ಭಾನುವಾರ, ನವೆಂಬರ್ 28, 2021
20 °C
ಹಣ್ಣುಗಳು, ಮಾಂಸ ಧಾರಣೆ ಯಥಾಸ್ಥಿತಿ

ಮಳೆ: ತರಕಾರಿ ತುಟ್ಟಿ, ಹೂವಿನ ಧಾರಣೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಭಾರಿ ಮಳೆ ತರಕಾರಿ ಧಾರಣೆಯ ಮೇಲೆ ಪರಿಣಾಮ ಬೀರಿದ್ದು, ಪ್ರಮುಖ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ. ಹೂವುಗಳ ಧಾರಣೆಯಲ್ಲಿ ಭಾರಿ ಕುಸಿತವಾಗಿದೆ. 

ನಗರದ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ಟೊಮೆಟೊ, ದಪ್ಪ ಮೆಣಸಿನ‌ಕಾಯಿ, ಗೆಡ್ಡೆಕೋಸು, ಬೆಳ್ಳುಳ್ಳಿ, ಬದನೆಕಾಯಿ, ಮೂಲಂಗಿ ಬೆಲೆಗಳು ಏರಿಕೆ ಕಂಡರೆ, ಕ್ಯಾರೆಟ್‌, ನುಗ್ಗೇಕಾಯಿ, ಸೌತೆಕಾಯಿಗಳ ಬೆಲೆ ಇಳಿದಿದೆ. 

ಟೊಮೆಟೊ ಬೆಲೆ ಕೆ.ಜಿ.ಗೆ ₹ 10 ಹೆಚ್ಚಾಗಿದೆ. ಕಳೆದ ವಾರ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ₹ 30 ಇತ್ತು. ಹಲವು ವಾರಗಳಿಂದ ಕೆ.ಜಿ.ಗೆ ₹ 60ರಷ್ಟಿದ್ದ ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಮ್‌) ₹ 90–₹ 100 ಆಗಿದೆ. ಗೆಡ್ಡೆಕೋಸಿನ ಬೆಲೆ ಕೆ.ಜಿ.ಗೆ ₹ 20ರಷ್ಟು ಜಾಸ್ತಿಯಾಗಿದ್ದು, ₹ 60ಕ್ಕೆ ತಲುಪಿದೆ. ಬದನೆಕಾಯಿ, ಮೂಲಂಗಿ ಬೆಲೆ ತಲಾ ₹ 10 ಹೆಚ್ಚಾಗಿ ₹ 30 ಆಗಿದೆ. ಬೆಳ್ಳುಳ್ಳಿಯೂ ಕೆ.ಜಿ.ಗೆ ₹ 20 ತುಟ್ಟಿಯಾಗಿ‌ದೆ.

‘ಮಳೆಯಾಗುತ್ತಿರುವುದರಿಂದ ಟೊಮೆಟೊ ಬೆಳೆ ಹಾಳಾಗುತ್ತಿದೆ. ಹೀಗಾಗಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ದಪ್ಪ ಮೆಣಸಿನಕಾಯಿ ದರ ಏರಿಕೆಗೂ ಮಳೆಯೇ ಕಾರಣ. ಇದು ಸ್ಥಳೀಯವಾಗಿ ಲಭ್ಯವಿಲ್ಲ. ಹೊರಗಡೆಯಿಂದ ಬರಬೇಕು. ನಾವು ಮೈಸೂರಿನಿಂದ ತರಿಸುತ್ತಿದ್ದು, ಅಲ್ಲಿಯೇ ಬೆಲೆ ಹೆಚ್ಚಾಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆ.ಜಿ.ಗೆ ₹ 40 ಇದ್ದ ಕ್ಯಾರೆಟ್‌ ಬೆಲೆ ₹ 30ಕ್ಕೆ ಇಳಿದಿದೆ. ₹ 30 ಇದ್ದ ಸೌತೆಕಾಯಿ ಬೆಲೆ ₹ 10 ಕಡಿಮೆಯಾಗಿದೆ. ಕೆ.ಜಿ.ಗೆ ₹ 120 ಇದ್ದ ನುಗ್ಗೇಕಾಯಿ ಬೆಲೆ ಈ ವಾರ ₹ 100ಕ್ಕೆ ಕುಸಿದಿದೆ. 

ಹಣ್ಣುಗಳ ಪೈಕಿ ದಾಳಿಂಬೆ ಬೆಲೆ ಕೆ.ಜಿ.ಗೆ ₹ 20 ಹೆಚ್ಚಳ ಹಾಗೂ ಸಪೋಟ, ಏಲಕ್ಕಿ ಬಾಳೆಹಣ್ಣು ಕೆ.ಜಿ.ಗೆ ₹ 10 ಕಡಿಮೆಯಾಗಿದ್ದು ಬಿಟ್ಟರೆ, ಉಳಿದ ಹಣ್ಣುಗಳ ಬೆಲೆ ಯಥಾಸ್ಥಿತಿ ಮುಂದುವರೆದಿದೆ. 

ದಸರಾ ಹಬ್ಬದ ವೇಳೆ ಹಾಪ್‌ಕಾಮ್ಸ್‌ನಲ್ಲಿ ₹ 50 ತಲುಪಿದ್ದ ಕೆ.ಜಿ. ಏಲಕ್ಕಿ ಬಾಳೆಹಣ್ಣಿನ ಬೆಲೆ ಕಳೆದ ವಾರದವರೆಗೂ ಅದೇ ರೀತಿ ಮುಂದುವರೆದಿತ್ತು. ಈ ವಾರ ₹ 10 ಕಡಿಮೆಯಾಗಿದೆ. ಕಳೆದ ವಾರ ಕೆ.ಜಿ.ಗೆ ₹ 70 ಇದ್ದ ಸಪೋಟ ಹಣ್ಣಿನ ಬೆಲೆ ₹ 60ಕ್ಕೆ ಇಳಿದಿದೆ. 

ದಾಳಿಂಬೆ ಮಾರುಕಟ್ಟೆಗೆ ಬರುತ್ತಿರುವ ಪ್ರಮಾಣ ಕಡಿಮೆಯಾಗಿದ್ದು, ಕೆ.ಜಿ.ಗೆ ₹ 20 ಹೆಚ್ಚಾಗಿ ₹ 140ಕ್ಕೆ ತಲುಪಿದೆ. ಕಿತ್ತಳೆ, ಮೂಸಂಬಿ (ಕೆ.ಜಿ.ಗೆ ₹ 60), ಸೇಬು (₹ 120), ಪಪ್ಪಾಯಿ (₹ 25) ಸೇರಿದಂತೆ ಉಳಿದ ಹಣ್ಣುಗಳ ಬೆಲೆ ಸ್ಥಿರವಾಗಿದೆ. 

ಮಾಂಸದ ಮಾರುಕಟ್ಟೆಯಲ್ಲಿ ಚಿಕನ್‌, ಮಟನ್‌ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಹೂವು ಕೇಳುವವರೇ ಇಲ್ಲ

ನವರಾತ್ರಿ ಮುಗಿದ ಬಳಿಕ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಬೆಲೆ ಕುಸಿದಿದೆ. ಈಗ ಮಳೆಯೂ ಜೊತೆಯಾಗಿರುವುದರಿಂದ ಧಾರಣೆ ಪಾತಾಳಕ್ಕೆ ಕುಸಿದಿದೆ. 

ಕನಕಾಂಬರ ಬಿಟ್ಟು ಬೇರೆ ಹೂವುಗಳಿಗೆ ಬೇಡಿಕೆಯೇ ಇಲ್ಲ ಎನ್ನುತ್ತಾರೆ ಬಿಡಿ ಹೂವಿನ ವ್ಯಾಪಾರಿಗಳು.

ನಗರ ಸಮೀಪದ ಚೆನ್ನೀಪುರದ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕಳೆದ ವಾರ ಕೆ.ಜಿ. ಕನಕಾಂಬರದ ಬೆಲೆ ₹ 400 ಇತ್ತು. ಈ ವಾರ ₹ 200 ಹೆಚ್ಚಿ, ₹ 600 ತಲುಪಿದೆ. 

ಕೆ.ಜಿ.ಗೆ ₹ 50–₹ 60ರಷ್ಟಿದ್ದ ಸೇವಂತಿಗೆ ಬೆಲೆ ₹ 20ಕ್ಕೆ ಇಳಿದಿದೆ. ಚೆಂಡು ಹೂವನ್ನು ಕೇಳುವವರೇ ಇಲ್ಲ. ಕೆ.ಜಿ.ಗೆ ₹ 5ರಿಂದ ₹ 10ರವರೆಗೆ ಬೆಲೆ ಇದೆ. ಸುಗಂಧರಾಜ ಹೂವಿಗೂ ಬೇಡಿಕೆ ಕಡಿಮೆಯಾಗಿದ್ದು, ಕೆ.ಜಿ.ಗೆ ₹ 20ರಂತೆ ಮಾರಾಟವಾಗುತ್ತಿದೆ. ಕಾಕಡದ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. 

‘ಹಬ್ಬ ಕಳೆದ ನಂತರ ಬೇಡಿಕೆ ಕಡಿಮೆಯಾಗಿದೆ. ಈಗ ಮಳೆಯಿಂದಾಗಿ ಗುಣಮಟ್ಟದ ಹೂವುಗಳು ಬರುತ್ತಿಲ್ಲ. ಹಾಗಾಗಿ, ಬೆಲೆ ಮತ್ತಷ್ಟು ಇಳಿದಿದೆ. ದೀಪಾವಳಿವರೆಗೂ ಇದೇ ಪರಿಸ್ಥಿತಿ ಇರಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು