ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನ್ನಳ್ಳಿಯಲ್ಲಿ ಹಸಿರು ಅಂಗಳದ ಶಾಲೆ

ಪಠ್ಯ ಕಲಿಕೆ ಜೊತೆಗೆ ಪರಿಸರ ಸಂರಕ್ಷಣೆಯ ಪಾಠ
Last Updated 8 ಏಪ್ರಿಲ್ 2022, 22:15 IST
ಅಕ್ಷರ ಗಾತ್ರ

ಹನೂರು: ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಅರಿವು ಮೂಡಿಸಿದರೆ ಅವರಲ್ಲಿ ಪರಿಣಾಮಕಾರಿ ಫಲಿತಾಂಶ ನಿರೀಕ್ಷಿಸಬಹುದು. ಈ ನಿಟ್ಟಿನಲ್ಲಿ, ತಾಲ್ಲೂಕಿನ ದಿನ್ನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮಕ್ಕಳಿಗೆ ಕಲಿಕೆಯ ಜತೆಗೆ ಪರಿಸರದ ಬಗ್ಗೆಯೂ ಕಾಳಜಿ ಮೂಡಿಸುವ ಕಾಯಕದಲ್ಲಿ ನಿರತವಾಗಿದೆ.

ನಿಸರ್ಗದ ಸಾನಿಧ್ಯದಲ್ಲಿ ಯಾವುದೇ ಒತ್ತಡಗಳಿಲ್ಲದೇ ಮಕ್ಕಳ ಕಲಿಕೆ ಸಾಗಬೇಕು ಎಂಬ ಉದ್ದೇಶದಿಂದ ಇಲ್ಲಿನ ಶಿಕ್ಷಕರು ಪಠ್ಯದ ಜೊತೆಗೆ ಪರಿಸರ ಪಾಠ ಹಾಗೂ ಅದರ ಸಂರಕ್ಷಣೆಗೆ ಒತ್ತು ನೀಡಿದ್ದಾರೆ. ಶಾಲೆಯನ್ನು ಪರಿಸರ ಮಿತ್ರಶಾಲೆಯನ್ನಾಗಿ ರೂಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಕ್ಷಣದ ಜತೆಗೆ ವಾರದಲ್ಲಿ ಬಿಡುವಿನ ವೇಳೆ ಶಾಲಾ ಕೈತೋಟದ ನಿರ್ಮಾಣ ಮಾಡುವುದು, ಗಿಡಗಳನ್ನು ನೆಡುವುದು, ವಿದ್ಯಾರ್ಥಿಗಳ ತಂಡವನ್ನು ರಚಿಸಿ ಪಾಳಿಯ ಪ್ರಕಾರ ಗಿಡಗಳಿಗೆ ನೀರುಣಿಸುವುದು, ಇಡೀ ಆವರಣವನ್ನು ಹಸಿರುಮಯವಾಗಿರುವಂತೆ ನೋಡಿಕೊಳ್ಳುವುದು, ಈ ಎಲ್ಲ ಕೆಲಸಗಳಿಂದಾಗಿ ಇಂದು ಶಾಲೆ ಆವರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಪ್ರತಿನಿತ್ಯ ಶಾಲೆಗೆ ಬರುವ ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ಪರಿಸರವನ್ನು ಶುಚಿಯಾಗಿಡುವಲ್ಲಿ ನಿರತರಾಗಿದ್ದಾರೆ.

ಮಹದೇಶ್ವರ ವನ್ಯಧಾಮಕ್ಕೆ ಹೊಂದಿಕೊಂಡಂತಿರುವ ದಿನ್ನಳ್ಳಿ ಗ್ರಾಮ ಸಹಜವಾಗಿಯೇ ಹಸಿರನ್ನು ಹೊದ್ದು ಮಲಗಿದೆ. ಮಳೆನೀರನ್ನು ಮಾತ್ರ ಆಶ್ರಯಿಸಿಕೊಂಡಿರುವ ನೀರಿನ ಮೂಲವೂ ಕಡಿಮೆ. ಇಷ್ಟಾದರೂ ಇಲ್ಲಿನ ಶಿಕ್ಷಕರ ಶ್ರಮ ಹಾಗೂ ಮಕ್ಕಳ ಆಸಕ್ತಿಯಿಂದಾಗಿ ಬರಡು ಭೂಮಿಯಾಗಿದ್ದ ಶಾಲೆ ಈಗ ಹಸಿರುಮಯವಾಗಿ ಪರಿವರ್ತನೆಯಾಗಿದೆ.

‘ಪರಿಸರಕ್ಕಿಂತ ಪಾಠ ಮತ್ತೊಂದಿಲ್ಲ. ಪರಿಸರದ ಬಗ್ಗೆ ನಾವು ಕೊಠಡಿಯೊಳಗೆ ಹೇಳಬಹುದು. ಆದರೆ, ಇಲ್ಲಿನ ಮಕ್ಕಳು ಪ್ರಾಯೋಗಿಕವಾಗಿಯೇ ಕಲಿಯುತ್ತಿರುವುದರಿಂದ ನಮ್ಮ ಮೇಲಿನ ಒತ್ತಡವೂ ಕೊಂಚ ಕಡಿಮೆಯಾಗಿದೆ’ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

ಐತಿಹಾಸಿಕ ಪ್ರಜ್ಞೆ:ಕಲಿಕೆ, ಪರಿಸರ ಬಗ್ಗೆ ತಿಳಿಸಿಕೊಡುವುದರ ಜತೆಗೆ ಮಕ್ಕಳಿಗೆ ಇತಿಹಾಸ ಪ್ರಜ್ಞೆಯನ್ನು ಮೂಡಿಸುವ ಕೆಲಸವನ್ನು ಇಲ್ಲಿನ ಶಿಕ್ಷಕರು ಮಾಡುತ್ತಿದ್ದಾರೆ.

ಶಾಲೆಯ ಸುತ್ತಮುತ್ತ ಕಂಡು ಬರುವ ಇತಿಹಾಸವನ್ನು ಸಾರುವ ಸ್ಥಳಗಳು, ವೀರಗಲ್ಲುಗಳು, ಮಾಸ್ತಿಗಲ್ಲು ಮುಂತಾದವುಗಳ ಬಗ್ಗೆ ಹೇಳಿಕೊಡಲಾಗುತ್ತಿದೆ. ರಜಾ ದಿನಗಳು, ಬಿಡುವಿನ ವೇಳೆಯಲ್ಲಿ ಮಕ್ಕಳನ್ನು ಐತಿಹಾಸಿಕ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅವುಗಳ ಬಗ್ಗೆ ಸವಿವರವಾಗಿ ತಿಳಿಸಿಕೊಡುವ ಮೂಲಕ ಅವರಲ್ಲಿ ಇತಿಹಾಸ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಶಾಲಾ ಆವರಣದಲ್ಲೇ ತರಕಾರಿ

‘ಶಾಲೆ ಅರಣ್ಯದ ಮಧ್ಯಭಾಗದಲ್ಲಿರುವುದರಿಂದ ಇಲ್ಲಿಗೆ ಹೆಚ್ಚಾಗಿ ತೋಟದ ಮನೆಗಳಿಂದ ಮಕ್ಕಳು ಬರುತ್ತಾರೆ. ತಂದೆತಾಯಿ ರೈತರಾಗಿರುವುದರಿಂದ ವಿದ್ಯಾರ್ಥಿಗಳಲ್ಲಿ ಕೃಷಿ ರಕ್ತಗತವಾಗಿರುತ್ತದೆ. ಇದನ್ನು ಬಳಸಿಕೊಂಡು ಶಾಲಾ ಆವರಣದಲ್ಲಿ ಕೈತೋಟ ನಿರ್ಮಿಸಿ ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾಗುವ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಮಕ್ಕಳು ಸಹ ಅಷ್ಟೇ ಆಸಕ್ತಿಯಿಂದ ತರಕಾರಿ ಬೆಳೆಯಲು ಉತ್ಸಾಹ ತೋರುತ್ತಾರೆ. ಪ್ರತಿ ವರ್ಷ ಬಿಸಿಯೂಟಕ್ಕೆ ನಾವೇ ತರಕಾರಿ ಬೆಳೆದುಕೊಳ್ಳುತ್ತಿದ್ದೆವು. ಈ ಬಾರಿ ಕೊರೊನಾ ಕಾರಣದಿಂದಾಗಿ ಬೆಳೆಯಲು ಸಾಧ್ಯವಾಗಿಲ್ಲ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೆಳೆಯಲು ಈಗಾಗಲೇ ಆವರಣವನ್ನು ಸಿದ್ಧಪಡಿಸಲಾಗುತ್ತಿದೆ’ ಎಂದು ಮುಖ್ಯ ಶಿಕ್ಷಕ ಕೃಷ್ಣ ಅವರು ತಿಳಿಸಿದರು.

ಕಲಿಕೆಯ ಜೊತೆಗೆ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಿ ಶಾಲೆಯನ್ನು ಪರಿಸರಮಿತ್ರ ಶಾಲೆಯನ್ನಾಗಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ‌.
ಎಸ್. ಮಾದೇಶ್, ವಿಜ್ಞಾನ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT