ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ವಿದ್ಯುತ್‌ ಕಣ್ಣಾಮುಚ್ಚಾಲೆ ಖಂಡಿಸಿ ಪ್ರತಿಭಟನೆ

Published 29 ಡಿಸೆಂಬರ್ 2023, 13:24 IST
Last Updated 29 ಡಿಸೆಂಬರ್ 2023, 13:24 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಉಡಿಗಾಲ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಮೂರು ವಾರಗಳಿಂದ ವಿದ್ಯುತ್‌ ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯವಾಗುತ್ತಿರುವುದನ್ನು ಖಂಡಿಸಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಬೆಳೆಗಾರರು ಶುಕ್ರವಾರ ಉಡಿಗಾಲದಲ್ಲಿ ಪ್ರತಿಭಟನೆ ನಡೆಸಿದರು. 

ಗ್ರಾಮದ ಬಸ್ ನಿಲ್ದಾಣದಲ್ಲಿ ಸೇರಿದ ಪ್ರತಿಭಟನಕಾರರು ಅಲ್ಲಿಂದ ಗ್ರಾಮದ ಸೆಸ್ಕ್‌ ಕಚೇರಿವರೆಗೂ ಮೆರವಣಿಗೆ ನಡೆಸಿ, ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಕಾರರನ್ನು ತಡೆದರು. ಸೆಸ್ಕ್‌ ಕಚೇರಿ ಮುಂದೆ ಧರಣಿ ಕುಳಿತರು. 

ಸ್ಥಳಕ್ಕೆ ಬಂದ ಕಿರಿಯ ಎಂಜಿನಿಯರ್‌ ಅವರನ್ನು ಪ್ರತಿಭಟನಕಾರರು ತೀವ್ರ ತರಾಟೆಗೆ ತೆಗೆದುಕೊಂಡರು.

‘ತಿಂಗಳಿನಿಂದ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದ್ದರೂ ಯಾಕೆ ಸರಿಪಡಿಸಿಲ್ಲ? ನೀವು ಲೈನ್ ಬದಲಾವಣೆ ಮಾಡುವಾಗ ರೈತರ ಗಮನಕ್ಕೆ ತಂದು ಮಾಡಬೇಕಿತ್ತು. ಯಾರಿಗೂ ಮಾಹಿತಿ ನೀಡದೆ ಏಕಾಏಕಿ ಲೈನ್ ಬದಲಾವಣೆ ಮಾಡಿದ್ದರಿಂದ ಕೆಲವು ಮೋಟಾರ್ ಸುಟ್ಟು ಹೋಗಿವೆ. ನಷ್ಟ ತುಂಬಿಕೊಡಬೇಕು. ಗ್ರಾಮಕ್ಕೆ ಸಮರ್ಪಕ ವಿದ್ಯುತ್ ನೀಡುವಲ್ಲಿ ಸೆಸ್ಕ್‌ ವಿಫಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಬ್ಬು ಬೆಳೆಗಾರರ ಸಂಘದ ಚಾಮರಾಜನಗರ–ಮೈಸೂರು ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ,  ‘ಉಡಿಗಾಲ ಭಾಗದಲ್ಲಿ 25 ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರಿಗೆ ತೀವ್ರ ತೊಂದರೆಯಾಗಿದೆ. ಸೆಸ್ಕ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕರೆ ಮಾಡಿ ಮುಂದಿನ ದಿನಗಳಲ್ಲಿ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಹೀಗಾಗಿ ಪ್ರತಿಭಟನೆ ವಾಪಸ್‌ ಪಡೆದಿದ್ದೇವೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ವಿದ್ಯುತ್‌ ಸಮಸ್ಯೆ ಉಂಟಾದರೆ ಚಾಮರಾಜನಗರ ಸೆಸ್ಕ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡಸಲಾಗುವುದು’ ಎಂದು ಎಚ್ಚರಿಸಿದರು.

ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಹಾಲಿನ ನಾಗರಾಜು,  ಉಡಿಗಾಲ ಗ್ರಾಮ ಘಟಕ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಮಹದೇವಸ್ವಾಮಿ, ಗುರುಮಲ್ಲಪ್ಪ, ಮೂರ್ತಿ, ಸಿದ್ದೇಶ್, ಸಿದ್ದಪ್ಪ, ಹರ್ಷ ಮಲೆಯೂರು, ಗುರು, ಬಾಬು, ಮುದ್ದಪ್ಪ, ನಾರಾಯಣಸ್ವಾಮಿ, ಕೂಸಪ್ಪ, ಶಿವನಂಜಪ್ಪ ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT