ಭಾನುವಾರ, ಜೂನ್ 13, 2021
28 °C

ನೆರವಾಗದ ಗ್ರಾಮಸ್ಥರು: ಬೈಕ್‌ನಲ್ಲಿ ಶವ ಸಾಗಿಸಿ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಇಲ್ಲಿನ ಕೊಳ್ಳೇಗಾಲ ತಾಲ್ಲೂಕಿನ ಟಗರಪುರ ಗ್ರಾಮದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಮಹದೇವಯ್ಯ (65) ಅವರ ಅಂತ್ಯಕ್ರಿಯೆಗೆ ಗ್ರಾಮಸ್ಥರು ನೆರವಾಗಲಿಲ್ಲ. ಮೃತಪಟ್ಟ 2 ದಿನಗಳ ನಂತರ ಪಿಎಫ್‌ಐ ಸಂಘಟನೆಯ ಸ್ವಯಂಸೇವಕರು ಇವರ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಯತ್ನಿಸಿದರಾದರೂ ಪಕ್ಕದ ಹಳ್ಳಿಯ ಗ್ರಾಮಸ್ಥರು ಅವಕಾಶ ನೀಡಲಿಲ್ಲ. ಕೊನೆಗೆ ಪೊಲೀಸರ ಸಹಕಾರದಿಂದ ಸರ್ಕಾರಿ ಜಾಗದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮಹದೇವಯ್ಯ ಅವರಿಗೆ ಊರಿನಲ್ಲಿ ಸಂಬಂಧಿಕರು ಇರಲಿಲ್ಲ. ಜ್ವರದಿಂದ ಇವರು ಮನೆಯಲ್ಲೇ ಮೃತಪಟ್ಟರು ಎಂಬ ಸುದ್ದಿ ಊರಿನಲ್ಲಿ ಹರಡಿತು. ಕೊರೊನಾ ಭೀತಿಯಿಂದ ಯಾರೂ ಮನೆಯತ್ತ ಸುಳಿಯಲಿಲ್ಲ. ಇವರ ತಮ್ಮನ ಮಗ ಲಕ್ಷ್ಮೀಕಾಂತ್ ಅವರು ಬೆಂಗಳೂರಿನಿಂದ ಬಂದರಾದರೂ, ಗ್ರಾಮಸ್ಥರು ಅಂತ್ಯಸಂಸ್ಕಾರ ನೆರವೇರಿಸಲು ನೆರವಾಗಲಿಲ್ಲ. ಈ ವಿಷಯವನ್ನು ಪಿಎಫ್‌ಐ ಕಾರ್ಯಕರ್ತರ ಗಮನಕ್ಕೆ ತರಲಾಯಿತು.

ಸ್ಥಳಕ್ಕೆ ಬಂದ ಪಿಎಫ್‌ಐ ಕಾರ್ಯಕರ್ತರು ಇರುವೆಗಳು ಮುತ್ತಿಕೊಂಡಿದ್ದ ಮಹದೇವಯ್ಯ ಮೃತದೇಹವನ್ನು ಅವರ ಜಮೀನಿಗೆ ಬೈಕಿನಲ್ಲಿ ಕೊಂಡೋಯ್ದರು. ಈ ವೇಳೆ ಸಹಾಯಕ್ಕೆ ಕೋರಿದರೂ ಗ್ರಾಮಸ್ಥರು ಸ್ಪಂದಿಸಲಿಲ್ಲ. ಜಮೀನಿನ ಪಕ್ಕದಲ್ಲೇ ಇರುವ ಆಲನಹಳ್ಳಿ ಗ್ರಾಮಸ್ಥರೂ ಅಂತ್ಯಸಂಸ್ಕಾರ ನೆರವೇರಿಸಲು ಒಪ್ಪಲಿಲ್ಲ. ಪೊಲೀಸರು ಮಧ್ಯಪ್ರವೇಶಿಸಿ, ಮೃತದೇಹದ ಅಂತ್ಯಸಂಸ್ಕಾರವನ್ನು ಸರ್ಕಾರಿ ಜಾಗದಲ್ಲಿ ನೆರವೇರಿಸಲು ಅವಕಾಶ ಮಾಡಿಕೊಟ್ಟರು ಎಂದು ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಚಾಮರಾಜನಗರ ಜಿಲ್ಲಾ ಘಟಕದ ಅಧ್ಯಕ್ಷ ಕಫಿಲ್‌ ಅಹಮ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಅಶೋಕ್‌ ಅವರನ್ನು ಸಂಪರ್ಕಿಸಿದಾಗ, ಅವರು, ‘ಕೋವಿಡ್‌ ಭಯದಿಂದ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ನೆರವಾಗಲಿಲ್ಲ. ಮೃತವ್ಯಕ್ತಿಯ ಜಮೀನಿಗೆ ಹೋಗಲು ಪಕ್ಕದ ಗ್ರಾಮದ ಮೂಲಕ ಹಾದು ಹೋಗಬೇಕಿತ್ತು. ಕೋವಿಡ್‌ ಬರಬಹುದು ಎಂಬ ಭಯದಿಂದ ಅವರೂ ಅವಕಾಶ ಕೊಡಲಿಲ್ಲ. ಕೊನೆಗೆ ಸರ್ಕಾರಿ ಜಾಗದಲ್ಲಿ ಸ್ವಯಂಸೇವಕರ ನೆರವಿನಿಂದ ಅಂತ್ಯಸಂಸ್ಕಾರ ನೆರವೇರಿಸಲಾಯಿತು’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು