ಭಾನುವಾರ, ಜೂನ್ 13, 2021
25 °C
ಲಾಕ್‌ಡೌನ್‌ ಉಲ್ಲಂಘಿಸುವವರಿಗೆ ಗ್ರಾಮಸ್ಥರಿಂದಲೇ ದಂಡ!

ಕೋವಿಡ್: ಗ್ರಾಮಗಳಲ್ಲಿ ಸ್ವಯಂ ನಿರ್ಬಂಧ, ಉಲ್ಲಂಘಿಸುವವರಿಗೆ ಗ್ರಾಮಸ್ಥರಿಂದಲೇ ದಂಡ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವಂತೆ ಗ್ರಾಮಸ್ಥರು ಸ್ವಯಂಪ್ರೇರಿತ ನಿರ್ಬಂಧಗಳನ್ನು ಜಾರಿಗೊಳಿಸಿದ್ದಾರೆ. ಈ ಮೂಲಕ ಸರ್ಕಾರದ ಲಾಕ್‌ಡೌನ್ ಯಶಸ್ವಿಯಾಗಿಸಲು ಸಹಕಾರ ನೀಡಿದ್ದಾರೆ.

ಮುಖ್ಯವಾಗಿ ಇಲ್ಲಿನ ಯಳಂದೂರು ತಾಲ್ಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಗ್ರಾಮಸ್ಥರು ದೂರದ ಊರುಗಳಿಗೆ ಹೋಗಬಾರದು ಎಂಬ ನಿಯಮವನ್ನು ಮುಖಂಡರು ಜಾರಿಗೊಳಿಸಿದ್ದಾರೆ. ಇಲ್ಲಿ ಸುಮಾರು 200 ಮಂದಿ ಮಹಿಳೆಯರು, 300ರಿಂದ 400 ಮಂದಿ ಪುರುಷರು ದೂರದ ಊರುಗಳಿಗೆ ಕೂಲಿ ಕೆಲಸಕ್ಕಾಗಿ ಹೋಗುತ್ತಿದ್ದರು. ಇವರು ಹೋಗುತ್ತಿದ್ದ ಹಳ್ಳಿಗಳ ಕಡೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ್ದರಿಂದ ಎಚ್ಚೆತ್ತ ಮುಖಂಡರು ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಊರಿನ ಆಸುಪಾಸಿನಲ್ಲೇ ಕೂಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಸಮೀಪದ ಅಂಬಳೆ, ಗೂಳಿಪುರ ಸೇರಿದಂತೆ ಇತರೆ ಗ್ರಾಮಗಳ ಜನರು ಈ ಊರಿನ ಮೂಲಕವೇ ವಾಹನಗಳಲ್ಲಿ ಸಂಚರಿಸುತ್ತಿದ್ದರು. ಇದರಿಂದ ಗ್ರಾಮದಲ್ಲಿ ವಾಹನ ಸಂಚಾರಕ್ಕೆ ಕಡಿವಾಣ ಬಿದ್ದಿರಲಿಲ್ಲ. ಹೀಗಾಗಿ, ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೇ ಗ್ರಾಮಸ್ಥರು ಬಂದ್ ಮಾಡಿದ್ದಾರೆ. ಪರ್ಯಾಯ ರಸ್ತೆಯಲ್ಲಿ ಸಂಚರಿಸುವಂತೆ ಇತರೆ ಗ್ರಾಮಗಳ ಜನರಿಗೆ ಹೇಳಿದ್ದಾರೆ.

ಬೆಂಗಳೂರು ಮತ್ತು ಮೈಸೂರಿನಿಂದ ಗ್ರಾಮಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದೂ ನಿಯಮ ರೂಪಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ ಗ್ರಾಮದ ಸ್ವಾಮಿ ಅವರನ್ನು ಸಂಪರ್ಕಿಸಿದಾಗ ಅವರು ಸರ್ಕಾರ ರೂಪಿಸಿದ ನಿಯಮಗಳನ್ನು ಜನರು ಮುರಿಯಬಾರದು, ಕೊರೊನಾ ಸೋಂಕು ಬೇಗ ನಿಯಂತ್ರಣಕ್ಕೆ ಬರಬೇಕು ಎಂಬ ಉದ್ದೇಶದಿಂದ ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಚಾಮರಾಜನಗರ ತಾಲ್ಲೂಕಿನ ನಾಗೊಳ್ಳಿ ಗ್ರಾಮದಲ್ಲೂ ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸುಮಾರು 8 ಸಾವಿರ ಮಂದಿ ಇರುವ ಈ ಊರಿನಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದಾಗ್ಯೂ ಕೆಲವರು ವಾಹನಗಳಲ್ಲಿ ಸಂಚರಿಸುತ್ತಿದ್ದರು. ಇದನ್ನು ತಡೆಯಲು ನಿರ್ಬಂಧ ವಿಧಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ ಗ್ರಾಮದ ಕೆ.ನದಿಖಾನ್‌ ಅವರನ್ನು ಸಂಪರ್ಕಿಸಿದಾಗ ಅವರು, ‘ಸರ್ಕಾರದ ಆದೇಶವನ್ನು ಸ್ವಯಂಪ್ರೇರಿತರಾಗಿ ಜನರು ಜಾರಿಗೆ ತಂದಿದ್ದಾರೆ. ಸರ್ಕಾರಕ್ಕೆ ಸಹಕಾರ ನೀಡುವ ಮೂಲಕ ಕೊರೊನಾ ಸೋಂಕನ್ನು ನಿಯಂತ್ರಿಸಿ, ಗ್ರಾಮ ಮಾದರಿಯಾಗಬೇಕು. ಪ್ರತಿ ಗ್ರಾಮವೂ  ಹೀಗೆ ಮಾಡಬೇಕು’ ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು