ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ವಾಡಿ ದುರಂತ: ವಿಚಾರಣೆ 26ಕ್ಕೆ ಮುಂದೂಡಿಕೆ

ಬಿಗಿ ಭದ್ರತೆ ನಡುವೆ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು
Last Updated 21 ಮಾರ್ಚ್ 2019, 10:30 IST
ಅಕ್ಷರ ಗಾತ್ರ

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ಸಂಭವಿಸಿದ ವಿಷ ಪ್ರಸಾದ ದುರಂತ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಗುರುವಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅವರ ಮುಂದೆ ಹಾಜರು ಪಡಿಸಿದರು.

ಆರೋಪಿಗಳಾದ ಅಂಬಿಕಾ, ದೊಡ್ಡಯ್ಯ ಮತ್ತು ಮಾದೇಶ ಅವರ ಪ‍ರ ವಕೀಲರು ಬಾರದೇ ಇದ್ದುದರಿಂದ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿದರು.

ಕೊಳ್ಳೇಗಾಲದ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಒಪ್ಪಿಸಿದ ನಂತರ, ಪೊಲೀಸರು ಇದೇ ಮೊದಲ ಬಾರಿಗೆ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಹಾಗೂ ಇತರ ಮೂವರನ್ನು ನೇರವಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಇದುವರೆಗೆ, ಭದ್ರತೆಯ ದೃಷ್ಟಿಯಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸುತ್ತಾ ಬಂದಿದ್ದರು.

ಆರೋಪಪಟ್ಟಿ ಪಡೆದ ಮಹಾದೇವಸ್ವಾಮಿ:ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಗುರುವಾರ ಮುಕ್ತಾಯವಾಗಿದ್ದರಿಂದ ಪೊಲೀಸರು ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.

ಪೊಲೀಸರು ಆರೋಪ ಪಟ್ಟಿ ಸಲ್ಲಿಸಿರುವುದನ್ನು ಆರೋಪಿಗಳ ಗಮನಕ್ಕೆ ತಂದ ನ್ಯಾಯಾಧೀಶ ಜಿ.ಬಸವರಾಜ ಅವರು, ‘ಆರೋಪ ಪಟ್ಟಿಯ ಪ್ರತಿ ನಿಮಗೆ ಬೇಕೇ’ ಎಂದು ಮಹದೇವಸ್ವಾಮಿ ಅವರನ್ನು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಹಾದೇವಸ್ವಾಮಿ, ‘ಹೌದು, ನನಗೇ ಕೊಡಿ’ ಎಂದು ಹೇಳಿದರು.

‘ವಕೀಲರನ್ನು ನೇಮಕ ಮಾಡಿಕೊಂಡಿದ್ದೀರಾ? ಯಾವಾಗ ಬರುತ್ತಾರೆ’ ಎಂದು ಇತರ ಮೂವರು ಆರೋಪಿಗಳನ್ನು ನ್ಯಾಯಾಧೀಶರು ಪ್ರಶ್ನಿಸಿದರು.

‘ಮುಂದಿನ ಸೋಮವಾರ ಅಥವಾ ಮಂಗಳವಾರ ಬರಬಹುದು’ ಎಂದು ಮಾದೇಶ ಪ್ರತಿಕ್ರಿಯಿಸಿದರು. ಆರೋಪಪಟ್ಟಿ ಬಗ್ಗೆ ಕೇಳಿದಾಗ, ‘ವಕೀಲರಿಗೇ ಕೊಡಿ’ ಎಂದು ಹೇಳಿದರು.

ಆ ನಂತರ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು 26ಕ್ಕೆ ಮುಂದೂಡಿದರು.

ಮೊದಲ ಆರೋಪಿ, ಇಮ್ಮಡಿ ಮಹಾದೇವಸ್ವಾಮಿ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಈಗಾಗಲೇ ತಿರಸ್ಕರಿಸಿದೆ.

ಬಿಗಿ ಭದ್ರತೆ: ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದ ಆರೋಪಿಗಳನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಕರೆ ತಂದಿದ್ದರು. ನ್ಯಾಯಾಲಯದ ಆವರಣದಲ್ಲೂ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಆರೋಪಿಗಳನ್ನು ನೋಡಲು ವಕೀಲರು, ಸಿಬ್ಬಂದಿ, ನ್ಯಾಯಾಲಯಕ್ಕೆ ಬಂದ ಜನರು ಹಾಗೂ ಸ್ಥಳೀಯರು ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT