ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ| ಸ್ಕಂದಗಿರಿಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರ ದುರ್ಮರಣ

ಪಾರ್ವತಾಂಬ ರಥೋತ್ಸವ; ಭಾರಿ ಜನಸ್ತೋಮ, ಒಮ್ಮೆಲೆ ರಥ ಎಳೆದಿದ್ದರಿಂದ ದುರ್ಘಟನೆ, ಆಡಳಿತದ ನಿರ್ಲಕ್ಷ್ಯ ಕಾರಣ?
Last Updated 15 ಮೇ 2022, 16:17 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಪ್ರಮುಖ ಧಾರ್ಮಿಕ ಕೇಂದ್ರವಾದ ಸ್ಕಂದಗಿರಿಯಲ್ಲಿ (ಪಾರ್ವತಿ ಬೆಟ್ಟ) ಭಾನುವಾರ ನಡೆದ ಪಾರ್ವಾತಾಂಬ ಸಮೇತ ಶ್ರೀ ಸೋಮೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಸಂದರ್ಭದಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟು, ಒಬ್ಬರು ಗಾಯಗೊಂಡಿರುವ ದುರ್ಘಟನೆ ನಡೆದಿದೆ.

ತಾಲ್ಲೂಕಿನ ಕಂದೇಗಾಲದ ಸರ್ಪಭೂಷಣ್‌ (27) ಹಾಗೂ ಅದೇ ಗ್ರಾಮದ ಸ್ವಾಮಿ (40) ಮೃತಪಟ್ಟವರು. ಕೋಡಸೋಗೆ ಗ್ರಾಮದ ಕರಿನಾಯಕ (50) ಎಂಬುವವರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರ್ಪಭೂಷಣ್‌ ಅವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ತೀವ್ರವಾಗಿ ಗಾಯಗೊಂಡಿದ್ದ ಸ್ವಾಮಿ ಅವರು ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಕೋವಿಡ್‌ ಕಾರಣದಿಂದ ದೇವಾಲಯದಲ್ಲಿ ಎರಡು ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ. ಹಾಗಾಗಿ, ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿತ್ತು. ಭಕ್ತರು ಒಮ್ಮೆಲೇ ರಥವನ್ನು ಎಳೆದಿದ್ದರಿಂದ ಹಾಗೂ ರಥದ ಬಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದುದರಿಂದ ನೂಕು ನುಗ್ಗಲು ಉಂಟಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ನಿರ್ಲಕ್ಷ್ಯ ಕಾರಣ?: ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದರೆ ಅವರನ್ನು ನಿಯಂತ್ರಿಸಲು ತಾಲ್ಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸ್ಥಳದಲ್ಲಿ ಪೊಲೀಸರೂ ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಅಗತ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೇರು ಎಳೆಯಲು ಹಗ್ಗ ಹಿಡಿದಿದ್ದರು. ಈ ಸಂದರ್ಭದಲ್ಲಿ ಅವರನ್ನು ಚದುರಿಸುವ ಕೆಲಸ ಮಾಡಲಿಲ್ಲ.ರಥ ಎಳೆಯುವ ಜಾಗವೂ ಸಮತಟ್ಟಾಗಿರಲಿಲ್ಲ. ಎಂದು ಸ್ಥಳೀಯರು ಹಾಗೂ ರೈತ ಮುಖಂಡರು ದೂರಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ರೈತರು ಹಾಗೂ ಸ್ಥಳೀಯರು ಪಟ್ಟು ಹಿಡಿದು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಬೆಳಿಗ್ಗೆ 11.40ರಿಂದ 12.15ರ ನಡುವೆ ರಥೋತ್ಸವ ನಡೆಯಿತು.ತಹಸೀಲ್ದಾರ್ ಸಿ.ಜಿ.ರವಿಶಂಕರ್ ಅವರು ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದ್ದರು. ರಥವನ್ನು ಎಲ್ಲರೂ ಒಂದೇ ಸಲಕ್ಕೆ ಎಳೆಯುವಾಗ ನೂಕು ನುಗ್ಗಲು ಉಂಟಾಯಿತು. ರಥದ ಸಮೀಪದಲ್ಲಿ ತೇರಿನ ಹಗ್ಗ ಹಿಡಿದಿದ್ದವರಲ್ಲಿ ಹಲವರು ಮುಗ್ಗರಿಸಿ ಬಿದ್ದರು. ಕೆಲವರು ಹೇಗೋ ಎದ್ದುಕೊಂಡರು. ಆದರೆ, ಸರ್ಪಭೂಷಣ್‌ ಅವರಿಗೆ ಏಳಲು ಸಾಧ್ಯವಾಗಲಿಲ್ಲ. ರಥದ ಹತ್ತಿರ ಇದ್ದವರು ಕೂಗಿಕೊಂಡರೂ ಉಳಿದವರಿಗೆ ಅದು ಕೇಳಲಿಲ್ಲ. ಅವರು ರಥ ಎಳೆಯುತ್ತಲೇ ಇದ್ದರು. ಕ್ಷಣಾರ್ಧದಲ್ಲಿ ರಥ ಸರ್ಪಭೂಷಣ್‌ ಅವರ ಮೈಮೇಲೆ ಹರಿಯಿತು. ಸ್ವಾಮಿ ಹಾಗೂ ಕರಿ ನಾಯಕ ಅವರು ಇದೇ ಸಂದರ್ಭದಲ್ಲಿ ಚಕ್ರಕ್ಕೆ ಸುಲುಕಿದರು. ಸ್ವಾಮಿ ಅವರಿಗೆ ತೊಡೆ ಭಾಗಕ್ಕೆ ತೀವ್ರವಾಗಿ ಏಟಾಯಿತು.

ತಕ್ಷಣವೇ ಮೂವರನ್ನು ಮೇಲಕ್ಕೆ ಎಳೆದು, ಆಂಬುಲೆನ್ಸ್‌ ಮೂಲಕ ಪಟ್ಟಣದ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಅಷ್ಟು ಹೊತ್ತಿಗಾಗಲೇ ಸರ್ಪಭೂಷಣ್‌ ಅವರು ಮೃತಪಟ್ಟಿದ್ದರು. ಸ್ವಾಮಿ ಹಾಗೂ ಕರಿನಾಯಕ ಅವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮೈಸೂರಿಗೆ ಕಳುಹಿಸಲಾಯಿತು. ಸ್ವಾಮಿ ಅವರು ಚಿಕಿತ್ಸೆಗೆ ಸ್ಪ‍ಂದಿಸದೆ ರಾತ್ರಿ ನಿಧನರಾದರು.

ಪರಿಹಾರಕ್ಕೆ ಆಗ್ರಹ: ಮೃತ ಪಟ್ಟ ಸರ್ಪಭೂಷಣ್‌ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದರು.

‘ತಾಲ್ಲೂಕು ಆಡಳಿತ ಮತ್ತು ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಇರುವುದು ಈ ದುರ್ಘಟನೆಗೆ ಕಾರಣ. ಗಾಯಗೊಂಡವರಿಗೆ ₹10 ಲಕ್ಷ, ಮೃತಪಟ್ಟವರಿಗೆ ₹20 ಲಕ್ಷ ಪರಿಹಾರ ನೀಡಬೇಕು’ ಎಂದುಮುಖಂಡ ರೈತ ಸಂಘದ ಮುಖಂಡ ಕಡಬೂರು ಮಂಜುನಾಥ್ ಅವರು ಆಗ್ರಹಿಸಿದರು.

ಧಾರ್ಮಿಕ ಕಾರ್ಯಕ್ರಮಗಳು

ರಥೋತ್ಸವ ಅಂಗವಾಗಿ ಪಾರ್ವತಾಂಬ ಮತ್ತು ಸೋಮೇಶ್ವರ ದೇವಾಲಯವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಮೇ 13ರಿಂದಲೇ ದೇವಾಲಯದಲ್ಲಿ ಆಗಮಿಕರಾದ ನಾಗರಾಜ ದೀಕ್ಷಿತ್ ಹಾಗೂ ಪ್ರಧಾನ ಅರ್ಚಕರಾದ ಸತೀಶ್ ನೇತೃತ್ವದಲ್ಲಿ ದೇವತಾಶಾಸ್ತ್ರ ಮತ್ತು ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ಭಾನುವಾರ ಬೆಳಿಗ್ಗೆ ಶ್ರೀಪಾರ್ವತಾಂಭ ಹಾಗೂ ಸೋಮೇಶ್ವರಸ್ವಾಮಿ ಮೂಲ ವಿಗ್ರಹಗಳಿಗೆ ಕ್ಷೀರ, ಮೊಸರು, ಎಳನೀರು ಸೇರಿದಂತೆ ವಿವಿಧ ಅಭಿಷೇಕ ಮಾಡಲಾಯಿತು.

ತಾಲ್ಲೂಕು ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಪಾರ್ವತಾಂಬ ಸಮೇತ ಸೋಮೇಶ್ವರ ದೇವರ ವಿಗ್ರಹವನ್ನು ಅಡ್ಡಪಲ್ಲಕ್ಕಿಯಲ್ಲಿಟ್ಟು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ, ಪ್ರಜೆ ಸಲ್ಲಿಸಿದ ನಂತರ ಮಂಗಳವಾದ್ಯದೊಂದಿಗೆ ದೇವಾಲಯದ ಪಶ್ಚಿಮ ಪಾಶ್ರ್ವದಲ್ಲಿ ಧ್ವಜಪತಾಕೆಗಳಿಂದ ಅಲಂಕೃತಗೊಂಡಿದ್ದ ರಥೋತ್ಸವದಲ್ಲಿ ಇರಿಸಲಾಯಿತು. ಸುಮಾರು 11.40 ರಿಂದ 12.15 ರ ಒಳಗಿನ ಶುಭಲಗ್ನದಲ್ಲಿ ಅರ್ಚಕರು ಮಹಾಮಂಗಳಾರತಿ ನೆರವೇರಿಸಿದರು.

ಶಾಸಕ ಸಿ.ಎಸ್.ನಿರಂಜನ್‍ಕುಮಾರ್ ಮತ್ತು ಕಾಂಗ್ರೆಸ್ ಯುವ ಮುಖಂಡ ಎಚ್.ಎಂ.ಗಣೇಶ್‌ ಪ್ರಸಾದ್‌ ಸೇರಿದಂತೆ ಹಲವು ಮುಖಂಡರು ರಥಕ್ಕೆ ಪೂಜೆ ಸಲ್ಲಿಸಿದರು.

ದೇವರ ಭಜನೆ: ಪಟ್ಟಣದ ವಿಪ್ರ ಮಹಿಳಾ ಬಳಗ ಹಾಗೂ ಶಾರದ ಸತ್ಸಂಗ ಸಮಾಜ ವತಿಯಿಂದ ಪಾರ್ವತಾಂಬ ದೇವರ ಹೆಸರಿನಲ್ಲಿ ಭಕ್ತಿಗೀತೆ ಹಾಗೂ ದೇವರ ನಾಮ ಭಜನೆ ಹಮ್ಮಿಕೊಳ್ಳಲಾಗಿತ್ತು.

––

ರಥ ಎಳೆಯುವ ಸಂದರ್ಭದಲ್ಲಿ ಕುಡಿದಿದ್ದ ವ್ಯಕ್ತಿ ಮುಗ್ಗರಿಸಿ ಬೀಳುತ್ತಿದ್ದಾಗ ಅವನನ್ನು ರಕ್ಷಿಸುವ ಭರದಲ್ಲಿ ಸರ್ಪಭೂಷಣ್‌ ಚಕ್ರಕ್ಕೆ ಸಿಲುಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ
- ಸಿ.ಜೆ.ರವಿಶಂಕರ್, ತಹಶಿಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT