ಕೊಳ್ಳೇಗಾಲ: ಇಲ್ಲಿನ ಭೀಮನಗರದ 3ನೇ ವಾರ್ಡಿನ ಬಡಾವಣೆಯಲ್ಲಿ ಇ–ಸ್ವತ್ತಿನ ಸಮಸ್ಯೆ ಜನರನ್ನು ಕಾಡುತ್ತಿದೆ. ಸ್ವಚ್ಛತೆ ಹಾಗೂ ಮೂಲ ಸೌಕರ್ಯಗಳು ಕೊರತೆಗಳೂ ಇವೆ.
ವಾರ್ಡ್‌ನಲ್ಲಿ 600ಕ್ಕೂ ಹೆಚ್ಚು ಕುಟುಂಬಗಳಿದ್ದು 2,400ರಷ್ಟು ಜನರಿದ್ದಾರೆ. ಇಡೀ ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿಯವರೇ ಇದ್ದಾರೆ.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಕಾರಣಕ್ಕೆ ವಾರ್ಡ್‌ನಲ್ಲಿ ರಸ್ತೆಗಳು ಬಹುತೇಕ ರಸ್ತೆಗಳು ಕಾಂಕ್ರೀಟ್ ಕಂಡಿವೆ. ಇನ್ನೂ ಕೆಲವು ಕಡೆಗಳಲ್ಲಿ ರಸ್ತೆ ಇಲ್ಲದೆ ನಿವಾಸಿಗಳು ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಬಡಾವಣೆಯಲ್ಲಿ ಎಲ್ಲ ಕಡೆಗಳಲ್ಲಿ ವ್ಯವಸ್ಥಿತ ಚರಂಡಿಗಳಿಲ್ಲ.
ಇಲ್ಲಿ ಕೆಲವು ಭಾಗದಲ್ಲಿ ರಸ್ತೆಗಳು ಉತ್ತಮವಾಗಿದ್ದರೆ ಇನ್ನು ಕೆಲವು ಕಡೆ ರಸ್ತೆಗಳು ಇಲ್ಲದೆ ನಿವಾಸಿಗಳು ಕಷ್ಟಪಡುತ್ತಿದ್ದಾರೆ. ಇದರ ಜೊತೆಗೆ ಕೆಲ ಭಾಗದಲ್ಲಿ ಚರಂಡಿಗಳು ಇದ್ದರೂ ಪ್ರಯೋಜನಕ್ಕೆ ಇಲ್ಲದಂತಾಗಿದೆ. ಕಸದ ಸಮಸ್ಯೆಯೂ ತೀವ್ರವಾಗಿದೆ. ಬೀದಿ ದೀಪ ಸೌಲಭ್ಯವೂ ಸಮರ್ಪಕವಾಗಿಲ್ಲ.
ಸ್ವಚ್ಛವಾಗದ ಚರಂಡಿ: ಬಡಾವಣೆಯಲ್ಲಿ ಚರಂಡಿಗಳು ಉತ್ತಮವಾಗಿದೆ. ಆದರೆ, ಅವು ಸ್ವಚ್ಛವಾಗಿಲ್ಲ. ಕಳೆಗಿಡಗಳು ಬೆಳೆದು ನಿಂತಿವೆ. ಇದರಿಂದ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ. ಬಚ್ಚಲು ಹುಳುಗಳು ಚರಂಡಿಯಲೆಲ್ಲ ಹರಿದಾಡುತ್ತಿದೆ.
ಕಸ ಎಸೆಯುವ ಜನ: ಕಸ ಸಂಗ್ರಹವೂ ನಿಯಮಿತವಾಗಿ ಆಗುತ್ತಿಲ್ಲ. ಅಲ್ಲಲ್ಲಿ ಕಸದ ರಾಶಿ ಕಂಡು ಬರುತ್ತಿರುತ್ತದೆ. ಸಿಬ್ಬಂದಿ ಕಸ ತೆರವು ಗೊಳಿಸಿದರೂ ಮತ್ತೆ ಸ್ಥಳೀಯರು ಕಸ ಎಸೆಯುತ್ತಿರುತ್ತಾರೆ. ಬಡಾವಣೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ ಇದರ ಮುಂದೆಯೇ ಬಡಾವಣೆಯ ನಿವಾಸಿಗಳು ಕಸ ಹಾಕುತ್ತಿದ್ದಾರೆ ಇನ್ನು ಕೆಲವು ಕಡೆ ಕಸಗಳನ್ನು ಚೀಲಗಳಲ್ಲಿ ಹಾಕಿಕೊಂಡು ಬಂದು ಬಡಾವಣೆಯ ಮುಖ್ಯ ರಸ್ತೆಗಳಿಗೆ ಸುರಿಯುತ್ತಿದ್ದಾರೆ ಇದರಿಂದ ಬಡಾವಣೆಯ ಸ್ವಾಸ್ಥ್ಯ ಹಾಳಾಗುತ್ತಿದೆ.
‘ಬೀದಿ ದೀಪಗಳು ಕೆಲವು ಕಡೆ ಕೆಟ್ಟು ಹೋಗಿವೆ. ನಗರಸಭೆ ಸರಿಪಡಿಸಲು ಮುಂದಾಗಿಲ್ಲ. ಇಂದು ದೂರು ನೀಡಿದರೆ ಒಂದು ವಾರದ ನಂತರ ಬಂದು ಬೀದಿದೀಪಗಳನ್ನು ಅಳವಡಿಸುತ್ತಿದ್ದಾರೆ. ಬಡಾವಣೆ ನಿವಾಸಿಗಳು ಕತ್ತಲೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದೆ’ ಎಂದು ಬಡಾವಣೆಯ ನಿವಾಸಿ ರಾಜಮ್ಮ ಹೇಳಿದರು.
ಹದಗೆಟ್ಟ ರಸ್ತೆ: ಬಡಾವಣೆಯಲ್ಲಿ ಎಲ್ಲ ರಸ್ತೆಗಳು ಉತ್ತಮವಾಗಿವೆ. ಆದರೆ ಭೀಮ ನಗರದ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದೆ.
‘ಹಳ್ಳಕೊಳ್ಳಗಳಿಂದ ಕೂಡಿದ ರಸ್ತೆ, ಮಳೆ ಬಂದರಂತೂ ಕೆಸರುಗದ್ದೆಯಾಗಿ ಮಾರ್ಪಡುತ್ತದೆ. ಇದರಿಂದ ಬಡಾವಣೆಯ ನಿವಾಸಿಗಳು, ಶಾಲಾ, ಕಾಲೇಜು ಮಕ್ಕಳು ಹದಗೆಟ್ಟ ರಸ್ತೆಯಲ್ಲೇ ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಈ ಮುಖ್ಯರಸ್ತೆಯನ್ನು ಕೂಡಲೇ ಸರಿಪಡಿಸಬೇಕು’ ಎಂದು ಬಡಾವಣೆಯ ನಿವಾಸಿ ಶಶಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಇ– ಸ್ವತ್ತಿನ ಸಮಸ್ಯೆ ಇದೆ. ನಮ್ಮ ಮನೆಗಳಿಗೆ ದಾಖಲೆಗಳು ಇಲ್ಲ ನಗರಸಭೆ ಇ– ಸ್ವತ್ತು ಮಾಡಿಕೊಟ್ಟರೆ ಬ್ಯಾಂಕಿನಲ್ಲಿ ಸಾಲ ಪಡೆದು ಮನೆ ಕಟ್ಟಿಕೊಳ್ಳುತ್ತೇವೆ.- ರಂಗರಾಜು ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.