ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಕಾಡಿದ ಚಳಿ, ಜನ, ಜಾನುವಾರು ನಡುಕ

Published 18 ಡಿಸೆಂಬರ್ 2023, 13:40 IST
Last Updated 18 ಡಿಸೆಂಬರ್ 2023, 13:40 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಾದ್ಯಂತ ಸೋಮವಾರ ದಿಢೀರ್ ಕುಸಿದ ಉಷ್ಣಾಂಶ ಹಾಗೂ ಶೀತ ಗಾಳಿಗೆ ಜನಜೀವನ ತಲ್ಲಣಗೊಂಡಿತು. ಗಿರಿ ಶಿಖರಗಳ ಮುಂಜು ಮುಸುಕಿದ ಹಾದಿ, ಮೋಡದ ಚಲ್ಲಾಟಕ್ಕೆ ವರುಣನ ಕಾಟವೂ ಸೇರಿ ಮಂಜಿನ ಮೆರವಣಿಗೆ ಸಾಗಿತು. ಪಶು ಸಾಕಣೆದಾರರು ಮತ್ತು ಶ್ರಮಿಕರು ದಿನವಿಡೀ ಪರಿತಪಿಸುವಂತಾಯಿತು.

ಮುಂಜಾನೆಯಿಂದ ಸಂಜೆ ತನಕ ಮೈಕೊರೆಯುವ ಚಳಿ ಜನರನ್ನು ಬಾಧಿಸಿತು. ಬಹುತೇಕರು ಬೆಚ್ಚನೆ ಉಡುಪಿನ ಹುಡುಕಾಟದಲ್ಲಿ ಕಾಲ ಕಳೆದರು. ವೃದ್ಧರು ಮತ್ತು ಚಿಣ್ಣರು ಮನೆಯಿಂದ ಹೊರ ಬರದೆ ಶೀತದಿಂದ ರಕ್ಷಿಸಿಕೊಳ್ಳಲು ಮುಂದಾದರು. ಹೆಚ್ಚಿದ ತಾಪದಿಂದ ಪರಿತಪಿಸಿದ್ದ ಮಂದಿ ಚಳಿಯ ಚಲ್ಲಾಟಕ್ಕೆ ಬಿಸಿ ಪೇಯ, ಕಾರದ ತಿಂಡಿ ಸವಿಯುತ್ತ ಕಾಲ ಕಳೆದರು.

ಬಿಳಿಗಿರಿರಂಗನಬೆಟ್ಟದಲ್ಲಿ ಸಣ್ಣ ಹನಿಯೂ ನಿವಾಸಿಗಳನ್ನು ಕಾಡಿತು. ಭಕ್ತರ ಮೈ ಮನಸ್ಸಿಗೆ ಕಚಗುಳಿ ಇಟ್ಟಿತು. ಶ್ರಮಿಕರು ಕೆಲಸ ಬಿಟ್ಟು ಬೆಂಕಿ ಮುಂದೆ ಕೂತು ದೇಹದ ಉಷ್ಣಾಂಶ ಹೆಚ್ಚಿಸಿಕೊಂಡರು. ಹಬ್ಬದ ಹಿನ್ನಲೆಯಲ್ಲಿ ಬದಲಾದ ಹವಾಮಾನವೂ ಸೇರಿ ಕಾಫಿತೋಟ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಮಂದಿ ಬೇಗ ಕೆಲಸ ಮುಗಿಸಿ ಮನೆಗಳತ್ತ ಹೆಜ್ಜೆ ಹಾಕಿದರು.

‘ವರ್ಷಾಂತ್ಯದಲ್ಲಿ ಮಾಗಿಯ ಚಳಿಯ ಮೊದಲ ದರ್ಶನವಾಗಿದೆ. ಮೂರು ದಿನಗಳಿಂದ ತುಂತುರು ಮಳೆಯೂ ಕಾಣಿಸಿದೆ. ಬೆಟ್ಟದ ತುಂಬ ಮಂಜು ಮಳೆ; ಶೀತ ಗಾಳಿಯ ರಭಸ ಹೆಚ್ಚಿದ್ದು, ಆರೋಗ್ಯ ಸಮಸ್ಯೆಯೂ ಕಾಡಲಿದೆ. ಮುಂದಿನ ದಿನಗಳಲ್ಲಿ ಉಷ್ಣಾಂಶ ಮತ್ತಷ್ಟು ಕುಸಿಯುವ ಆತಂಕ ಕಾಡಿದೆ’ ಎಂದು ಬಿಳಿಗಿರಿಬೆಟ್ಟದ ಮುಖಂಡ ಬೊಮ್ಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT