ಮಂಗಳವಾರ, ಮೇ 18, 2021
30 °C
ಬಂಡೀಪುರ ವ್ಯಾಪ್ತಿಯ ಮದ್ದೂರು ಕಾಲೊನಿ ನಿವಾಸಿಯ ಸಾಧನೆ

ಸೋಲಿಗ ಮಹಿಳೆ ರತ್ನಮ್ಮಗೆ ಪಿಎಚ್‌.ಡಿ ಗರಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕಾಡಿನಲ್ಲಿ ಹುಟ್ಟಿ, ಬಡತನದ ಕಷ್ಟದಲ್ಲಿ ಶಿಕ್ಷಣ ಪಡೆದು, ಬುಡಕಟ್ಟು ಸಮುದಾಯದವರ ಏಳಿಗೆಗಾಗಿ ಶ್ರಮಿಸುತ್ತಿರುವ ಸೋಲಿಗ ಮಹಿಳೆಯೊಬ್ಬರ ಶೈಕ್ಷಣಿಕ ಮುಕುಟಕ್ಕೆ, ಈಗ ಪಿಎಚ್‌.ಡಿ ಪದವಿಯ ಗರಿಯೂ ಸೇರ್ಪಡೆಯಾಗಿದೆ. ಅವರ ಹೆಸರು ರತ್ನಮ್ಮ ಎಸ್‌. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಕಾಲೊನಿ ನಿವಾಸಿಯಾಗಿರುವ ರತ್ನಮ್ಮ, ಸೋಲಿಗ ಸಮುದಾಯದಲ್ಲಿ ಪಿಎಚ್‌.ಡಿ ಮಾಡಿದ ರಾಜ್ಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರೊ.ಹಿ.ಚಿ. ಬೋರಲಿಂಗಯ್ಯ ಹಾಗೂ ಪ್ರೊ.ಕೆ.ಎಂ.ಮೇತ್ರಿ ಅವರ ಮಾರ್ಗದರ್ಶನದಲ್ಲಿ ಅವರು ಮಂಡಿಸಿರುವ ‘ಸೋಲಿಗರು, ಬುಡಕಟ್ಟು: ಸಮಾಜಶಾಸ್ತ್ರೀಯ ಅಧ್ಯಯನ’ ಎಂಬ ಪ್ರೌಢಪ್ರಬಂಧವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪಿಎಚ್‌.ಡಿ ಪದವಿಗೆ ಅಂಗೀಕರಿಸಿದೆ. 

1997–98ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರತ್ನಮ್ಮ, 2013ರಲ್ಲಿ ಪಿಎಚ್‌ಡಿಗೆ ನೋಂದಣಿ ಮಾಡಿಕೊಂಡಿದ್ದರು. ಸಂಶೋಧನೆಗಾಗಿ ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳ 124 ಹಳ್ಳಿಗಳಲ್ಲಿ ಅಧ್ಯಯನ ನಡೆಸಿದ್ದಾರೆ.

ಅರಣ್ಯದ ಬದುಕು: ಬಂಡೀಪುರದ ಚಮ್ಮನಹಳ್ಳ ಎಂಬ ದಟ್ಟ ಅರಣ್ಯ ಪ್ರದೇಶದಲ್ಲಿ 1970ರಲ್ಲಿ ಜನಿಸಿದ್ದ ರತ್ನಮ್ಮಬಡತನದಲ್ಲೇ ಬೆಳೆದು ಬಂದವರು. ಆದರೂ, ಛಲ ಬಿಡದೆ ಶಿಕ್ಷಣ ಪಡೆದರು. ಅದು ಇಂದು ಅವರನ್ನು ಶೈಕ್ಷಣಿಕವಾಗಿ ಗುರುತಿಸುವಂತೆ ಮಾಡಿದೆ. 1ರಿಂದ 5ನೇ ತರಗತಿವರೆಗೆ ಮದ್ದೂರಿನ ಆಶ್ರಮ
ಶಾಲೆಯಲ್ಲಿ, 7ರಿಂದ 10ನೆ ತರಗತಿವರೆಗೆ ಗುಂಡ್ಲುಪೇಟೆಯಲ್ಲಿ ಓದಿದರೆ; ಪಿಯುಸಿಯಿಂದ ಸ್ನಾತಕೋತ್ತರ ಪದವಿಯವರೆಗಿನ ಶಿಕ್ಷಣ ಮೈಸೂರಿನಲ್ಲಿ ಆಯಿತು. ಮಹಿಳಾ ಅಧ್ಯಯನ ವಿಷಯದಲ್ಲಿ ಡಿಪ್ಲೊಮಾ ಕೂಡ ಮಾಡಿದ್ದಾರೆ.

‘ನನ್ನ ಶಿಕ್ಷಣಕ್ಕಾಗಿ ಹಲವರು ಆರ್ಥಿಕ ಸಹಕಾರ ನೀಡಿದ್ದಾರೆ. ಸಂಶೋಧನಾ ಅಧ್ಯಯನಕ್ಕೆ ನೆರವಾಗಿದ್ದಾರೆ. ಈ ಶೈಕ್ಷಣಿಕ ಸಾಧನೆಯ ಹಿಂದೆ ಪತಿ ದೊಡ್ಡಯ್ಯ ನೀಡಿರುವ ಸಹಕಾರವೂ ದೊಡ್ಡದು’ ಎಂದು ರತ್ನಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಅರಣ್ಯವಾಸಿಗಳ ಪರ ಹೋರಾಟ

ಹಲವು ವರ್ಷಗಳಿಂದ ಅರಣ್ಯವಾಸಿಗಳ ಶಿಕ್ಷಣ, ಸಂಘಟನೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಹೋರಾಟ ಮಾಡುತ್ತಿರುವ ರತ್ನಮ್ಮ, ಮದ್ದೂರು ಕಾಲೊನಿಯಲ್ಲಿ ‘ಸಾಯಿ ಪ್ರಗತಿ ಫೌಂಡೇಷನ್‌’ ಎಂಬ ಸ್ವಯಂ ಸೇವಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಅರಣ್ಯ ಹಕ್ಕು ರಾಜ್ಯ ಸಮಿತಿಯ ಸದಸ್ಯೆಯಾಗಿರುವ ಅವರು ಬೇರಂಬಾಡಿ ಗ್ರಾಮ ಪಂಚಾಯಿತಿ ಸದಸ್ಯೆಯೂ ಹೌದು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು