ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಯೋಜನೆ ಘೋಷಣೆ ವಿರುದ್ಧ ಪ್ರತಿಭಟನೆ

ಮಲೆ ಮಹದೇಶ್ವರ ವನ್ಯಧಾಮ: ಇಲಾಖೆ ಪ್ರಸ್ತಾವಕ್ಕೆ ಸೋಲಿಗರ ತೀವ್ರ ವಿರೋಧ
Last Updated 25 ಮೇ 2022, 16:02 IST
ಅಕ್ಷರ ಗಾತ್ರ

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶದ ಎಂದು ಘೋಷಿಸುವುದನ್ನು ವಿರೋಧಿಸಿ ಸೋಲಿಗರು ಬುಧವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ದಿ ಸಂಘ ಹಾಗೂ ಹನೂರು ತಾಲ್ಲೂಕು ಸೋಲಿಗ ಅಭಿವೃದ್ದಿ ಸಂಘದ ಆಶ್ರಯದಲ್ಲಿ ನೂರಾರು ಸೋಲಿಗರುಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಆವರಣದಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದವರೆಗೂ ರ‍್ಯಾಲಿ ಕೈಗೊಂಡು ನಂತರ ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

‘ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯಪ್ರದೇಶದಲ್ಲಿ 56 ಪೋಡುಗಳು, ಕಾಲೊನಿಗಳಲ್ಲಿ 2,500 ಸೋಲಿಗ ಕುಟುಂಬಗಳು ಸಮಾರು 15,000 ಜನರ ಅರಣ್ಯದ ಮಧ್ಯದಲ್ಲಿ ಮತ್ತು ಅಂಚಿನಲ್ಲಿ ವಾಸವಾಗಿದ್ದು, ಅರಣ್ಯದಲ್ಲಿ ದೊರೆಯುವ ಕಿರು ಅರಣ್ಯ ಉತ್ಪನ್ನಗಳು ಹಾಗೂ ಅರಣ್ಯ ಭೂಮಿಯಲ್ಲಿ ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದೇವೆ. ಸೋಲಿಗರಾದ ನಾವು ಅರಣ್ಯಪ್ರದೇಶವನ್ನು ಮತ್ತು ವನ್ಯಜೀವಿಗಳನ್ನು ಶತಶತಮಾನಗಳಿಂದಲೂ ಸಂರಕ್ಷಿಸಿಕೊಂಡು ಬಂದಿದ್ದೇವೆ’ ಎಂದರು.

‘ಮಲೆ ಮಹದೇಶ್ವರ ಸ್ವಾಮಿ ನಮ್ಮ ಕುಲದೈವ. ಮಹದೇಶ್ವರು ಈ ಪ್ರದೇಶಕ್ಕೆ ಬರುವುದಕ್ಕಿಂತಲೂ ಮೊದಲೇ ನಾವು ಇಲ್ಲಿ ನೆಲೆಸಿದ್ದೇವೆ. ಹುಲಿ ಇತರೆ ಪ್ರಾಣಿಗಳೊಂದಿಗೆ ಶತ ಶತಮಾನಗಳಿಂದ ಬದುಕುತ್ತಿದ್ದೇವೆ. ಹುಲಿಗಳ ನಡತೆ ನಮಗೆ ಗೊತ್ತಿದೆ. ನಮ್ಮ ನಡೆ ಅವುಗಳಿಗೂ ತಿಳಿದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಾನೂನು ಪ್ರಕಾರ ಗ್ರಾಮಸಭೆ ನಡೆಸದೆ ಮತ್ತು 19 ಮತ್ತು 21ನೇ ಅಧಿಸೂಚನೆ ಹೊರಡಿಸದೆ ಗ್ರಾಮಸಭೆಯ ಒಪ್ಪಿಗೆ ಇಲ್ಲದೆ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವುದು ಕಾನೂನು ಉಲ್ಲಂಘನೆ’ ಎಂದರು.

‘ದಿನನಿತ್ಯ ಲಕ್ಷಾಂತರ ಭಕ್ತರು ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಹುಲಿ ಯೋಜನೆ ಘೋಷಣೆಯಿಂದ ರಾತ್ರಿ ವಾಹನಗಳ ಸಂಚಾರ ನಿರ್ಬಂಧಿಸುವ ಸಾಧ್ಯತೆ ಇದೆ ಇದರಿಂದ ಭಕ್ತರಿಗೆ ತೊಂದರೆಯಾಗಲಿದೆ’ ಎಂದರು.

ಪರಿಸರವಾದಿಗಳ ವಿರುದ್ಧ ಆಕ್ರೋಶ: ‘ಪರಿಸರವಾದಿಗಳು ಎಂದು ಗುರುತಿಸಿಕೊಂಡಿರುವ ಕೆಲವರು ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ. ಯೋಜನೆಗೆ ವಿರೋಧಿಸುವವರನ್ನು ಪಟ್ಟಭದ್ರ ಹಿತಾಸಕ್ತಿಗಳು ಎಂದು ಕರೆಯುತ್ತಿದ್ದಾರೆ. ಪರಿಸರ ವಾದಿಗಳ ಮುಖವಾಡ ಹಾಕಿದವರೇ ಪಟ್ಟಭದ್ರ ಹಿತಾಸಕ್ತಿಗಳು’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ದಿ ಸಂಘದ ಅಧ್ಯಕ್ಷ ಸಿ.ಮಹದೇವ, ಕಾರ್ಯದರ್ಶಿ ಡಾ.ಸಿ.ಮಾದೇಗೌಡ, ಹನೂರು ತಾಲ್ಲೂಕು ಸೋಲಿಗರ ಅಭಿವೃದ್ಧಿ ಸಂಘದ ಕಾರ್ಯದರ್ಶಿ ವಿ.ಮುತ್ತಯ್ಯ ಇತರರು ಮಾತನಾಡಿದರು.

ಯಳಂದೂರು ತಾಲ್ಲೂಕು ಸೋಲಿಗ ಅಭಿವೃದ್ದಿ ಸಂಘದ ಅಧ್ಯಕ್ಷ ದಾಸೇಗೌಡ, ಕಾರ್ಯದರ್ಶಿ ಜಡೇಗೌಡ, ಹನೂರು ತಾಲ್ಲೂಕು ಅಧ್ಯಕ್ಷ ಯು.ರಂಗೇಗೌಡ, ಚಾಮರಾಜನಗರ ಅಧ್ಯಕ್ಷ ಸಿ.ಕೋಣೂರೇಗೌಡ, ಕಾರ್ಯದರ್ಶಿ ನಂಜೇಗೌಡ, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷೆ ಪುಟ್ಟಮ್ಮ, ಕಾರ್ಯದರ್ಶಿ ಮಾಧು, ಮುಖಂಡರಾದ ಮಹದೇವಯ್ಯ, ಎಂ.ರಂಗೇಗೌಡ, ಮುನಿಯಮ್ಮ, ಮಾದಪ್ಪ, ಚಂದ್ರಪ್ಪ, ಮಹದೇವಯ್ಯ, ನಾಗಮ್ಮ ಬಸಮ್ಮ ಇತರರು ಇದ್ದರು.

‘ಮೂಲಸೌಕರ್ಯಗಳಿಗೆ ಅಡ್ಡಿ’

‘ಮಲೆ ಮಹದೇಶ್ವರ ವನ್ಯಧಾಮದಲ್ಲಿಸೋಲಿಗರ 56 ಪೋಡುಗಳು, ಬೇಡಗಂಪಣ ಸಮುದಾಯರವರು ಹಾಗೂ ಇತರೆ ಸಮುದಾಯದವರು 150 ಗ್ರಾಮಗಳು ಅರಣ್ಯದ ಮಧ್ಯದಲ್ಲಿ ಮತ್ತು ಅರಣ್ಯದ ಅಂಚಿನಲ್ಲಿವೆ. ಈ ಯೋಜನೆಯಿಂದ ಈ ಎಲ್ಲ ಗ್ರಾಮಗಳಿಗೂ ತೊಂದರೆಯಾಗುತ್ತದೆ. ಅರಣ್ಯ ಹಕ್ಕು ಕಾಯ್ದೆ 2006ರಲ್ಲಿ 25 ಸಮುದಾಯ ಹಕ್ಕುಗಳು ಮತ್ತು 600 ಕುಟುಂಬಗಳಿಗೆ ಭೂಮಿಯ ಹಕ್ಕು ಸಿಕ್ಕಿವೆ. ಇನ್ನೂ ಭೂಮಿ ಮತ್ತು ಸಮುದಾಯದ ಹಕ್ಕುಗಳು ಬಾಕಿ ಇರುತ್ತದೆ. ಹುಲಿ ಯೋಜನೆ ಘೋಷಣೆ ಮಾಡಿದರೆ ಹಕ್ಕುಗಳಿಗೆ ತೊಂದರೆಯಾಗುತ್ತದೆ’ ಎಂದು ಪ್ರತಿಭಟನಕಾರರು ಹೇಳಿದರು.

‘ಹುಲಿ ಯೋಜನೆಯಿಂದ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಮನೆ, ರಸ್ತೆ, ವಿದ್ಯುತ್ ಸಂಪರ್ಕಗಳ ಮೇಲೆ ನಿರ್ಭಂಧ ಹೇರಲಾಗುತ್ತದೆ. ಈಗಾಗಲೇ ಬಿಳಿಗಿರಿರಂಗಸ್ವಾಮಿ ದೇವಸ್ಥಾನ ಹುಲಿ ಯೋಜನೆ ಮತ್ತು ಬಂಡಿಪುರ ಹುಲಿ ಯೋಜನೆ ಪ್ರದೇಶದಲ್ಲಿ ಸೋಲಿಗ ಸಮುದಾಯದವರಿಗೆ ಅನೇಕ ಸೌಕರ್ಯಗಳಿಗೆ ನಿರ್ಬಂಧ ಹೇರಿ ತೊಂದರೆ ನೀಡಲಾಗುತ್ತಿದೆ ನೀಡುತ್ತಿದ್ದಾರೆ. ಪರಿಸರವಾದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ಹುಲಿಗಳ ಸಂಖ್ಯೆ ಕಡಿಮೆ ಇದ್ದರೂ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವುದು ಸರಿಯಾದ ಕ್ರಮವಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT