ಬುಧವಾರ, ಆಗಸ್ಟ್ 4, 2021
21 °C
ಕೋವಿಡ್‌–19 ಆತಂಕದ ನಡುವೆ ಮುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಅಧಿಕಾರಿಗಳು, ಪೋಷಕರ ನಿ‌ಟ್ಟುಸಿರು

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯ: ಮಕ್ಕಳಲ್ಲಿ ಯುದ್ಧ ಗೆದ್ದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಲಾಕ್‌ಡೌನ್‌ ಕಾರಣಕ್ಕೆ ಮುಂದೂಡಲಾಗಿದ್ದ 2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೋವಿಡ್‌–19 ಆತಂಕದ ನಡುವೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ಮುಗಿದಿದೆ. ಶಿಕ್ಷಣ ಇಲಾಖೆ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ‍ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. 

ಸೋಂಕಿನ ಭಯದಲ್ಲೇ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕೂಡ ನಿರಾಳರಾಗಿದ್ದಾರೆ. ಯುದ್ಧವನ್ನು ಗೆದ್ದ ಸಂಭ್ರಮದಲ್ಲಿ ಅವರಿದ್ದಾರೆ.

ಫಲ ನೀಡಿದ ಸಮನ್ವಯ: ಸರ್ಕಾರದ ಸೂಚನೆಯಿಂದ ಜಿಲ್ಲಾಡಳಿತ ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ನಡೆಸಿತ್ತು. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿದ್ದು, ‍ಪರೀಕ್ಷೆ ಅಡೆತಡೆ ಇಲ್ಲದೆ ಮುಕ್ತಾಯವಾಗಲು ನೆರವಾಯಿತು. 

ಆರಂಭದ ಭಯ, ನಂತರ ಮಾಯ: ಶುಕ್ರವಾರ ಕೊನೆಯ ಪರೀಕ್ಷೆಯನ್ನು ಬರೆದು ಮುಗಿಸಿ ಪರೀಕ್ಷಾ ಕೇಂದ್ರದಿಂದ ಹೊರಗಡೆ ಬರುವಾಗ ಎಲ್ಲ ವಿದ್ಯಾರ್ಥಿಗಳು ನಗುಮುಖದಿಂದಿದ್ದರು.

ಪರೀಕ್ಷೆ ಬರೆದ ಮಕ್ಕಳನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ಹೆಚ್ಚಿನವರು, ಆರಂಭದಲ್ಲಿ ಸ್ವಲ್ಪ ಭಯ ಇತ್ತು. ದಿನಕಳೆದಂತೆ ಅದು ದೂರವಾಯಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. 

‘ಎಲ್ಲ ಪರೀಕ್ಷೆಗಳು ಸುಲಭವಾಗಿದ್ದವು. ಕೋವಿಡ್‌–19 ಹರಡಂತೆ ಎಲ್ಲ ಮುನ್ನೆಚ್ಚರಿಕೆ ಕೈಗೊಂಡಿದ್ದರಿಂದ ನಮಗೆ ಯಾವುದೇ ಭಯ ಆಗಲಿಲ್ಲ. ಉತ್ತಮ ಅಂಕದ ನಿರೀಕ್ಷೆಯಲ್ಲಿದ್ದೇವೆ’ ಎಂದು ಚಾಮರಾಜನಗರದ ವಿದ್ಯಾರ್ಥಿಗಳಾದ ವಿನಯ್‌, ಮಹದೇವ ಪ್ರಸಾದ್‌, ತನ್ವಿ ಮತ್ತು ಅಂಜಲಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಮುನ್ನೆಚ್ಚರಿಕೆ ಕ್ರಮಗಳಿಂದ ಧೈರ್ಯ: ಪರೀಕ್ಷೆ ಮುಗಿದಿರುವುದರಿಂದ ಖುಷಿಯಾಗಿದೆ. ಆರಂಭದಲ್ಲಿ ಭಯ ಕಾಡುತ್ತಿತ್ತು. ಪರೀಕ್ಷಾ ಕೇಂದ್ರದಲ್ಲಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು ಪರೀಕ್ಷೆ ಬರೆಯಲು ಧೈರ್ಯ ತುಂಬಿತು. ಮಾಸ್ಕ್‌ ಧರಿಸಿ, ಕೊಠಡಿಯಲ್ಲಿ ಒಂದೆಡೆ ಕುಳಿತುಕೊಳ್ಳಲು ಹಿಂಸೆಯಾಯಿತು. ಆದರೆ, ಆರೋಗ್ಯ, ಪೊಲೀಸ್‌, ಶಿಕ್ಷಣ ಇಲಾಖೆಗಳು ಕೈಗೊಂಡ ಕ್ರಮಗಳು ಕೊರೊನಾ ಭಯವನ್ನು ಓಡಿಸಿದವು. ಪೋಷಕರ ಒತ್ತಾಸೆ ಚೆನ್ನಾಗಿ ಬರೆಯಲು ಪ್ರೇರಣೆ ನೀಡಿತು’ ಎಂದು ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿಯ ಎನ್‌.ಸುಷ್ಮಿತಾ ತಿಳಿಸಿದಳು.

’ಪರೀಕ್ಷೆ ಬರೆಯಲೇಬೇಕು ಎಂಬ ದೃಢ ನಿಶ್ಚಯ ಮಾಡಿದ್ದೆ. ಕೋವಿಡ್ ಕಾರಣಕ್ಕೆ ಪರೀಕ್ಷೆ ರದ್ದಾಗುತ್ತದೆ ಎಂಬ ಸುದ್ದಿ ಕೇಳಿ ಭಯವಾಗಿತ್ತು. ಪರೀಕ್ಷೆ ಉತ್ತಮವಾಗಿ ಬರೆದಿದ್ದೇನೆ’ ಎಂದು ಗುಂಡ್ಲುಪೇಟೆಯ ವರ್ಷಿಣಿ ಹೇಳಿದಳು.

ನಮ್ಮ ಭಾಗದಲ್ಲಿ ಸೋಂಕಿತರು ಇರಲಿಲ್ಲ. ಜೊತೆಗೆ ಸರ್ಕಾರ ಅಗತ್ಯವಾದ ಎಲ್ಲಾ ಕ್ರಮಗಳನ್ನು ಅನುಸರಣೆ ಮಾಡುತ್ತಿದ್ದರು ಇದರಿಂದಾಗಿ ಶಾಲೆಯ ಆವರಣದಲ್ಲಿ ಯಾವುದೇ ಭಯ ಇರಲಿಲ್ಲ. ಜೊತೆಗೆ ಶಿಕ್ಷಕರು ಮನೆಗೆ ಬಂದು ಪೋಷಕರ ಬಳಿ ಮಾತನಾಡಿ ಧೈರ್ಯ ತುಂಬಿದರು’ ಎಂದು ಗುಂಡ್ಲುಪೇಟೆ ತಾಲ್ಲೂಕಿನ ಹಂಗಳದ ಶೋಭಿತಾ ತಿಳಿಸಿದಳು.

‘ಮೊದಲನೆಯ ದಿನ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಭಯವಿತ್ತು. ಎಚ್ಚರಿಕೆ ವಹಿಸಿ ಪರೀಕ್ಷೆ ಎದುರಿಸಿದ್ದೇವೆ. ಚೆನ್ನಾಗಿ ಬರೆದಿದ್ದೇವೆ’ ಎಂದು ಕೊಳ್ಳೇಗಾಲದ ಚಂದ್ರ ಪ್ರಸಾದ್ ಪಿ ಮತ್ತು ಫಿಸಿಯಾ ನಸೀಬಾ ಹೇಳಿದರು. 

ಮೊದಲಿಗೆ ಭಯ ಇದ್ದಿದ್ದು ನಿಜ. ಆದರೆ, ಮನೆಯಲ್ಲಿ ಹಿರಿಯರು ಸೋಂಕು ಹರಡುವ ಬಗ್ಗೆ ತಿಳಿಸಿಕೊಟ್ಟರು. ಅಲ್ಲದೇ ಪರೀಕ್ಷಾ ಕೇಂದ್ರದಲ್ಲಿ ಮುನ್ನೆಚ್ಚರಿಕೆ ಕೈಗೊಂಡಿದ್ದರಿಂದ ಹಾಗೂ ಶಿಕ್ಷಕರು ನೀಡಿದ ಧೈರ್ಯದಿಂದಾಗಿ ಪರೀಕ್ಷೆ ಬರೆದೆ’ ಎಂದು ಹನೂರಿನ ವಿದ್ಯಾರ್ಥಿನಿ ಬಿ.ದೀಪಿಕಾ ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡಳು.

ಹೆಚ್ಚಿನ ಸಮಯದ ಕಿರಿಕಿರಿ
ಪರೀಕ್ಷಾ ಕೇಂದ್ರಕ್ಕೆ ಬಹು ಬೇಗ ತೆರಳಬೇಕಾಯಿತು. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು. ಹೆಚ್ಚು ಕಟ್ಟುನಿಟ್ಟು ಇದ್ದುದರಿಂದಲೂ ಕಿರಿಕಿರಿ ಎನಿಸಿತು. ಆದರೆ, ಬರೆಯಲು ತ್ರಾಸ ಆಗಲಿಲ್ಲ. ಪ್ರಶ್ನೆ ಪತ್ರಿಕೆಗಳು ಕಷ್ಟವಿಲ್ಲದೇ ಇದ್ದುದು ಸಮಾಧಾನ ತಂದಿದೆ. ಪರೀಕ್ಷೆಗೂ ಮುನ್ನ ಶಿಕ್ಷಕರು ನಡೆಸಿದ ಆಪ್ತ ಸಮಾಲೋಚನೆ ಪರೀಕ್ಷಾ ಸಮಯದಲ್ಲಿ ನೆರವಾಗಿದೆ’ ಎಂದು ಯಳಂದೂರು ತಾಲ್ಲೂಕಿನ ಅಂಬಳೆಯ ವಿದ್ಯಾರ್ಥಿ ಚಂದನ್‌ ‘ಪ್ರಜಾವಾಣಿ’ಗೆ ತಿಳಿಸಿದನು. 

‘ಪರೀಕ್ಷೆ ಆರಂಭಕ್ಕೂ ಮೊದಲು ಜಿಲ್ಲೆಯಲ್ಲಿ ಕೋವಿಡ್‌ ಪೀಡಿತರು ಇರಲಿಲ್ಲ. ಹೀಗಾಗಿ ಭಯ ಇರಲಿಲ್ಲ‌. ಪರೀಕ್ಷೆ ಆರಂಭವಾದಾಗ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಸ್ವಲ್ಪ ಭಯವಾಯಿತು. ಹಾಗಿದ್ದರೂ ಧೈರ್ಯವಾಗಿ ಪರೀಕ್ಷೆ ಬರೆದೆ. ಈಗ ಸಂತೋಷ ಆಗಿದೆ’ ಎಂದು ಸಂತೇಮರಹಳ್ಳಿಯ ವಿದ್ಯಾರ್ಥಿನಿ ಅಶ್ವಿನಿ ತಿಳಿಸಿದಳು. 

ಕೊನೆಯ ಪರೀಕ್ಷೆಗೆ ಶೇ 99 ಮಕ್ಕಳು ಹಾಜರು
ಶುಕ್ರವಾರ ನಡೆದ ಕೊನೆಯ ಪರೀಕ್ಷೆಗೆ ಶೇ 99ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ತೃತೀಯ ಭಾಷಾ ವಿಷಯದ ಪರೀಕ್ಷೆಗೆ ಒಟ್ಟು 10,857 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 10,750 ಮಂದಿ ಹಾಜರಾಗಿದ್ದಾರೆ. 107 ಮಂದಿ ಗೈರಾಗಿದ್ದಾರೆ. 

5,374 ಬಾಲಕರು ಹಾಗೂ 5,376 ಬಾಲಕಿಯರು ಪರೀಕ್ಷೆ ಬರೆದಿದ್ದರೆ, 36 ಬಾಲಕರು ಮತ್ತು 71 ಬಾಲಕಿಯರು ಗೈರಾಗಿದ್ದಾರೆ. 

ಕಂಟೈನ್‌ಮೆಂಟ್‌ ವಲಯಗಳ 16 ವಿದ್ಯಾರ್ಥಿಗಳು ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ 32 ವಿದ್ಯಾರ್ಥಿಗಳು ಕೊನೆಯ ಪರೀಕ್ಷೆ ಬರೆದಿದ್ದಾರೆ. 

**

ಕೊರೊನಾ ವೈರಸ್‌ ಅನ್ನು ಹಿಮ್ಮೆಟ್ಟಿಸುವುದು ಹೇಗೆ ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಜಿಲ್ಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸಲಾಂ.
-ಡಾ.ಎಂ.ಆರ್‌.ರವಿ, ಜಿಲ್ಲಾಧಿಕಾರಿ (ಫೇಸ್‌ಬುಕ್‌ನಲ್ಲಿ)

***

ಡಿಸಿ, ಸಿಸಿಒ, ಎಸ್‌ಪಿ ಸೇರಿದಂತೆ ಎಲ್ಲ ಇಲಾಖೆಗಳ ಸಹಕಾರದಿಂದ ಯಾವುದೇ ಅಡೆತಡೆ ಇಲ್ಲದೆ ಜಿಲ್ಲೆಯಲ್ಲಿ ಪರೀಕ್ಷೆ ಮುಗಿದಿದೆ.
-ಎಸ್‌.ಟಿ.ಜವರೇಗೌಡ, ಡಿಡಿಪಿಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು