ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯ, ಚರ್ಚ್‌, ಮಸೀದಿ ಸೋಮವಾರದಿಂದ ಮುಕ್ತ

ಮುಂಜಾಗ್ರತಾ ಕ್ರಮಗಳ ಪಾಲನೆಗೆ ಆಡಳಿತ ಮಂಡಳಿಗಳ ಸಿದ್ಧತೆ, ಮಾಸ್ಕ್‌, ಅಂತರ ಕಾಯ್ದುಕೊಳ್ಳುವಿಕೆ ಕಡ್ಡಾಯ
Last Updated 7 ಜೂನ್ 2020, 16:20 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ತಡೆಗೆ ಲಾಕ್‌ಡೌನ್‌ ಜಾರಿಯಾದ ಸಂದರ್ಭದಲ್ಲಿ ಸಾರ್ವಜನಿಕರ/ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದ ದೇವಸ್ಥಾನಗಳು, ಮಸೀದಿಗಳು ಹಾಗೂ ಚರ್ಚ್‌ಗಳು ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳು ಸೋಮವಾರದಿಂದ ತೆರೆಯಲಿವೆ.

ಕೋವಿಡ್‌–19 ತಡೆಗಾಗಿ ಸರ್ಕಾರ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ ಎಲ್ಲ ಧಾರ್ಮಿಕ ಕೇಂದ್ರಗಳ ಆಡಳಿತ ಮಂಡಳಿ, ಧಾರ್ಮಿಕ ಮುಖಂಡರಿಗೆ ಸೂಚಿಸಿದೆ.

ಅದರಂತೆ ಮಾಸ್ಕ್‌ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ಗಳ ಬಳಕೆ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್‌ ಧರಿಸದವರಿಗೆ ಧಾರ್ಮಿಕ ಕೇಂದ್ರಗಳಿಗೆ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ.

ಮಹದೇಶ್ವರ ಬೆಟ್ಟದ ಮಲೆ‌ಮಹದೇಶ್ವರ ಸ್ವಾಮಿ ದೇವಾಲಯ, ಕೊಳ್ಳೇಗಾಲ ತಾಲ್ಲೂಕಿನ ಮಧ್ಯರಂಗ ಸಮೂಹ ದೇವಾಲಯಗಳು, ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ದೇವಾಲಯ, ಚಾಮರಾಜನಗರದ ಚಾಮರಾಜೇಶ್ವರಸ್ವಾಮಿ ದೇವಾಲಯ, ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ದೇವಾಲಯ ಸೇರಿದಂತೆ ಎಲ್ಲ ದೇವಸ್ಥಾನಗಳು ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲು ಸಿದ್ಧತೆ ನಡೆಸಿವೆ.

ದೇವಸ್ಥಾನಕ್ಕೆ ಬರುವ ಭಕ್ತರು ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಲ್ಲುವುದಕ್ಕಾಗಿ ಗುರುತು ಮಾಡಲಾಗಿದೆ. ಪ್ರವೇಶದ್ವಾರದ ಬಳಿ ಸ್ಯಾನಿಟೈಸರ್‌ ನೀಡಲು ವ್ಯವಸ್ಥೆಯನ್ನೂ ಮಾಡಲಾಗಿದೆ.

ಸದ್ಯಕ್ಕೆ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ತೀರ್ಥ ಪ್ರಸಾದ ನೀಡಲು ಅವಕಾಶ ನೀಡಲಾಗಿಲ್ಲ.ಸಂಜೆ 7ಗಂಟೆಯ ಒಳಗೆ ದೇವರ ದರ್ಶನ ಮಾಡುದಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿ ತಂಗುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಚರ್ಚ್‌, ಮಸೀದಿ ಹಾಗೂ ಇತರ ಧಾರ್ಮಿಕ ಕೇಂದ್ರಗಳಿಗೂ ಈ ನಿಯಮ ಅನ್ವಯವಾಗಲಿದೆ.

ಯಳಂದೂರು ವರದಿ: ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ವೆಂಕಟೇಶ್ ಪ್ರಸಾದ್ ಅವರು, ‘ಸೋಮವಾರದಿಂದ ದೇಗುಲಗಳ ಆರಂಭಕ್ಕೆ ಸಿದ್ಧತೆ ನಡೆದಿದೆ. ಸರ್ಕಾರದ ಸೂಚನೆಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಆದರೆ, ಅನ್ನದಾಸೋಹ, ಭವನ, ರೆಸಾರ್ಟ್‌ ಮತ್ತು ಲಾಡ್ಜ್‌ಗಳನ್ನು ತೆರೆಯಲು ಅವಕಾಶ ನೀಡಿಲ್ಲ’ ಎಂದರು.

‘ಮುಜರಾಯಿ ಇಲಾಖೆಯ ಅಧೀನದಲ್ಲಿ ತಾಲ್ಲೂಕಿನ 61 ದೇವಾಲಯಗಳು ಸೇವೆ ಒದಗಿಸಲಿವೆ. ಬಿಳಿಗಿರಿರಂಗನಬೆಟ್ಟ ಮಾತ್ರ ‘ಎ’ ದರ್ಜೆ ಹೊಂದಿದೆ. ಉಳಿದ 60 ದೇವಾಲಯಗಳು ‘ಸಿ’ ದರ್ಜೆಯವು. ಎಲ್ಲಾ ಧಾರ್ಮಿಕ ಕೇಂದ್ರಗಳು ಸರ್ಕಾರ ಸೂಚಿಸಿದ ನಿಯಮಗಳಿಗೆ ಒಳಪಟ್ಟು ದರ್ಶನಕ್ಕೆ ಅವಕಾಶ ಕಲ್ಪಿಸಲಿದೆ’ ಎಂದು ಉಪ ತಹಶೀಲ್ದಾರ್ ನಂಜಯ್ಯ ಅವರು ತಿಳಿಸಿದರು.

ಕೆಎಸ್‌ಆರ್‌ಟಿಸಿಯಿಂದ ಬಸ್‌ ವ್ಯವಸ್ಥೆ

ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟಕ್ಕೆ ಕೆಎಸ್‌ಆರ್‌ಟಿಸಿಯು ಸೋಮವಾರದಿಂದ ಬಸ್‌ ವ್ಯವಸ್ಥೆ ಕಲ್ಪಿಸಲಿದೆ.

ಗುಂಡ್ಲುಪೇಟೆ, ಚಾಮರಾಜನಗರ ಹಾಗೂ ಕೊಳ್ಳೇಗಾಲದಿಂದ ಬಸ್‌ಗಳು ಬೆಳಿಗ್ಗೆಯಿಂದಲೇ ಸಂಚರಿಸಲಿವೆ.

‘ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಬೆಳಿಗ್ಗೆಯಿಂದಲೇ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್‌ಗಳನ್ನು ಹಾಕುತ್ತೇವೆ. ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೂ ಬಸ್‌ಗಳು ಸಂಚರಿಸಲಿವೆ’ ಎಂದು ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹದೇಶ್ವರ ಬೆಟ್ಟಕ್ಕೆ ಲಾಕ್‌ಡೌನ್‌ನಿಂತಲೂ ಮೊದಲು ಪ್ರತಿ ದಿನ ವಿವಿಧ ಭಾಗಗಳಿಂದ 56 ಬಸ್‌ಗಳು ಸಂಚರಿಸುತ್ತಿದ್ದವು. ಜಿಲ್ಲೆಯಿಂದಲೇ 30 ಬಸ್‌ಗಳು ಓಡಾಟ ನಡೆಸುತ್ತಿದ್ದವು. ನಮ್ಮಲ್ಲಿ ಬಸ್‌ಗಳು ಸಾಕಷ್ಟು ಇವೆ. ಭಕ್ತರು ಬಂದ ಹಾಗೆಯೇ ಬಿಡುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

ಹೋಟೆಲ್‌ ಕಾರ್ಯಾರಂಭ ಇಂದು

ಜಿಲ್ಲೆಯಾದ್ಯಂತ ಹೋಟೆಲ್‌ಗಳು ಇಂದು ಪುನರಾರಂಭವಾಗಲಿವೆ. ಇದುವರೆಗೂ ಕೆಲವು ಹೋಟೆಲ್‌ಗಳು ತೆರೆದು, ಪಾರ್ಸೆಲ್‌ ಮಾತ್ರ ನೀಡಲಾಗುತ್ತಿತ್ತು. ಅಲ್ಲೇ ಆಹಾರ ಸೇವಿಸುವುದಕ್ಕೆ ಅವಕಾಶ ಇರಲಿಲ್ಲ.

ಕೆಲವು ಹೋಟೆಲ್‌ಗಳು ತೆರೆದಿರಲಿಲ್ಲ. ಸೋಮವಾರದಿಂದ ಎಲ್ಲ ಹೋಟೆಲ್‌ಗಳು ಕಾರ್ಯಾರಂಭ ಮಾಡಲಿದ್ದು, ಗ್ರಾಹಕರು ಅಲ್ಲಿಯೇ ಆಹಾರ ಸೇವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT