ಶುಕ್ರವಾರ, ಸೆಪ್ಟೆಂಬರ್ 30, 2022
25 °C
ಸಿಮ್ಸ್‌ನಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಡೀನ್‌ ಡಾ.ಸಂಜೀವ್‌ ಅಭಿಮತ

ಚಾಮರಾಜನಗರ: ‘ಋಣಾತ್ಮಕ ಮನೋಭಾವ ದೂರ ಮಾಡುವ ಶಿಕ್ಷಕರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ವಿದ್ಯಾರ್ಥಿಗಳಲ್ಲಿರುವ ಋಣಾತ್ಮಕ ಮನೋಭಾವನೆಗಳನ್ನು ತೊಡೆದು ಹಾಕುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು’ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್‌) ಡೀನ್ ಹಾಗೂ ನಿರ್ದೇಶಕ ಡಾ.ಜಿ.ಎಂ.ಸಂಜೀವ್ ಸೋಮವಾರ ಅಭಿಪ್ರಾಯಪಟ್ಟರು.

ಸಿಮ್ಸ್‌ನಲ್ಲಿ ನಡೆದ  ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಶಿಕ್ಷರನ್ನು ನೋಡಿ ಅವರನ್ನೇ ಅನುಸರಿಸುತ್ತಿರುತ್ತಾರೆ. ಶಿಸ್ತಿನ ಪರಿಪಾಲನೆಯಲ್ಲಿ ಶಿಕ್ಷಕರು ಯಾವಾಗಲೂ ಮುಂದಿರಬೇಕು. ವಿದ್ಯಾರ್ಥಿಗಳು ಬೆಳೆದಂತೆ ಅವರಲ್ಲಿ ಆವರಿಸಿಕೊಳ್ಳುವ ಋಣಾತ್ಮಕ ಮನೋಭಾವಗಳನ್ನು ದೂರ ಮಾಡಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ’ ಎಂದರು.

‘ಉತ್ತಮ ಶಿಕ್ಷಕರು ನಿರಂತರ ಕಲಿಕೆಯಲ್ಲಿ ತೊಡಗಿರಬೇಕು.  ಉತ್ತಮ ವಿದ್ಯಾರ್ಥಿಗಳಿಂದ ಶಿಕ್ಷಕ ಪರಿಪೂರ್ಣನಾಗುತ್ತಾನೆ. ವಿದ್ಯಾರ್ಥಿಗಳ ಯಶಸ್ಸಿನ ಉತ್ತುಂಗವನ್ನು ನಿರಾಪೇಕ್ಷೆಯಿಂದ ಆನಂದಿಸುವುದು ಶಿಕ್ಷಕರು ಮಾತ್ರ’ ಎಂದು ಸಂಜೀವ್‌ ಹೇಳಿದರು.  

ಸಿಮ್ಸ್‌ ಪ್ರಾಂಶುಪಾಲ ಡಾ. ಗಿರೀಶ್ ವಿ. ಪಾಟೀಲ ಮಾತನಾಡಿ, ‘ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಿಗೆ ಆದರ್ಶವಾಗಿದ್ದಾರೆ. ಹೀಗಾಗಿ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಉತ್ತಮ ಶಿಕ್ಷಕರು ವಿದ್ಯಾರ್ಥಿಗಳಿಗೆ ನೈತಿಕತೆ, ಆತ್ಮವಿಶ್ವಾಸ, ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಧೋರಣೆಯನ್ನು ಬೆಳೆಸುತ್ತಾರೆ ಎಂದರು. 

ಸಿಮ್ಸ್ ಟೀಚರ್ಸ್‌ ಅಸೋಸಿಯೇಷನ್‌  ಅಧ್ಯಕ್ಷ ಡಾ.ಸಿ.ವಿ.ಮಾರುತಿ ಮಾತನಾಡಿ, ‘ವೇದಗಳ ಕಾಲದಿಂದಲೂ ಗುರುಗಳಿಗೆ ಮೊದಲ ಸ್ಥಾನವನ್ನು ನೀಡಲಾಗಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ಬೆಳೆದರೆ ಮಾತ್ರ ಉನ್ನತ ಸ್ಥಾನ ತಲುಪಲು ಸಾಧ್ಯ’ ಎಂದರು.

ಇದೇ ಸಂಧರ್ಭದಲ್ಲಿ ಜಿಲ್ಲಾ ಸಿಮ್ಸ್ ಟೀಚರ್ಸ್‌ ಅಸೋಸಿಯೇಷನ್‌ ಲಾಂಛನವನ್ನು ಡಾ. ಸಂಜೀವ್ ಅನಾವರಣಗೊಳಿಸಿದರು. ಶಿಕ್ಷಕರ ದಿನದ ಅಂಗವಾಗಿ ಅವರನ್ನು ಸನ್ಮಾನಿಸಲಾಯಿತು. 

ವೈದ್ಯಕೀಯ ಕಾಲೇಜಿನ ಬೋಧಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.