ಶನಿವಾರ, ಮೇ 28, 2022
24 °C

ಬಾಲಕಿಗೆ ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ: ಯುವಕರಿಬ್ಬರಿಗೆ 22 ದಿನಗಳ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಪ್ರೀತಿಸದಿದ್ದರೆ ಮನೆಯವರ ಪೈಕಿ ಯಾರನ್ನಾದರೂ  ಕೊಲೆ ಮಾಡುವುದಾಗಿ ಬಾಲಕಿಯೊಬ್ಬಳಿಗೆ ಬೆದರಿಕೆ ಹಾಕಿದ್ದ ಇಬ್ಬರು ಯುವಕರಿಗೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯವು 22 ದಿನಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 

ತಾಲ್ಲೂಕಿನ ಉಡಿಗಾಲದ ಚೇತನ್‌ (23) ಹಾಗೂ ಗುರುಪ್ರಸಾದ್‌ (25) ಶಿಕ್ಷೆಗೆ ಗುರಿಯಾದವರು. 2019ರ ಮೇ 8ರಂದು ಘಟನೆ ನಡೆದಿತ್ತು. 

ತನ್ನನ್ನು ಪ್ರೀತಿಸುವಂತೆ ಚೇತನ್‌, 16 ವರ್ಷದ ಬಾಲಕಿಯನ್ನು ಪೀಡಿಸುತ್ತಿದ್ದ. ಅದಕ್ಕೆ ಆಕೆ ಒಪ್ಪಿರಲಿಲ್ಲ. 2019ರ ಮೇ 8ರಂದು ಬಾಲಕಿಯು ತನ್ನ ಅಜ್ಜಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಗುರುಪ್ರಸಾದ್‌ ಆಕೆಗೆ ಕರೆ ಮಾಡಿ, ’ನೀನು ಚೇತನ್‌ನನ್ನು ಪ್ರೀತಿಸಬೇಕು. ಇಲ್ಲದಿದ್ದರೆ ನಿನ್ನ ಅಣ್ಣನನ್ನು ಕೊಲೆ ಮಾಡುತ್ತೇವೆ. ತಕ್ಷಣವೇ ಬಾ‘ ಎಂದು ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ್ದ ಬಾಲಕಿ ತಕ್ಷಣ ವಾಪಸ್‌ ಬಂದು, ಇಬ್ಬರನ್ನೂ ಭೇಟಿ ಮಾಡಿದ್ದಳು. ಈ ಸಂದರ್ಭದಲ್ಲಿ ಚೇತನ್‌ ಆಕೆಯನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಸುತ್ತಾಡಿಸಿ, ’ನೀನು ನನ್ನನ್ನೇ ಮದುವೆಯಾಗಬೇಕು. ಇಲ್ಲದಿದ್ದರೆ ನಿಮ್ಮ ಮನೆಯವರ ಪೈಕಿ ಯಾರನ್ನಾದರೂ ಕೊಲೆ ಮಾಡಲು ತಯಾರಿದ್ದೇನೆ‘ ಎಂದು ಬೆದರಿಕೆ ಹಾಕಿದ್ದಲ್ಲದೇ, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ.

ಈ ಸಂಬಂಧ ಬಾಲಕಿಯು ಇಬ್ಬರ ವಿರುದ್ಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಕೊಲೆ ಬೆದರಿಕೆ ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಚೇತನ್‌ ಹಾಗೂ ಗುರುಪ್ರಸಾದ್‌ ಅವರ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಪ‍ಟ್ಟಿ ಸಲ್ಲಿಸಿದ್ದರು. 

ಇಬ್ಬರ ಮೇಲಿನ ಆರೋಪ ಸಾಬೀತಾಗಿರುವುದರಿಂದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಅವರು ಇಬ್ಬರಿಗೂ 22 ದಿನಗಳ ಜೈಲು ಶಿಕ್ಷೆ ಹಾಗೂ ತಲಾ ₹10 ಸಾವಿರ ದಂಡ ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.  ದಂಡ ಪಾವತಿಸದಿದ್ದರೆ ಮತ್ತೆ ಒಂದು ತಿಂಗಳ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ. 

ಅಪರಾಧಿಗಳು ಪಾವತಿಸುವ ತಲಾ ₹10 ಸಾವಿರ ದಂಡದ ಜೊತೆಗೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ₹20 ಸಾವಿರ ಹಣವನ್ನು ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಬೇಕು ಎಂದೂ ಅವರು ಆದೇಶಿಸಿದ್ದಾರೆ. 

ಪ್ರಾಸಿಕೂಷನ್‌ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ.ಯೋಗೇಶ್‌ ಅವರು ವಾದ ಮಂಡಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು