು ಮಂದಿಗೆ ವೃದ್ಧಾಪ್ಯ ವೇತನ ವರ್ಷದಿಂದಲೂ ಬಂದಿಲ್ಲ. ಸರ್ಕಾರದಿಂದ ನಮಗೆ ಸೌಲಭ್ಯಗಳೂ ಸಹ ದೊರಕಿಲ್ಲ ನಮಗೂ ಮತ್ತು ಪ್ರಾಣಿಗಳಿಗೆ ಏನು ವ್ಯತ್ಯಾಸ’ ಎಂದು ಭಾವುಕರಾದರು.

ತಕ್ಷಣ ಪ್ರತಿಕ್ರಿಯಿಸಿದಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ವಾರದಲ್ಲಿ ಇವರಿಗೆ ತಲುಪಬೇಕಾದ ಪಡಿತರ ಅಕ್ಕಿ, ವೃದ್ಧಾಪ್ಯ ವೇತನ ಹಾಗೂ ಎಲ್ಲ ಸೌಲಭ್ಯಗಳನ್ನು ನೀಡಬೇಕು‘ ಎಂದು ತಹಶೀಲ್ದಾರ್ ಮಂಜುಳಾ ಅವರಿಗೆ ತಾಕೀತು ಮಾಡಿದರು.

ಅರೇಪಾಳ್ಯ ಗ್ರಾಮದ ಶಾಲೋಮನ್ ಮತ್ತು ರೈತ ನಾಗರಾಜು ಅವರು ಮಾತನಾಡಿ, ‘ಗ್ರಾಮದಲ್ಲಿ ನಿತ್ಯವೂ ಕಾಡಾನೆ, ಜಿಂಕೆ, ಕರಡಿ, ಹುಲಿ, ಕಾಡು ಹಂದಿಗಳ ಹಾವಳಿ ಹೆಚ್ಚಾಗಿದೆ. ಪ್ರಾಣಿಗಳ ಹಾವಳಿಯಿಂದ ಗ್ರಾಮದಲ್ಲಿ ಭಯದ ವಾತವರಣ ಸೃಷ್ಟಿಯಾಗಿದೆ. ಕಬ್ಬು, ಜೋಳ, ರಾಗಿ, ಭತ್ತ ಸೇರಿದಂತೆ ಎಲ್ಲ ಬೆಳೆಗಳನ್ನು ಹಾಳು ಮಾಡುತ್ತಿವೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ, ಉಡಾಫೆ ಉತ್ತರ ನೀಡುತ್ತಿದ್ದಾರೆ. ಬೆಳೆ ಪರಿಹಾರವನ್ನು ನಾಲ್ಕು ವರ್ಷಗಳಿಂದಲೂ ನೀಡಿಲ್ಲ’ ಎಂದು ಆರೋಪಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಅವರು ಮಾತನಾಡಿ, ‘ಯಾರೂ ಭಯಪಡುವ ಅಗತ್ಯವಿಲ್ಲ ಎಲ್ಲಿ ಆನೆಗಳ ಹಾವಳಿ ಇದೆ ಎಂದು ಹೇಳಿ. ಅಲ್ಲಿಗೆ ಅರಣ್ಯ ಇಲಾಖೆ ವತಿಯಿಂದ ಆನೆ ಕಂದಕ ಹಾಗೂ ಬೇಲಿಗಳನ್ನು ನಿರ್ಮಿಸಲಾಗುವುದು’ ಎಂದರು. ಈ ಬಗ್ಗೆ ಗಮನ ಹರಿಸುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿವಣ್ಣ ಮಾತನಾಡಿ, ‘ಗ್ರಾಮದಲ್ಲಿ ಸರಿಯಾಗಿ ರಸ್ತೆಗಳಿಲ್ಲ. ಗ್ರಾಮದಲ್ಲಿ ಮೊಬೈಲ್‌ ನೆಟ್‍ವರ್ಕ ಸಮಸ್ಯೆ ಇದೆ. ಯಾರಿಗೂ ಯಾವ ಮಾಹಿತಿ ತಿಳಿಸಲು ಆಗುವುದಿಲ್ಲ. ಸೋಲಿಗರ 40 ಮನೆಗಳು ಬೀಳುವ ಹಂತದಲ್ಲಿ. ಇದೆ ಸರ್ಕಾರದ ವತಿಯಿಂದ ಮನೆಗಳನ್ನು ನೀಡಿ ಎಂದರು’ ಎಂದು ಮನವಿ ಮಾಡಿದರು.

ಸ್ಥಳೀಯ ಭಾಗದಲ್ಲಿ ಇ-ಸ್ವತ್ತು ಪಡೆಯಲು ತೊಂದರೆಯಾಗುತ್ತಿರುವ ಬಗ್ಗೆ ಗಮನಸೆಳೆದ ವೇಳೆ ಕೆ.ಎಂ.ಗಾಯತ್ರಿ ಅವರು ‘ಈ ಭಾಗದಲ್ಲಿ ಮ್ಯಾಪಿಂಗ್ ಸಮಸ್ಯೆಯಿದೆ. ಇದನ್ನು ಸರಿಪಡಿಸಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಕೂಡಲೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು‘ ಎಂದು ಒತ್ತಾಯಿಸಿದರು.

‘ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ಕಂಡುಬಂದರೆ ಕೂಡಲೇ ಕ್ರಮವಹಿಸಿ ಪ್ರಕರಣ ದಾಖಲು ಮಾಡಬೇಕು‘ ಎಂದು ಗಾಯತ್ರಿ ಅವರು ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ಸೂಚಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಯೋಜನೆಗಳ ಕುರಿತ ವಸ್ತುಪ್ರದರ್ಶನ ಮಳಿಗೆಗಳನ್ನು ಹಾಕಲಾಗಿತ್ತು.

ಉಪವಿಭಾಗಾಧಿಕಾರಿ ಗಿರೀಶ್‌ ದಿಲೀಪ್‌ ಬದೋಲೆ,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷ ಕೆಂಪರಾಜು, ಸದಸ್ಯರಾದ ಕುಮಾರ್, ರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಅರ್ಥಪೂರ್ಣ ಕಾರ್ಯಕ್ರಮ: ಎನ್.ಮಹೇಶ್

ವೇದಿಕೆ ಕಾರ್ಯಕ್ರಮದಲ್ಲಿ ಸರ್ಕಾರಿ ಸವಲತ್ತುಗಳನ್ನು ವಿತರಣೆ ಮಾಡಿ ಮಾತನಾಡಿದ ಶಾಸಕ ಎನ್.ಮಹೇಶ್‌ ಅವರು ಮಾತನಾಡಿ, ‘ಜಿಲ್ಲಾಡಳಿತವೇ ಗ್ರಾಮಕ್ಕೆ ಬಂದು ಜನರ ಅಹವಾಲು ಆಲಿಸುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಮಹತ್ವ ಹಾಗೂ ಅರ್ಥಪೂರ್ಣ ಎನಿಸಿದೆ.ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಜನರ ಬಳಿ ತೆರಳಿ ಅವರ ಸಮಸ್ಯೆಗಳ ಪರಿಹಾರಕ್ಕೆ ತೊಡಗಿದ್ದಾರೆ‘ ಎಂದರು.

ಕಂದಾಯ ದಾಖಲೆಗಳನ್ನು ಸಾರ್ವಜನಿಕರು ಈ ಹಿಂದೆ ಕಚೇರಿಗಳಿಗೆ ಅಲೆದು ಪಡೆಯಬೇಕಿತ್ತು. ಇಂದು ಮನೆ ಬಾಗಿಲಿಗೆ ಕಂದಾಯ ದಾಖಲೆಗಳನ್ನು ತಲುಪಿಸುವ ಉತ್ತಮ ಯೋಜನೆಗೂ ಚಾಲನೆ ನೀಡಲಾಗಿದೆ. ಇನ್ನು ಮುಂದೆ ಪ್ರಮಾಣ ಪತ್ರಗಳು, ಕಂದಾಯ ದಾಖಲೆಗಳನ್ನು ಜನರಿಗೆ ನೇರವಾಗಿ ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ತಿಳಿಸಿದರು.

‘ಇಂದಿನ ಕಾರ್ಯಕ್ರಮದಲ್ಲಿ 75 ಅರ್ಜಿಗಳು ಸ್ವೀಕೃತವಾಗಿವೆ. ಅಂಗನವಾಡಿಗೆ ಬೇಡಿಕೆಯಿದ್ದು ಗ್ರಾಮದ ಶಾಲೆಯಲ್ಲಿಯೇ ಈಗಿರುವ ಅಂಗನವಾಡಿ ಆರಂಭಿಸಲು ಅಧಿಕಾರಿಗಳು ಪರಿಶೀಲಿಸಬೇಕು. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ದ ಮಹಿಳೆಯರು ಧ್ವನಿ ಎತ್ತಿದ್ದಾರೆ. ಕೂಡಲೇ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು’ ಎಂದು ಶಾಸಕರು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT