ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳುನಾಡು ಕಳ್ಳಭಟ್ಟಿ ದುರಂತ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ತಪಾಸಣೆ

Published 22 ಜೂನ್ 2024, 13:45 IST
Last Updated 22 ಜೂನ್ 2024, 13:45 IST
ಅಕ್ಷರ ಗಾತ್ರ

ಚಾಮರಾಜನಗರ: ತಮಿಳುನಾಡಿನ ಕಲ್ಲಕುರಚಿಯಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತ ಹಿನ್ನೆಲೆಯಲ್ಲಿ ಗಡಿಜಿಲ್ಲೆ ಚಾಮರಾಜನಗರದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ಹಿಂದೆ ಕಳ್ಳಭಟ್ಟಿ ತಯಾರಿಸಲಾಗುತ್ತಿದ್ದ ಪ್ರದೇಶಗಳಿಗೆ ತೆರಳಿದ ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದರು.

ಚಾಮರಾಜನಗರ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಜಿಲ್ಲಾ ಅಬಕಾರಿ ದಳದ ಇನ್‌ಸ್ಪೆಕ್ಟರ್, ಕೊಳ್ಳೇಗಾಲ ವಲಯದ ಅಬಕಾರಿ ಇನ್‌ಸ್ಪೆಕ್ಟರ್, ರಾಮಾಪುರ ಪೋಲಿಸ್ ಠಾಣೆಯ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಹನೂರು ತಾಲ್ಲೂಕು ರಾಮಾಪುರ ಠಾಣಾ ವ್ಯಾಪ್ತಿಯಲ್ಲಿರುವ ಹಳೆ ಕಳ್ಳಭಟ್ಟಿ ತಯಾರಿಕೆ ಗ್ರಾಮಗಳಾದ ಕೊತ್ತಗುಳಿ, ಸಾಹೇಬರ ದೊಡ್ಡಿ, ವೀರನಾಯ್ಕನ ದೊಡ್ಡಿ, ಮಾರಳ್ಳಿ, ದೊಮ್ಮನ ಗದ್ದೆ ಹಾಗೂ ಕಾಂಚಳ್ಳಿ ಗ್ರಾಮಗಳಲ್ಲಿ ತಪಾಸಣೆ ನಡೆಸಿದರು.

ಗ್ರಾಮದ ಸುತ್ತಮುತ್ತಲಿನ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಪರಿಶೀಲಿಸಲಾಯಿತು. ಹಿಂದೆ ಕಳ್ಳಭಟ್ಟಿ ತಯಾರಿಕೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದವರ ಮನೆಗಳ ಮೇಲೂ ದಾಳಿ ಮಾಡಿ ಪರಿಶೀಲಿಸಲಾಯಿತು. ಗ್ರಾಮಸ್ಥರಿಗೆ ತಿಳಿವಳಿಕೆ ನೀಡಲಾಯಿತು. ಪರಿಶೀಲನೆ ವೇಳೆ ಕಳ್ಳಭಟ್ಟಿ ಅಕ್ರಮಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಬಕಾರಿ ಉಪ ಆಯುಕ್ತ ನಾಗಶಯನ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕ ಮೋಹನ್‌ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಸುನೀಲ್, ಉಮಾಶಂಕರ್, ಸುರೇಶ್, ಹನೂರು ಇನ್‌ಸ್ಪೆಕ್ಟರ್ ಮನೋಜ್‌ಕುಮಾರ್ ಹಾಗೂ ಸಿಬ್ಬಂದಿ ಚಾಮರಾಜನಗರ ತಾಲೂಕಿನ ಮೂಕನಪಾಳ್ಯ ಗ್ರಾಮದಲ್ಲಿ ಹಳೆಯ ಕಳ್ಳಭಟ್ಟಿ ಪ್ರಕರಣದ ಆರೋಪಿಗಳ ಮನೆಗಳನ್ನು ತಪಾಸಣೆ ಮಾಡಲಾಯಿತು. ಹಿಂದೆ ಕಳ್ಳಭಟ್ಟಿ ತಯಾರಿಸುತ್ತಿದ್ದ ಸ್ಥಳಗಳಿಗೂ ಭೇಟಿನೀಡಿ ಪರಿಶೀಲಿಸಲಾಯಿತು. 

ಅಬಕಾರಿ ಉಪ ಅಧೀಕ್ಷಕ ನಾಗಶಯನ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸಂಪೂರ್ಣ ನಿರ್ಮೂಲನೆಯಾಗಿದೆ. ತಮಿಳುನಾಡಿನಲ್ಲಿ ನಡೆದಿರುವ ಕಳ್ಳಭಟ್ಟಿ ದುರಂತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದಿಢೀರ್ ಪರಿಶೀಲನೆ ನಡೆಸಲಾಗಿದ್ದು ಯಾವುದೇ ಕಳ್ಳಭಟ್ಟಿ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT