ಮಂಗಳವಾರ, ಜುಲೈ 27, 2021
21 °C
ಪದವಿ ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್‌ ಕೊಠಡಿ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ವಿತರಣೆ

ಗ್ರಾಮೀಣ ವಿದ್ಯಾರ್ಥಿಗಳಿಗೂ ಡಿಜಿಟಲ್‌ ಶಿಕ್ಷಣ ಸಿಗಲಿ: ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬುಧವಾರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸ್ಮಾರ್ಟ್‌ಕ್ಲಾಸ್‌ ಕೊಠಡಿಗಳನ್ನು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಅವರು ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ವಿತರಿಸಿದರು. 

ಎರಡೂ ಕಾರ್ಯಕ್ರಮಗಳಲ್ಲಿ ಮಾತನಾಡಿದ ಅವರು, ‘ಇಂದಿನ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ತರಗತಿಗಳು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಇದರ ಸೌಲಭ್ಯ ದೊರಕಬೇಕು’ ಎಂದು ಪ್ರತಿಪಾದಿಸಿದರು. 

‘ಶಿಕ್ಷಣ ಎಷ್ಟೇ ಡಿಜಿಟಲೀಕರಣವಾದರು ಬೋಧಕರು ತರಗತಿಯಲ್ಲಿ ನೇರವಾಗಿ ನೀಡುವ ಶಿಕ್ಷಣ ಗುಣತ್ಮಾಕವಾಗಿರುತ್ತದೆ. ಕಲಿಕೆಯು ಪ್ರಯೋಗ ಶಾಲೆಯಲ್ಲೇ ಆಗಬೇಕಿದೆ. ಒಂದೂವರೆ ವರ್ಷದಿಂದ ಕೋವಿಡ್‌ನಿಂದ ಶಿಕ್ಷಣ ಕ್ಷೇತ್ರದ ಮೇಲೆ ಬಹಳ ಪರಿಣಾಮ ಉಂಟಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್ ಮೂಲಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸರ್ಕಾರ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ನೀಡುತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉನ್ನತ ವ್ಯಾಸಂಗಕ್ಕೆ ಮುಂದಾಗಬೇಕು’ ಎಂದರು.

ರಾಜ್ಯವೇ ಮಾದರಿ: ‘ಉನ್ನತ ಶಿಕ್ಷಣದಲ್ಲಿ ಕಲಿಕಾ ನಿರ್ವಹಣಾ ಸಾಮರ್ಥ್ಯ ವಿಧಾನವನ್ನು ಅಳವಡಿಸಿಕೊಂಡು ಇಂತಹ ಅನಿವಾರ್ಯ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಮರ್ಪಕವಾಗಿ ಸಿಗಬೇಕು ಎನ್ನುವ ದೃಷ್ಟಿಯಲ್ಲಿ ತಂತ್ರಾಂಶ ಅಧರಿತ ಕಾರ್ಯಕ್ರಮವನ್ನು ಕಾಲೇಜು ಶಿಕ್ಷಣ ಇಲಾಖೆ ರೂಪಿಸಿದೆ. ಆನ್‌ಲೈನ್ ಮುಖಾಂತರ ಶಿಕ್ಷಣ ನೀಡುವುದರ ಮೂಲಕ ಕರ್ನಾಟಕ ಇತರ ರಾಜ್ಯಗಳಿಗೆ ಮಾದರಿಯಾಗಿದೆ’ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಚ್‌.ಎಸ್‌.ಪ್ರೇಮಲತಾ ಅವರು ಮಾತನಾಡಿ, ‘ಕೋವಿಡ್ ಕಾರಣದಿಂದ ಶಿಕ್ಷಣದಲ್ಲಿ ಡಿಜಟಲ್ ಕಲಿಕಾ ಯೋಜನೆಯು ವಿದ್ಯಾರ್ಥಿಗಳಿಗೆ ಸಹಾಯಕಾರಿಯಾಗಿದೆ. ಪ್ರಥಮ ವರ್ಷದ ಪದವಿ ಕಾಲೇಜಿನ 298 ವಿದ್ಯಾರ್ಥಿಗಳ ಪೈಕಿ ಎಂಟು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ಲೆಟ್  ನೀಡಲಾಗಿದೆ. ಉಳಿದ ವಿದ್ಯಾರ್ಥಿಗಳಿಗೂ ವಿತರಿಸಲಾಗುವುದು. ಇ-ಕಲಿಕಾ ಮೂಲಕ ವ್ಯಾಸಂಗ ಮಾಡಿ ಕಲಿಯೋಣ ಜೊತೆಗೆ ಬೆಳೆಯೋಣ ಎಂಬ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಉನ್ನತ್ತ ವ್ಯಾಸಂಗದತ್ತ ವಿದ್ಯಾರ್ಥಿಗಳು ಹೆಚ್ಚು ಗಮನವಹಿಸಬೇಕು’ ಎಂದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಂ.ಆರ್.ಸುಮತಿ, ಮಾಹಿತಿ ಮತ್ತು ತಂತ್ರಜ್ಞಾನ ಸಂಯೋಜಕಿ ಪಾರ್ವತಿ, ಆಂತರಿಕ ಗುಣಮಟ್ಟದ ಭರವಸೆ ಕೋಶ ಸಂಯೋಜಕ ಡಾ. ಬಿ.ಆರ್.ಜಯಣ್ಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತರಿಕ ಗುಣಮಟ್ಟದ ಭರವಸೆ ಕೋಶ ಸಂಯೋಜಕ ಡಾ. ಜಯಕುಮಾರ್, ಮಾಹಿತಿ ತಂತ್ರಜ್ಞಾನ ಸಂಯೋಜಕ ಪಿ.ಎಸ್.ಗುರುಪ್ರಸಾದ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು