ಶುಕ್ರವಾರ, ಫೆಬ್ರವರಿ 21, 2020
31 °C
ಮುಸ್ಲಿಂ ಸಂಘಟನೆಗಳ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ರುವನಾರಾಯಣ, ವಾಟಾಳ್‌ ನಾಗರಾಜ್‌

ಮಾಜಿ ಆದಾಗ ಕರ್ತವ್ಯವೂ ಮಾಜಿ ಆಗಬಾರದು: ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ವಿವಿಧ ಮುಸ್ಲಿಂ ಸಂಘಟನೆಗಳು ಒಟ್ಟಾಗಿ ಭಾನುವಾರ ಸೋಮವಾರಪೇಟೆಯ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದ ಬಗ್ಗೆ ಹಾಗೂ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಮುಖಂಡ ಆರ್‌.ಧ್ರುವನಾರಾಯಣ ಹಾಗೂ ವಾಟಾಳ್‌ ನಾಗರಾಜ್‌ ಅವರು ಮಾತನಾಡಿರುವುದನ್ನು ಖಂಡಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಸೋಮವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.  

‘ಜಿಲ್ಲಾಡಳಿತದ ಬಹಳಷ್ಟು ಪ್ರಯತ್ನದ ನಂತರವೂ ಕೆಲ ಸಂಘಟನೆಗಳು ಹಟ ಹಿಡಿದು ಈದ್ಗಾ ಮೈದಾನದಲ್ಲಿ ಪ್ರತ್ಯೇಕ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದವು. ಬೆಂಗಳೂರಿನಿಂದ ಬಂದಿದ್ದ ಒಬ್ಬ ಭಾಷಣಕಾರರು ಹಾಗೂ ಮಾಜಿ ಸಂಸದ ಧ್ರುವನಾರಾಯಣ, ಮಾಜಿ ಶಾಸಕ ವಾಟಾಳ್ ನಾಗರಾಜ್ ಭಾಗವಹಿಸಿದ್ದರು. ಸಿಎಎ, ಎನ್‌ಆರ್‌ಸಿ, ಜಿಎಸ್‌ಟಿ ಸೇರಿದಂತೆ ಕೇಂದ್ರ ಸರ್ಕಾರದ ತೀರ್ಮಾನಗಳ ಬಗ್ಗೆ ಅವರು ಮಾತನಾಡಿದ್ದಾರೆ. ವಾಟಾಳ್‌ ನಾಗರಾಜ್‌ ಅವರು ಟಿಪ್ಪು ಜಯಂತಿ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಮಾಜಿ ಸಂಸದರಿಗೆ, ಮಾಜಿ ಶಾಸಕರಿಗೆ ಈ ವಿಷಯಗಳ ಬಗ್ಗೆ ಮಾತನಾಡಲು ಗಣರಾಜ್ಯೋತ್ಸವ ದಿನದ ಸಂದರ್ಭವೇ ಬೇಕಿತ್ತೇ? ಅಂದಾದರೂ ಧನಾತ್ಮಕ, ರಚನಾತ್ಮಕ ವಿಚಾರಗಳನ್ನು ಮಾತನಾಡಿ ಜನರಿಗೆ ಪ್ರೇರಣೆ ನೀಡಬಹುದಿತ್ತಲ್ಲವೇ? ಈ ಕಾರ್ಯಕ್ರಮಕ್ಕೆ ಇವರಿಬ್ಬರೂ ಹೋಗುವ ಅಗತ್ಯ ಏನಿತ್ತು? ಅಧಿಕಾರದಲ್ಲಿದ್ದಾಗ ಇವರು ಜಿಲ್ಲಾಡಳಿತ ಯೋಜಿಸುವ ಕಾರ್ಯಕ್ರಮದಲ್ಲಿಯೇ ಪಾಲ್ಗೊಳ್ಳುತ್ತಿದ್ದರಲ್ಲವೇ? ಮಾಜಿ ಆದ ತಕ್ಷಣವೇ ಜವಾಬ್ದಾರಿ, ಕರ್ತವ್ಯವೂ ಮಾಜಿ ಆಗಬಾರದು’ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

‘ಅನಪೇಕ್ಷಣೀಯ ಮಾತುಗಳು’

‘ಧ್ರುವನಾರಾಯಣ ಹಾಗೂ ವಾಟಾಳ್‌ ನಾಗರಾಜ್‌ ಅವರು ಪ್ರತ್ಯೇಕ ವೇದಿಕೆಯನ್ನು‌ ಕೂಡ ಮೋದಿ ವಿರುದ್ಧ, ಬಿಜೆಪಿ ವಿರುದ್ಧ ಕಿಡಿ ಕಾರಲು ಬಳಸಿದ್ದು ಅವರ ದುರ್ದೈವ. ಇವರು ಪ್ರತ್ಯೇಕತೆಯನ್ನು ಬೆಂಬಲಿಸಬಾರದಿತ್ತು. ಪ್ರತ್ಯೇಕತಾ ಮನೋಭಾವ ಏನೇನು ಅನಾಹುತಕ್ಕೆ ದಾರಿ ಮಾಡಿಕೊಟ್ಟಿದೆ ಎಂಬುದು ಪ್ರಬುದ್ಧರಾಗಿರುವ ಇಬ್ಬರಿಗೂ ಗೊತ್ತಾಗಬೇಕಿತ್ತು. ಅಲ್ಲಿ ಅವರ ಭಾಗವಹಿಸಿಕೆ, ಮಾತುಗಳು ಅತ್ಯಂತ ಅನಪೇಕ್ಷಣೀಯ’ ಎಂದು ಸುರೇಶ್‌ ಕುಮಾರ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು