ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಜಾತ್ರೆಯಲ್ಲಿ ವೈಕಲ್ಯ ಮರೆತ ಚಿಣ್ಣರು

ಮಾರ್ಗದರ್ಶಿ, ವಿವಿಧ ಸಂಸ್ಥೆಗಳ ವಿನೂತನ ಪ್ರಯತ್ನ, 500ಕ್ಕೂ ಹೆಚ್ಚು ಮಕ್ಕಳು ಭಾಗಿ
Last Updated 8 ಡಿಸೆಂಬರ್ 2019, 2:22 IST
ಅಕ್ಷರ ಗಾತ್ರ

ಚಾಮರಾಜನಗರ: ಮಾನಸಿಕವಾಗಿ ಕುಗ್ಗಿದ ಮಕ್ಕಳು ಅವರು. ತಮ್ಮ ದೈಹಿಕ ಸ್ಥಿತಿ ಬಗ್ಗೆ ಕೀಳರಿಮೆ ಹೊಂದಿ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದ ಅವರ ಮುಖದಲ್ಲಿ ಶನಿವಾರ ಗೆಲುವಿನ ನಗೆ ಇತ್ತು. ಹೊಸ ಲೋಕವನ್ನೇ ಕಂಡ ಅನುಭವ. ತಮ್ಮ ಪೋಷಕರು ಹಾಗೂ ಸ್ನೇಹಿತರೊಂದಿಗೆ ಕುಣಿದು ಕುಪ್ಪಳಿಸಿದರು. ಸಿಹಿ, ಖಾರ ತಿಂದು ಸಂಭ್ರಮಿಸಿದರು...

ಬಡವ– ಶ್ರೀಮಂತ, ಜಾತಿ– ಭೇದ, ಹುಡುಗ–ಹುಡುಗಿ ಎಂಬ ಭಾವ ಇರಲಿಲ್ಲ. ಎಲ್ಲರೂ ತಮ್ಮ ‘ವಿಶೇಷ’ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಸಂಭ್ರಮದಲ್ಲಿ ಒಟ್ಟಾಗಿ ಪಾಲ್ಗೊಂಡು ಖುಷಿಪಟ್ಟರು.

16 ವರ್ಷ ಒಳಗಿನ ಅಂಗವಿಕಲ ಮಕ್ಕಳಿಗಾಗಿ ಮಾರ್ಗದರ್ಶಿ ಅಂಗವಿಕಲರ ಸೇವಾ ಸಂಸ್ಥೆಯು ಸರ್ಕಾರ ವಿವಿಧ ಇಲಾಖೆಗಳು ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಗರದಪಿಡಬ್ಲುಡಿ ಕಾಲೊನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ‘ವಿಶೇಷ ಜಾತ್ರೆ’ಯ ಸಂಕ್ಷಿಪ್ತ ಚಿತ್ರಣ ಇದು.

ಜಿಲ್ಲಾಮಟ್ಟದಲ್ಲಿ ಮೊದಲ ಬಾರಿಗೆ ನಡೆದ ಈ ಜಾತ್ರೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 500ಕ್ಕೂ ಹೆಚ್ಚು ಅಂಗವಿಕಲ ಮಕ್ಕಳು ಪಾಲ್ಗೊಂಡರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರೋಟರಿ ಸಂಸ್ಥೆ, ರೋಟರಿ ಸಿಲ್ಕ್‌ ಸಿಟಿ, ವಾಸವಿ ಟ್ರಸ್ಟ್‌, ಲಯನ್‌ ಸಂಸ್ಥೆ, ಜಿಲ್ಲಾ ವರ್ತಕರ ಸಂಘ, ಮಹಾ ಮನೆ, ಜಿಲ್ಲಾ ಅಂಗವಿಕಲರ ಮತ್ತು ಆರೈಕೆದಾರರ ಒಕ್ಕೂಟವು ಮಾರ್ಗದರ್ಶಿ ಸಂಸ್ಥೆಯ ಹೆಗಲಿಗೆ ಹೆಗಲು ಕೊಟ್ಟು ವಿಶೇಷ ಜಾತ್ರೆ ಯಶಸ್ವಿಯಾಗುವಂತೆ ನೋಡಿಕೊಂಡವು.

ಕುಣಿದು ಕುಪ್ಪಳಿಸಿದರು: ಜಾತ್ರೆಗೆ ಬಂದ ಮಕ್ಕಳು ತಮ್ಮಲ್ಲಿರುವ ಊನವನ್ನೇ ಮರೆತರು. ಅವರಿಗಾಗಿಯೇ ವಿಶೇಷ ಆಹಾರ ಮಳಿಗೆಳನ್ನು ತೆರೆಯಲಾಗಿತ್ತು. ಆಟವಾಡಲು ರೈಲು ಬಂಡಿ, ಜಾರು ಬಂಡಿ ವ್ಯವಸ್ಥೆ ಮಾಡಲಾಗಿತ್ತು.

ರೈಲುಬಂಡಿಯಲ್ಲಿಕುಳಿತ ಮಕ್ಕಳಿಗೆ ನಿಜವಾದ ರೈಲಿನಲ್ಲೇ ಕುಳಿತಷ್ಟು ಆನಂದವಾಯಿತು. ಮತ್ತೊಂದೆಡೆ ಬಾತುಕೋಳಿಯ ರೈಲಿನಲ್ಲಿ ಕುಳಿತ ಮಕ್ಕಳುನಿಧಾನವಾಗಿ ಚಲಿಸುವ ಈ ರೈಲಿನಲ್ಲಿ ತಮ್ಮ ಪೋಷಕರಿಗೆ ಕೈಬೀಸುತ್ತ ಖುಷಿಯಲ್ಲಿ ಮಿಂದೇಳುತ್ತಿದ್ದರು. ಬಲೂನು ಗೊಂಬೆ ಜಾರುಬಂಡಿಯಲ್ಲಿ ಮಕ್ಕಳು ಮನಸೋ ಇಚ್ಛೆ ಆಡಿದರು. ಮೇಲಿಂದ ಕೆಳಕ್ಕೆ ಜಿಗಿಯುತ್ತಾ, ಜಾರಿ ಜಾರಿ ಮೇಲಕ್ಕೆ ಹತ್ತುತ್ತ ತಮ್ಮನ್ನು ತಾವೇ ಮರೆತರು.

ಆಟೋಟದ ಸಮಯದಲ್ಲಿ ಒಬ್ಬರಿಗೊಬ್ಬರು ಮಕ್ಕಳು ಹಸ್ತ ಲಾಘವ ಮಾಡುತ್ತಾ, ಬೆನ್ನು ತಟ್ಟುತ್ತಾ ಆಟದಲ್ಲಿ ತೊಡಗಿಕೊಂಡಿದ್ದ ದೃಶ್ಯ ಗಮನಸೆಳೆದವು.

ಹೆಚ್ಚು ಅಂಗವೈಕಲ್ಯ ಹೊಂದಿ, ಆಟವಾಡಲು ಸಾಧ್ಯವಾಗದೇ ಇದ್ದ ಮಕ್ಕಳು, ತಮ್ಮ ಸ್ನೇಹಿತರ ಆಟವನ್ನು ಕಂಡು ಸಂತಸಪಟ್ಟರು.

ಬಗೆ ಬಗೆಯ ತಿಂಡಿ: ಮಕ್ಕಳಿಗಾಗಿ ಎಂಟು ಮಳಿಗೆಗಳನ್ನು ತೆರೆಯಲಾಗಿತ್ತು. ವಿವಿಧ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಮಕ್ಕಳಿಗೆ ತಿಂಡಿ ತಿನಿಸುಗಳನ್ನು ಕೊಡಲು ಮುಂದೆ ಬಂದಿದ್ದರು. ಚುರುಮುರಿ, ಐಸ್‌ಕ್ರೀಂ, ಕಬ್ಬಿನ ಹಾಲು, ಮಸಾಲೆಪುರಿ, ಹಣ್ಣುಗಳು, ಕೇಕ್‌ ಬಿಸ್ಕತ್ತುಗಳನ್ನು ಮಕ್ಕಳಿಗೆ ಉಚಿತವಾಗಿ ವಿತರಿಸಿದರು.

ಮಕ್ಕಳಿಗೆ ಉಚಿತವಾಗಿ ಆಟಿಕೆ ಸೆಟ್‌ಗಳನ್ನೂ ವಿತರಿಸಲಾಯಿತು.

ವೀರಗಾಸೆ: ಒಂದೆಡೆ ಮಕ್ಕಳು ತಿಂಡಿ ತಿನಿಸು ತಿನ್ನುವುದು ಹಾಗೂ ಆಟದಲ್ಲಿ ನಿರತರಾಗಿದ್ದರೆ ಮತ್ತೊಂದೆಡೆ ವೀರಗಾಸೆ ಕಲಾವಿದರು ನೃತ್ಯಪ್ರದರ್ಶಿಸಿ ಮನರಂಜನೆ ನೀಡುತ್ತಿದ್ದರು.

ತಾಯಂದಿರೇ ಹೆಚ್ಚು: ಅಂಗವಿಕಲ ಮಕ್ಕಳೊಂದಿಗೆ ಬಂದಿದ್ದ ಪೋಷಕರಲ್ಲಿ ತಾಯಂದಿರೇ ಹೆಚ್ಚಿದ್ದರು. ಮಕ್ಕಳಿಗೆ ಆಹಾರ ತಿನಿಸುತ್ತಾ, ಆಟವಾಡಿಸುತ್ತಾ ಇಡೀ ದಿನ ಅವರೊಂದಿಗೆ ಕಳೆದರು.

ಜಿಲ್ಲೆಯ ವಿವಿಧ ಕಡೆಗಳಿಂದ ಮಕ್ಕಳನ್ನು ಕರೆತರಲು ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯಲ್ಲಿ ಬೆಂಗಳೂರಿನಿಂದ ಮಾರ್ಗದರ್ಶಿ ಸಂಸ್ಥೆಯ ಸ್ವಯಂ ಸೇವಕರೂ ಪಾಲ್ಗೊಂಡರು.

ಸಾಮಾಜಿಕ ಕೌಶಲ ಬೆಳೆಸುವ ‘ವಿಶೇಷ ಜಾತ್ರೆ’
ಇದಕ್ಕೂ ಮೊದಲು ಸಾಮಾಜಿಕ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ರಾಜ್ಯ ಅಂಗವಿಕಲರ ಕಾಯ್ದೆ ಆಯುಕ್ತ ವಿ.ಎಸ್‌.ಬಸವರಾಜು ಅವರು, ‘ಅಂಗವಿಕಲ ಮಕ್ಕಳು ಸಮಾಜದ ಆಸ್ತಿ. ಇವರು ಸಾಮಾಜಿಕ ಕೌಶಲಬೆಳೆಸಿಕೊಳ್ಳಲು ವಿಶೇಷ ಜಾತ್ರೆಗಳು ಸಹಕಾರಿ’ ಎಂದರು.

‘ಈ ಮಕ್ಕಳ ಹಕ್ಕುಗಳಿಗೆಮನ್ನಣೆಕೊಡುವುದು ಎಲ್ಲರ ಜವಾಬ್ದಾರಿ. ಅವರಿಗೆ ಪೋಷಕರು, ಸಾರ್ವಜನಿಕರು, ಅಧಿಕಾರಿಗಳು ಹಾಗೂ ಸರ್ಕಾರ ಸ್ಪಂದಿಸಬೇಕು. ಅವರ ಶೈಕ್ಷಣಿಕ ಹಾಗೂ ಕ್ರೀಡಾ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಬಿ. ನಾರಾಯಣರಾವ್‌, ಎಸ್‌ಪಿ ಎಚ್‌.ಡಿ. ಆನಂದ್‌ಕುಮಾರ್ ಮಾತನಾಡಿದರು. ಮಾರ್ಗದರ್ಶಿ ಅಂಗವಿಕಲರ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷೆ ಕೆ.ಎಂ. ಗೀತಾಮೃತ, ಸಂಸ್ಥೆಯ ಮಾರ್ಗದರ್ಶಕ ಕೆ.ವಿ. ರಾಜಣ್ಣ, ಬಿಇಒ ಲಕ್ಷ್ಮೀಪತಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ಬಸವರಾಜು, ಗಿರೀಶ್‌ ಮತ್ತಿತರರು ಇದ್ದರು.

ಬುದ್ಧಿಮಾಂದ್ಯಮಕ್ಕಳಿಗೆ ಸಹಕಾರಿ
ನನ್ನ ಮಗ ಬುದ್ಧಿಮಾಂದ್ಯ. ಅವನನ್ನು ಹೊರಗಡೆ ಬಿಡುವುದಿಲ್ಲ. ಹೋದರೆ ಬೇರೆ ಕಡೆ ಹೊರಟು ಹೋಗುತ್ತಾನೆ. ವಾಪಸ್‌ ಮನೆಗೆ ಬರುವುದು ಗೊತ್ತಿಲ್ಲ. ಅವನ ಪೋಷಣೆ ನಾನೇ ಮಾಡುತ್ತಿದ್ದೇನೆ. ಇಲ್ಲಿ ನನ್ನ ಮಗನಂತಿರುವ ಎಲ್ಲರಿಗೂ ಒಂದೇ ಕಡೆ ಸೇರುವ ಅವಕಾಶ ಇದ್ದುದರಿಂದ ಕರೆದುಕೊಂಡು ಬಂದಿದ್ದೇನೆ.
– ಕಾಂತಾಮಣಿ, ಯಳಂದೂರು

ನಿರಂತರವಾಗಿ ನಡೆಯಬೇಕು
‘ಇದೊಂದು ಉತ್ತಮ ಪ್ರಯತ್ನ. ಪ್ರತಿವರ್ಷ ಇಂತಹ ವಿಶೇಷ ಜಾತ್ರೆ ಆಯೋಜಿಸಬೇಕು. ಇದರಿಂದ ಅಂಗವಿಕಲ ಮಕ್ಕಳಿಗೆ ಅನುಕೂಲವಾಗುತ್ತದೆ. ಅವರಿಗೆ ಯಾವುದೇ ಕಿರಿಕಿರಿ ಉಂಟಾಗುವುದಿಲ್ಲ. ಪೋಷಕರಿಗೂ ಹೆಚ್ಚಿನ ಹೊರೆ ಇರುವುದಿಲ್ಲ’
– ಸರ್ವಮಂಗಳ, ಕೋಡಿಮೊಳೆ

ಭಯ ದೂರವಾಗಲು ನೆರವು
ಇಂತಹ ಜಾತ್ರೆಗಳನ್ನು ಆಯೋಜನೆ ಮಾಡಿದರೆ ಅಂಗವೈಕಲ್ಯ ಹೊಂದಿರುವಂತಹ ಎಲ್ಲ ಮಕ್ಕಳು ಯಾವುದೇ ಮುಜುಗರವಿಲ್ಲದೆ ಭಾಗವಹಿಸುತ್ತಾರೆ. ಬೇರೆ ಮಕ್ಕಳೊಂದಿಗೆ ಬೆರೆಯಲು ಭಯಪಡುವ ಮಕ್ಕಳು ಇಲ್ಲಿ ಭಯವಿಲ್ಲದೆ ಆಟದಲ್ಲಿ ಎಲ್ಲರೊಂದಿಗೆ ಬೆರೆಯುತ್ತಾರೆ.
– ವೀರಪ್ಪ, ಮಾರ್ಟಳ್ಳಿ

ಮಕ್ಕಳು ಏನಂದರು?
ನಿರಂತರವಾಗಿ ನಡೆಯಲಿ
ನನಗೆ ದೃಷ್ಟಿದೋಷವಿದೆ. ಬೇರೆ ಮಕ್ಕಳೊಂದಿಗೆ ಆಟವಾಡಲು ಹೋದರೆ ನನ್ನನ್ನು ಬೇರೆ ರೀತಿ ನೋಡುತ್ತಾರೆ. ನನ್ನಂತಹ ಮಕ್ಕಳೊಂದಿಗೆ ಬೆರೆತರೆ ಯಾವುದೇ ಕೀಳರಿಮೆ ಇರುವುದಿಲ್ಲ. ನಮಗೂ ಇಂತಹ ಆಟಗಳನ್ನು ಆಡುವ ಆಸೆ ಇರುತ್ತದೆ. ಎಲ್ಲ ಮಕ್ಕಳಂತೆ ನಾವು ಆಟದಲ್ಲಿ ತೊಡಗಲು ಇಂತಹ ವಿಶೇಷ ಜಾತ್ರೆಗಳು ನಿರಂತರವಾಗಿ ನಡೆಯಬೇಕು.
–ಕೆ.ಚರಣ್‌ಕುಮಾರ್, ಕಡುವಿನಕಟ್ಟೆ ಹುಂಡಿ

ಹಿಂಜರಿಕೆ ದೂರವಾಗಿದೆ
ನನ್ನ ಕಾಲು ಸ್ವಾಧೀನ ಕಳೆದುಕೊಂಡಿರುವುದರಿಂದ ಆಟದಲ್ಲಿ ತೊಡಗಲು ಸಾಧ್ಯವಾಗುತ್ತಿರಲಿಲ್ಲ. ಇಲ್ಲಿಗೆ ಬಂದ ಮೇಲೆ ಎಲ್ಲರನ್ನೂ ನೋಡಿ ಖುಷಿಯಾಯಿತು. ಪ್ರತಿದಿನ ಇಂತಹ ಆಟಗಳಲ್ಲಿ ನಿರತನಾಗಬೇಕು ಎಂಬ ಹಂಬಲ ಉಂಟಾಗಿದೆ. ನಮಗಾಗಿಯೇ ಆಯೋಜನೆಗೊಳ್ಳುವ ವಿಶೇಷ ಜಾತ್ರೆಗೆ ತಪ್ಪದೇ ಬರುತ್ತೇನೆ. ಇಲ್ಲಿ ಆಟವಾಡಿದ ಬಳಿಕ ಹಿಂಜರಿಕೆ ದೂರವಾಗಿದೆ.
– ಮಹೇಂದ್ರ, ಯಳಂದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT