ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ್ಯಜ್ಯೋತಿ ಬಿಲ್‌ ಪಾವತಿ; ಒತ್ತಡ ಹೇರಬೇಡಿ: ಶಾಸಕ ಸಿ.ಪುಟ್ಟರಂಗ ಶೆಟ್ಟಿ

ಕೆಡಿಪಿ ಸಭೆಯಲ್ಲಿ ಸೆಸ್ಕ್‌ ಅಧಿಕಾರಿಗಳಿಗೆ ತಾಕೀತು
Last Updated 29 ಫೆಬ್ರುವರಿ 2020, 15:31 IST
ಅಕ್ಷರ ಗಾತ್ರ

ಚಾಮರಾಜನಗರ: ‘ಭಾಗ್ಯಜ್ಯೋತಿ ಯೋಜನೆ ಅಡಿಯಲ್ಲಿ ವಿದ್ಯುತ್‌ ಸಂಪರ್ಕ ಪಡೆಯುತ್ತಿರುವ ಗ್ರಾಹಕರಿಗೆ ಬಾಕಿ ಬಿಲ್‌ ಪಾವತಿಸುವಂತೆ ಒತ್ತಡ ಹೇರಬಾರದು. ವಿದ್ಯುತ್‌ ಸಂಪರ್ಕ ಕಡಿತಗೊಳಿಸಬಾರದು’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸೆಸ್ಕ್‌ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿಯ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಬಸವಣ್ಣ ಅವರು, ಭಾಗ್ಯಜ್ಯೋತಿ ಬಿಲ್‌ ಬಾಕಿ ವಸೂಲಿ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಪುಟ್ಟರಂಗಶೆಟ್ಟಿ ಅವರು, ‘ಸೆಸ್ಕ್‌ಅಧಿಕಾರಿಗಳು ಹೊನ್ನೂರು, ಅಂಬಳೆ, ಆಲೂರು ಗ್ರಾಮಗಳತ್ತ ತಿರುಗಿಯೂ ನೋಡುವುದಿಲ್ಲ. ಅಲ್ಲಿ ಬಾಕಿ ಬಿಲ್‌ ಕೇಳುತ್ತಿಲ್ಲ. ಉಳಿದ ಗ್ರಾಮಗಳಿಗೆ ತೆರಳಿ ಹಣ ಪಾವತಿಸದವರ ಸಂಪರ್ಕ ಕಡಿತ ಮಾಡುತ್ತಿದ್ದಾರೆ’ ಎಂದು ಅತೃಪ್ತಿ ಹೊರಹಾಕಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎನ್.ಬಾಲರಾಜು, ಆರ್‌.ಬಾಲರಾಜು ಅವರು ಕೂಡ ಇದಕ್ಕೆ ಧ್ವನಿ ಸೇರಿಸಿದರು.

‘ಎಷ್ಟು ಬಿಲ್‌ ಬಾಕಿಯಿದೆ? ಆರೇಳು ವರ್ಷಗಳಿಂದ ಏಕೆ ವಸೂಲಿ ಮಾಡಲಿಲ್ಲ. ಬಡ ಫಲಾನುಭವಿಗಳಿಗೆ ದುಬಾರಿ ಬಿಲ್‌ ಪಾವತಿಸಲು ಸಾಧ್ಯವೇ’ ಎಂದು ಜನಪ್ರತಿನಿಧಿಗಳು ಖಾರವಾಗಿ ಪ್ರಶ್ನಿಸಿದರು.

ಸೆಸ್ಕ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಜು ಅವರು ಮಾತನಾಡಿ, ‘ಭಾಗ್ಯಜ್ಯೋತಿ ಬಿಲ್‌ ಅನ್ನು 2013ರ ವರೆಗೆ ಮನ್ನಾ ಮಾಡಲಾಗಿತ್ತು. ಒಂದು ವರ್ಷದಿಂದ ಈಚೆಗೆ ನಿಗಮದ ಆಡಳಿತ ಮಂಡಳಿಯು ಬಾಕಿ ಇರುವ ಬಿಲ್‌ ಅನ್ನು ವಸೂಲಿ ಮಾಡಲು ಮುಂದಾಗಿದೆ’ ಎಂದರು.

ತಾಲೂಕಿನಲ್ಲಿ ಬಾಕಿ ಇರುವ ಬಿಲ್‌ ಎಷ್ಟು ಹಾಗೂ ಇದುವರೆಗೆ ವಸೂಲಿಯಾಗಿರುವ ಹಣ ಎಷ್ಟು ಎಂದು ಸಿ.ಎನ್‌.ಬಾಲರಾಜು ಪ್ರಶ್ನಿಸಿದರು. ಇನ್ನೂ ₹4.22 ಕೋಟಿ ಹಣ ಬರಬೇಕಿದೆ ಎಂದು ಎಂಜಿನಿಯರ್‌ಗಳು ತಿಳಿಸಿದರು.

‘ಆರು ವರ್ಷಗಳಿಂದ ಬಿಲ್‌ ವಸೂಲಿ ಮಾಡಿಲ್ಲ. ಹಾಗಾಗಿ ಬಿಲ್‌ ಮೊತ್ತ ಹೆಚ್ಚಾಗಿದೆ. ಅಂಬಳೆ, ಹೊನ್ನೂರು, ಆಲೂರುಗಳಲ್ಲಿ ವಸೂಲಿಗೆ ಹೋದರೆ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗುತ್ತಾರೆ. ಹಾಗಾಗಿ ಸರಿಯಾಗಿ ಆ ಗ್ರಾಮಗಳಲ್ಲಿ ಸರಿಯಾಗಿ ವಸೂಲಿ ಆಗಿಲ್ಲ. ಇತ್ತೀಚೆಗೆ ಅಲ್ಲೂ ವಸೂಲಿ ಮಾಡಲು ಆರಂಭಿಸಲಾಗಿದೆ’ ಎಂದು ರಾಜು ಅವರು ಹೇಳಿದರು.

ನೀರಿನ ಘಟಕ ಸ್ಥಗಿತಕ್ಕೆ ಅಸಮಾಧಾನ: ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿರುವುದಕ್ಕೆ ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ತಾಲೂಕಿಗೆ 62 ಶುದ್ಧ ಕುಡಿಯುವ ನೀರಿನ ಘಟಕಗಳು ಅನುಮೋದನೆಯಾಗಿವೆ. ಈ ಪೈಕಿ 20 ಘಟಕಗಳು ಪೂರ್ಣಗೊಂಡಿದ್ದು, 18ರ ಕಾಮಗಾರಿ ಪ್ರಗತಿಯಲ್ಲಿವೆ. ನಾಲ್ಕನ್ನು ಬಿಟ್ಟು, 14 ಅನ್ನು ಮಾರ್ಚ್‌ 15ರೊಳಗೆ ಪೂರ್ಣಗೊಳಿಸಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ನಾಗರಾಜು ಅವರು ಸಭೆಗೆ ತಿಳಿಸಿದರು.

ಇದರಿಂದ ತೃಪ್ತರಾಗದ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಲವು ಗ್ರಾಮಗಳಲ್ಲಿ ಘಟಕಗಳು ಕೆಟ್ಟು ನಿಂತಿವೆ. ಕೆಲವು ಇನ್ನೂ ನಿರ್ಮಾಣ ಹಂತದಲ್ಲಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನೀರಿನ ಘಟಕಗಳು ಗ್ರಾಮಗಳಲ್ಲಿ ಎದ್ದು ಕಾಣುತ್ತಿವೆ. ನೀರು ಮಾತ್ರ ಬರುತ್ತಿಲ್ಲ. ಮೊದಲ 15ರಿಂದ 20 ದಿನಗಳವರೆಗೆ ನೀರು ಬರುತ್ತದೆ. ನಂತರ ಕೆಟ್ಟು ಹೋಗುತ್ತವೆ. ಅವುಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಕಲಾ, ಶಶಿಕಲಾ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಪ್ರೇಮ್‌ ಕುಮಾರ, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಗೈರಾದವರಿಗೆ ನೋಟಿಸ್‌ ನೀಡಲು ಸೂಚನೆ

ಕೆಡಿ‌ಪಿ ಸಭೆ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆನೋಟೀಸ್ ಜಾರಿ ಮಾಡುವಂತೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸೂಚನೆ ನೀಡಿದ ಪ್ರಸಂಗವೂ ನಡೆಯಿತು

ನಿರ್ಮಿತಿ ಕೇಂದ್ರ,ಕೆಎಸ್ಆರ್‌ಟಿಸಿ, ಸಾಮಾಜಿಕ ಅರಣ್ಯ, ಲೋಕೋಪಯೋಗಿ ಇಲಾಖೆ, ಕನ್ನಡಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳ ಅಧಿಕಾರಿಗಳು ಸಭೆಗೆ ಬಂದಿರಲಿಲ್ಲ.

ಇದರಿಂದ ಕೋಪಗೊಂಡಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಜಿಲ್ಲಾಪಂಚಾಯಿತಿ ಸದಸ್ಯರು ನೋಟಿಸ್‌ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT