ಬುಧವಾರ, ಅಕ್ಟೋಬರ್ 21, 2020
26 °C

ಚಾಮರಾಜನಗರದಲ್ಲಿ ಪ್ರಾಕೃತಿಕ ಭೂವಿಜ್ಞಾನ ಮ್ಯೂಸಿಯಂ: ಸಮೀಕ್ಷೆ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪ್ರಸ್ತಾವಿತ ಪ್ರಾಕೃತಿಕ ಭೂವಿಜ್ಞಾನ ಮ್ಯೂಸಿಯಂ ಸ್ಥಾಪನೆಗೆ ಸಂಬಂಧಿಸಿದಂತೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳು ಮಲ್ಲಯ್ಯನಪುರ ಗ್ರಾಮ ವ್ಯಾಪ್ತಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. 

ಮಲ್ಲಯ್ಯನಪುರ ಗ್ರಾಮ ವ್ಯಾಪ್ತಿಯಲ್ಲಿ ವಿಶಿಷ್ಟವಾದ ಖನಿಜಗಳು ಹಾಗೂ ಉಪಖನಿಜಗಳು ಕಂಡುಬಂದಿರುವುದರಿಂದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸ್ಥಳಕ್ಕೆ ಭೇಟಿ ನೀಡಿ, ಭೂವಿಜ್ಞಾನಕ್ಕೆ ಸಂಬಂಧಿಸಿದ ಪ್ರಾಕೃತಿಕ ಮ್ಯೂಸಿಯಂ ಸ್ಥಾಪನೆ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಈ ಬಗ್ಗೆ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು.

ಬಳಿಕ, ಮ್ಯೂಸಿಯಂ ಸ್ಥಾಪನೆ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಪ್ರಧಾನ ನಿರ್ದೇಶಕರಿಗೆ ಪತ್ರ ಬರೆದಿದ್ದರು.

ಪತ್ರಕ್ಕೆ ಸ್ಪಂದಿಸಿದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಹಿರಿಯ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು ಹಾಗೂ ಭೂವಿಜ್ಞಾನಿಗಳ ತಂಡವನ್ನು ಜಿಲ್ಲೆಗೆ ಕಳುಹಿಸಿಕೊಟ್ಟಿದ್ದರು. ಈ ತಂಡ ಅಕ್ಟೋಬರ್ 8ರಿಂದ 10ರವರೆಗೆ ತಾಲ್ಲೂಕಿನ ಮಲ್ಲಯ್ಯನಪುರ, ಗಾಳಿಪುರ, ಬದನಗುಪ್ಪೆ ಸುತ್ತಮುತ್ತ ಪ್ರವಾಸ ಕೈಗೊಂಡು ಭೂವೈಜ್ಞಾನಿಕ ಸಮೀಕ್ಷೆ ನಡೆಸಿದೆ.

ಪ್ರದೇಶದಲ್ಲಿ ದೊರಕುವ ಶಿಲಾಸ್ತರಗಳನ್ನು ಯಾಥಾಸ್ಥಿತಿಯಲ್ಲಿ ಸಂರಕ್ಷಿಸಿ, ಚಾಮರಾಜನಗರ ಜಿಲ್ಲೆ ಹಾಗೂ ರಾಜ್ಯದಾದ್ಯಂತ ದೊರೆಯುವ ಎಲ್ಲ ಶಿಲಾ ಮಾದರಿಗಳನ್ನು ಸಂಗ್ರಹಿಸಿ ಈ ಸ್ಥಳದಲ್ಲಿ ಮ್ಯೂಸಿಯಂ ಸ್ಥಾಪಿಸುವುದು ಜಿಲ್ಲಾಡಳಿತದ ಯೋಚನೆ. ಮ್ಯೂಸಿಯಂ ಸ್ಥಾಪ‍ನೆಯಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಭೂ ವಿಜ್ಞಾನ ಹಾಗೂ ಶಿಲಾಸ್ತರಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಪಡೆಯಲು ಅನುಕೂಲವಾಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ಮ್ಯೂಸಿಯಂ ಸ್ಥಾಪಿಸಲು ಉದ್ದೇಶಿಸಿರುವ ಪ್ರದೇಶದಲ್ಲಿ ಫೆಲಿಸೈಟ್, ಗ್ರ್ಯಾನೈಟ್, ಫಚ್‌ಸೈಟ್, ಕ್ವಾರ್ಟ್‌ಜೈಟ್, ಡೋಲರೈಟ್ ಡೈಕ್, ಸ್ಪೋಕಿ ಕ್ವಾರ್ಟ್, ಪೆಗ್ಮಟೈಟ್, ಗಾರ್ನೆಟ್, ಐರನ್ ಬಂಡ್ ಸೇರಿದಂತೆ ಇತರೆ ಶಿಲೆಗಳು ಇರುವುದು ದೃಢಪಟ್ಟಿದೆ. ಶಿಲಾ ಮಾದರಿಗಳನ್ನು ಭೂವೈಜ್ಞಾನಿಕ ಸಮೀಕ್ಷೆ, ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳು ತಾಂತ್ರಿಕ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಿದ್ದಾರೆ. ವರದಿ ಬಂದ ನಂತರ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯನ್ನು ಬಳಸಿಕೊಂಡು ಭೂಗರ್ಭ ಮ್ಯೂಸಿಯಂ ಸ್ಥಾಪನೆಗೆ ಅವಕಾಶ ಲಭಿಸಬಹುದು ಎಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು