ಬುಧವಾರ, ಮೇ 18, 2022
24 °C
ಕಾಯಂ ಪದವೀಧರ ಶಿಕ್ಷಕರ ನೇಮಕ ಪ್ರಗತಿಯಲ್ಲಿ; ಅತಿಥಿ ಶಿಕ್ಷಕರ ನೇಮಕಕ್ಕೂ ಸಿದ್ಧತೆ

ಶಾಲಾರಂಭ: ಶಿಕ್ಷಕರ ಕೊರತೆ ಕಾಡದು?

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: 2022–23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಶಿಕ್ಷಣ ‌ಇಲಾಖೆ ಸಿದ್ಧತೆ ನಡೆಸಿದ್ದು, ಈ ಬಾರಿ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಕಾಡುವ ಸಾಧ್ಯತೆ ಕಡಿಮೆ. 

ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 507 ಶಿಕ್ಷಕರ ಹುದ್ದೆ ಖಾಲಿ ಇವೆ. ಪ್ರೌಢಶಾಲೆಗಳಲ್ಲಿ 184 ಶಿಕ್ಷಕರ ಹುದ್ದೆ ಖಾಲಿಯಿವೆ. 

ರಾಜ್ಯ ಸರ್ಕಾರ ಈಗಾಗಲೇ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ (6ರಿಂದ 8ನೇ ತರಗತಿ) ಬೋಧನೆ ಮಾಡುವ ಪದವೀಧರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿದ್ದು, ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. ರಾಜ್ಯದಾದ್ಯಂತ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ. 

ಇದಲ್ಲದೇ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಇಲಾಖೆ ಆರಂಭಿಸಿದೆ.

ಜಿಲ್ಲೆಗೆ 223 ಪದವೀಧರ ಶಿಕ್ಷಕರ ಹುದ್ದೆ ಹಂಚಿಕೆಯಾಗಿದ್ದು, ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದೇ 21, 22ರಂದು ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. 223 ಹುದ್ದೆಗೆ 1,844 ಅರ್ಜಿ ಬಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

‘ಟಿಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ, ಬಿ.ಇಡಿ ಮಾಡಿರುವ ಪದವೀ ಧರರು (ಶೇ 50ರಷ್ಟು ಅಂಕ ಪಡೆದಿರ ಬೇಕು) ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅರ್ಹರು. ಅಭ್ಯರ್ಥಿಗಳು ರಾಜ್ಯದ ಯಾವ ಭಾಗದಿಂದಾದರೂ ಅರ್ಜಿ ಹಾಕ ಬಹುದು. ನೇಮಕಾತಿ ಜಿಲ್ಲಾ ಮಟ್ಟದಲ್ಲಿ ನಡೆಯುತ್ತದೆ’ ಎಂದು ಡಿಡಿಪಿಐ ಎಸ್‌.ಎನ್‌.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ನೇಮಕ: ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷರನ್ನು ನೇಮಿಸಲೂ ಸರ್ಕಾರ ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಿಗೆ 343 ಹಾಗೂ ಪ್ರೌಢಶಾಲೆಗಳಿಗೆ 77 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆ. 

ನೇಮಕಾತಿ ಪ್ರಕ್ರಿಯೆ ಆರಂಭ ಗೊಂಡಿದ್ದು ಶಾಲಾರಂಭಕ್ಕೂ ಮುನ್ನ ಅತಿಥಿ ಶಿಕ್ಷಕರು ನೇಮಕ ವಾಗವಾಗಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಾಲಾ ಮಟ್ಟದಲ್ಲೇ ಅತಿಥಿ ಶಿಕ್ಷಕರ ನೇಮಕಾತಿ ನಡೆಯಲಿದ್ದು, ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಮೆರಿಟ್‌ ಆಧಾರದಲ್ಲಿ ನೇಮಕಾತಿ ಮಾಡಲಾಗುವುದು ಎಂದು ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲಾರಂಭಕ್ಕೆ ಅತಿಥಿ ಶಿಕ್ಷಕರು ಲಭ್ಯ

‘ನಮ್ಮಲ್ಲಿನ ಪ್ರಾಥಮಿಕ ಶಾಲೆಗಳಲ್ಲಿ 507, ಪ್ರೌಢಶಾಲೆಗಳಲ್ಲಿ 184 ಶಿಕ್ಷಕರ ಹುದ್ದೆ ಖಾಲಿಯಿದೆ. ಪ್ರಾಥಮಿಕ ಶಾಲೆಗಳಿಗೆ ಪದವೀಧರ ಶಿಕ್ಷಕರು 223 ಹಾಗೂ 343 ಅತಿಥಿ ಶಿಕ್ಷಕರ ನೇಮಕವಾದರೆ ಈ ವರ್ಷ ಶಿಕ್ಷಕರ ಕೊರತೆ ಕಂಡು ಬರದು. ಪ್ರೌಢಶಾಲೆಗಳಿಗೂ 77 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ಸಿಕ್ಕಿದೆ’ ಎಂದು ಡಿಡಿಪಿಐ ಮಂಜುನಾಥ್‌ ಹೇಳಿದರು. 

‘ಶಾಲೆ ಆರಂಭವಾಗುವಾಗ ಅತಿಥಿ ಶಿಕ್ಷಕರ ನೇಮಕಾತಿ ನಡೆಯಲಿದೆ. ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಸ್ವಲ್ಪ ಸಮಯ ಹಿಡಿಯಬಹುದು. ಸೆಪ್ಟೆಂಬರ್‌–ಅಕ್ಟೋಬರ್‌ ವೇಳೆಗೆ ಶಿಕ್ಷಕರ ನೇಮಕವಾಗುವ ಸಾಧ್ಯತೆ ಇದೆ’ ಎಂದರು. 

ಅತಿಥಿ ಶಿಕ್ಷಕರಾಗಿ ಬರುವವರೇ ಪದವೀಧರ ಶಿಕ್ಷಕರ ಹುದ್ದೆಗೂ ಅರ್ಜಿ ಸಲ್ಲಿಸಿರುವ ಸಾಧ್ಯತೆ ಇರುತ್ತದೆ. ಅಲ್ಲಿ ಕಾಯಂ ಶಿಕ್ಷಕರಾಗಿ ನೇಮಕಗೊಂಡರೆ ಅತಿಥಿ ಶಿಕ್ಷಕರ ಸ್ಥಾನವನ್ನು ಅವರು ತ್ಯಜಿಸಲಿದ್ದಾರೆ. ಆದರೆ, ಇಂತಹ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇರುತ್ತದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು