ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸಚಿವ ಸೋಮಣ್ಣಗೆ ಹೋರಾಟ ಸಮಿತಿಯ ಕೃತಜ್ಞತೆ

ಆನೆಮಡುವಿನ ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಇಂದು ಚಾಲನೆ
Last Updated 26 ಮಾರ್ಚ್ 2023, 8:32 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಆನೆ ಮಡುವಿನ ಕೆರೆಗೆ ನೀರು ಹರಿಸಬೇಕು ಎಂಬುದು ಉಡಿಗಾಲ ಭಾಗದ ರೈತರ ಹಲವು ವರ್ಷಗಳ ಬೇಡಿಕೆಯಾಗಿದ್ದು, ಅದನ್ನು ಈಡೇರಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಕೆರೆಗಳಿಗೆ ನೀರು ತಂಬಿಸುವ ಹೋರಾಟ ಸಮಿತಿ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಶನಿವಾರ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ವಿ.ಸೋಮಣ್ಣ ಭಾನುವಾರ ನೀರು ತುಂಬಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಏಳು ಕಿ.ಮೀ ದೂರದ ಮಾರ್ಗದಲ್ಲಿ ಗುರುತ್ವಾಕರ್ಷಣೆ ಮೂಲಕ ಕೆರೆಗೆ ನೀರು ಹರಿಯಲಿದೆ’ ಎಂದರು.

‘ತಾಲ್ಲೂಕಿನ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಂಡಿದ್ದರೂ, ಆನೆ ಮಡುವಿನ ಕೆರೆ ಯೋಜನೆ 2014ರಿಂದಲೂ ನನೆಗುದಿಗೆ ಬಿದ್ದಿತ್ತು. ಕೆಲವು ವಿರೋಧಗಳಿಂದಾಗಿ ಆನೆಮಡುವಿನ ಕೆರೆಗೆ ನೀರು ಹರಿಸಲಾಗದೆ ಈ ಯೋಜನೆ ಅಪೂರ್ಣವಾಗಿತ್ತು. ಸೋಮಣ್ಣನವರು ಒಂದೆಡೆ ತಮ್ಮಡಹಳ್ಳಿ ಕೆರೆಯಿಂದ ಗುರುತ್ವಾಕರ್ಷಣ ಶಕ್ತಿಯಿಂದ ಪೈಪ್ ಮೂಲಕ ಆನೆ ಮಡುವಿನ ಕೆರೆಗೆ ನೀರು ಹರಿಸಲು ₹3.70 ಕೋಟಿ ಯೋಜನೆಗೆ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇನ್ನೊಂದೆಡೆ ಲಕ್ಕೂರು ಬಳಿಯಿಂದ ₹1.50 ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಮೂಲಕ ಕೆರೆಗೆ ನೀರು ಹರಿದುಬರಲಿದೆ. ಅವರ ಮುತ್ಸದ್ದಿತನದಿಂದ ಯಾವುದೇ ವಿವಾದವಾಗದಂತೆ ಎರಡು ಕಡೆಯಿಂದ ಆನೆ ಮಡುವಿನ ಕೆರೆಗೆ ನೀರು ಹರಿಯಲಿದೆ’ ಎಂದರು.

‘ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದಾಗ, ಕಬಿನಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸಿದರೆ ಅಂಜರ್ತಲ ಮಟ್ಟ ಹೆಚ್ಚುತ್ತದೆ ಎಂದು 2008ರಲ್ಲಿ ಕಾರ್ಯಾಚರಣೆ ಆರಂಭಿಸಿದೆವು. ಸುತ್ತೂರು ಶ್ರೀಗಳ ಸೂಚನೆ, ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬದ್ಧತೆ, ಅಂದಿನ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿಯವರ ಕಾಳಜಿ ಹಾಗೂ ವಸತಿ ಸಚಿವರಾಗಿದ್ದ ವಿ. ಸೋಮಣ್ಣನವರ ಆಸಕ್ತಿಯಿಂದ ಕಾಮಗಾರಿ ಆರಂಭವಾಗಿ 2014ರ ಆಗಸ್ಟ್‌ 15ರಂದು ಕೆರೆಗಳಿಗೆ ನೀರು ಹರಿಯಿತು’ ಎಂದು ಸ್ಮರಿಸಿದರು.

'ಕೆರೆ ತುಂಬಿಸುವ ವಿಚಾರದಲ್ಲಿ ರಾಜಕೀಯ ಇಲ್ಲ. ಪಕ್ಷ ರಾಜಕಾರಣ ಇಲ್ಲ. ಜಿಲ್ಲೆಗೆ ರೈತರಿಗೆ ಅನುಕೂಲ ಮಾಡಿದವರು ಮಾಡುವವರನ್ನು ನಾವು ಬೆಂಬಲಿಸುತ್ತೇವೆ’ ಎಂದು ಗುರುಸ್ವಾಮಿ ಹೇಳಿದರು.

ಸಮಿತಿಯ ಕಾರ್ಯದರ್ಶಿ ಗೌಡಿಕೆ ನಾಗೇಶ್, ಎ.ಎಂ.ಗುರುಸ್ವಾಮಿ, ಮೂಡ್ನಾಕೂಡು ಲಿಂಗಣ್ಣ, ಹರವೆ ನಟರಾಜು, ಸುಂದರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT