ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಂತ ವ್ಯಕ್ತಿತ್ವದಿಂದ ಪ್ರಬುದ್ಧ ರಾಜಕಾರಣಿಯಾದ ಪ್ರಸಾದ್‌: ಸುತ್ತೂರು ಶ್ರೀ

ಪಕ್ಷಾತೀತ, ಜಾತ್ಯತೀತವಾಗಿ ವಿ.ಶ್ರೀನಿವಾಸ ಪ್ರಸಾದ್‌ ಅವರಿಗೆ ನುಡಿನಮನ ಕಾರ್ಯಕ್ರಮ
Published 21 ಮೇ 2024, 6:36 IST
Last Updated 21 ಮೇ 2024, 6:36 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಾಜಕೀಯ ಹಿನ್ನೆಲೆ ಇಲ್ಲದೆ, ಸಾಮಾನ್ಯ ಕುಟುಂಬದಿಂದ ಬಂದಿದ್ದ ವಿ.ಶ್ರೀನಿವಾಸ ಪ್ರಸಾದ್‌ ಅವರು ತಮ್ಮ ಸ್ವಂತ ವ್ಯಕ್ತಿತ್ವದಿಂದ ಪ್ರಬುದ್ಧ ರಾಜಕಾರಣಿಯಾಗಿ ಬೆಳೆದರು’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸೋಮವಾರ ಅಭಿಪ್ರಾಯಪಟ್ಟರು. 

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿ.ಶ್ರೀನಿವಾಸಪ್ರಸಾದ್ ಅಭಿಮಾನಿ ಬಳಗದ ವತಿಯಿಂದ ನಡೆದ ಸಂಸದ ವಿ.ಶ್ರೀನಿವಾಸ ಪ್ರಸಾದ್ ನುಡಿನಮನ, ನಿಮಗಿದೋ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

‘ಎಲ್ಲ ಪಕ್ಷಗಳ ನಾಯಕರ ಒಡನಾಟ, ನಿಕಟವಾದ ಬಾಂಧವ್ಯವಿತ್ತು. ಆ ಕಾರಣದಿಂದ ರಾಜಕೀಯದಲ್ಲಿ ಪ್ರಭುತ್ವ ಸಾಧಿಸಿದ್ದರು. ಬುದ್ದ, ಬಸವ, ಅಂಬೇಡ್ಕರ್ ಅವರನ್ನು ಸ್ಮರಿಸುತ್ತಿದ್ದರು. ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಂಬೇಡ್ಕರ್‌ ಚಿಂತನೆಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದರು’ ಎಂದರು.

ಮೈಸೂರು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಶ್ರೀನಿವಾಸಪ್ರಸಾದ್ ಅವರು ಅಂಬೇಡ್ಕರ್ ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಅವರ ಸ್ವಚ್ಚ ರಾಜಕಾರವನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಿದೆ. ಕೆಲವರು‌ ಮನೆಯಿಂದಲೇ ಶಾಸಕ, ಸಂಸದ ಆಗುತ್ತಾರೆ. ಆದರೆ ಹೋರಾಟದ ಮೂಲಕ ಪ್ರಸಾದ್ ಅಧಿಕಾರ ಪಡೆದರು. ಅವರ ಸ್ವಾಭಿಮಾನದ ಕಿಚ್ಚನ್ನು ದೀಪದಂತೆ ಬೆಳಗಿಸಬೇಕಿದೆ’ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ‘ವಿ.ಶ್ರೀನಿವಾಸಪ್ರಸಾದ್ ಸ್ವಾಭಿಮಾನದ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಯಾವುದೇ ಪಕ್ಷದಲ್ಲಿದ್ದರೂ ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ಅವರು ಸಂವಿಧಾನಕ್ಕೆ ಬದ್ಧರಾಗಿದ್ದರಿಂದಲೇ ಅವರನ್ನು ಸ್ವಾಭಿಮಾನಿ ಎಂದು ಕರೆಯಲಾಗುತ್ತದೆ’ ಎಂದು ಹೇಳಿದರು. 

‘ಜಿಲ್ಲೆಯ ಜನರು ಪ್ರಸಾದ್‌ ಅವರನ್ನು ಸುದೀರ್ಘ ಅವಧಿಗೆ ನಾಯಕರನ್ನಾಗಿ ಸ್ವೀಕಾರ ಮಾಡಿದ್ದು, ಅವರು ಎಂದಿಗೂ ಜನರ ಮನಸಲ್ಲಿ ಅಜರಾಮರರಾಗಿರುತ್ತಾರೆ. ಪ್ರತಿಯೊಬ್ಬರೂ ಅವರ ಹೋರಾಟಗಳನ್ನು ಮೈಗೂಡಿಸಿಕೊಳ್ಳಬೇಕು. ಅಸ್ತಂಗತನಾದ ಮೇಲೆ ಅವರ ಒಳ್ಳೆಯ ವಿಚಾರಗಳನ್ನು ಮಾತನಾಡುತ್ತೇವೆ. ಪ್ರಸಾದ್ ಅವರ ಟೀಕೆಗಳು, ಅಭಿವೃದ್ಧಿಯ ವಿಚಾರವಾಗಿತ್ತು. ಜನರಿಗೆ ಪ್ರೀತಿಯಿಂದ ಸ್ಪಂದನೆ ನೀಡುತ್ತಿದ್ದರು. ಅಸಮಾನತೆ ತೊರೆದು ಅಭಿವೃದ್ಧಿಗೆ ಒತ್ತು ನೀಡಿದ್ದರು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ‘ಪ್ರಸಾದ್ ಅವರು ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣ ಬೆಳೆಸಿಕೊಂಡು, ಚಿಕ್ಕ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಬಂದವರು. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಎಂದು ರಾಜಿ ಮಾಡಿಕೊಳ್ಳಲೇ ಇಲ್ಲ. ಶ್ರೀನಿವಾಸ್ ಪ್ರಸಾದ್ ಹಾಗೂ ಸಿದ್ದರಾಮಯ್ಯ ಇಬ್ಬರು ನೇರವಾಗಿ ಮಾತನಾಡುವವರು. ಜನಪರ ಕಾಳಜಿಯಿಂದಾಗಿ ಅಷ್ಟು ಎತ್ತರಕ್ಕೆ ಬೆಳೆದರು. ಎಲ್ಲ ವರ್ಗದ ಜನರನ್ನು ಗೌರವಿಸುತ್ತಿದ್ದರು. ಸಹಾಯ ಮಾಡುವ ಗುಣವನ್ನು ಹೊಂದಿದ್ದರು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಭಿಮಾನಿ ಬಳಗದ ಅಯ್ಯನಪುರ ಶಿವಕುಮಾರ್ , ‘ವಿ.ಶ್ರೀನಿವಾಸ ಪ್ರಸಾದ್ ಅವರು ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಗರದ ರಸ್ತೆಗೆ ಅವರ ಹೆಸರನ್ನು ಇಡುವ ಮೂಲಕ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಬೇಕು’ ಎಂದು ಸಚಿವರು, ಶಾಸಕರಲ್ಲಿ ಮನವಿ ಮಾಡಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸ ಪ್ರಸಾದ್‌ ಪತ್ನಿ ಭಾಗ್ಯಲಕ್ಷಿ, ಮಗಳು ಪ್ರತಿಮಾ ಪ್ರಸಾದ್‌, ಪೂರ್ಣಿಮಾ ಪ್ರಸಾದ್‌, ಅಳಿಯಂದರಾದ ಹರ್ಷವರ್ಧನ್‌, ಡಾ.ಮೋಹನ್‌, ಮಾಜಿ ಸಂಸದ ಕಾಗಲವಾಡಿ  ಎಂ.ಶಿವಣ್ಣ,   ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ,  ಬಿಎಸ್‌ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಮುಖಂಡರಾದ ಎಚ್.ವಿ.ಚಂದ್ರು, ಬಿ.ಕೆ.ರವಿಕುಮಾರ್, ಕೆ.ಪಿ.ಸದಾಶಿವಮೂರ್ತಿ, ಶಿವಕುಮಾರ್, ಪು.ಶ್ರೀನಿವಾಸನಾಯಕ, ಸಿ.ಎ.ಮಹದೇವಶೆಟ್ಡಿ ಇತರರು ಪಾಲ್ಗೊಂಡಿದ್ದರು.

‘ಸೈದ್ಧಾಂತಿಕವಾಗಿ ಅಮರ’

ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಸಾಹಿತಿ ಪ್ರೊ.ಸಿ.ನಾಗಣ್ಣ ಮಾತನಾಡಿ ‘ಶ್ರೀನಿವಾಸಪ್ರಸಾದ್ ಅವರು ನಮ್ಮಿಂದ ಶಾರೀರಿಕವಾಗಿ  ದೂರವಾಗಿರಬಹುದು.  ಆದರೆ ಅವರ ಸಾಧನೆ ಸೈದ್ದಾಂತಿಕವಾಗಿ ಅಮರವಾಗಿ ಉಳಿದಿದ್ದು ಮುಂದಿನ ತಲೆಮಾರಿಗೆ ಮಾರ್ಗದರ್ಶನ ವಾಗಿರುತ್ತದೆ’ ಎಂದರು. ಬೂಸ ಚಳವಳಿಯು ಪ್ರಸಾದ್ ಅವರ ಬದುಕಿನ ತಿರುವು ಬದಲಾಯಿಸಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಯಾಗಿ ವಿದ್ಯೆಗೆ ಹೆಚ್ಚು ಒತ್ತು ನೀಡಿದರು. ಅವರ ಸಾಧನೆ ದೊಡ್ಡದು. ಸಂಸದರ ಕ್ಷೇತ್ರ ಅಭಿವೃದ್ಧಿ ಅನುದಾನವನ್ನು ವರ್ಷಕ್ಕಿದ್ದ ₹1 ಕೋಟಿಯ‌ನ್ನು ₹5 ಕೋಟಿಗೆ ಹೆಚ್ಚು ಮಾಡಿಸಿದರು. ಅಂಬೇಡ್ಕರ್ ಭವನಗಳು ವಾಚನಾಲಯಗಳನ್ನು ನಿರ್ಮಿಸಿದರು. ಅವರೊಬ್ಬ ಅಪ್ರತಿಮ ಹೋರಾಟಗಾರರಾಗಿ ಆದರ್ಶ ವ್ಯಕ್ತಿಯಾಗಿ ದ್ದು ಇತರಿಗೆ ಮಾದರಿ ರಾಜಕಾರಣಿಯಾಗಿದ್ದರು. ಅವರ ಚಿಂತನೆಗಳು ಶೋಷಿತರಿಗೆ ಮಾರ್ಗದರ್ಶನವಾಗಿವೆ’ ಎಂದು ಹೇಳಿದರು. 

ವಿ.ಶ್ರೀನಿವಾಸಪ್ರಸಾದ್ ಅವರು ಸ್ವಾಭಿಮಾನದ ಬದುಕು ಮುಗಿಸಿದರು. ಎಲ್ಲರೂ ಸ್ವಾಭಿಮಾನದಿಂದ ಬದುಕಲು ಅವರು ದಾರಿದೀಪವಾಗಿದ್ದಾರೆ.
-ಎ.ಆರ್.ಕೃಷ್ಣಮೂರ್ತಿ, ಕೊಳ್ಳೇಗಾಲ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT