ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು | 9 ತಿಂಗಳಿಂದ ಬೆಳಕಿಲ್ಲ: ನೀರಿಗಾಗಿ ಪರದಾಟ

ಪುರಾಣಿಪೋಡು: ಗಿರಿಜನರ ಹಾಡಿಯಲ್ಲಿ ವಿದ್ಯುತ್ ಮತ್ತು ಶುದ್ಧ ಕುಡಿಯುವ ನೀರಿಗೆ ಬರ
Published 30 ಜನವರಿ 2024, 14:35 IST
Last Updated 30 ಜನವರಿ 2024, 14:35 IST
ಅಕ್ಷರ ಗಾತ್ರ

ಯಳಂದೂರು: ರಾತ್ರಿಯಾದರೆ ವನ್ಯ ಜೀವಿಗಳ ಭಯ. ಕತ್ತಲೆಯಲ್ಲಿ ಕಾಲ ನೂಕುತ್ತಿರುವ ನಿವಾಸಿಗಳು, ನೀರಿಗಾಗಿ ಮಹಿಳೆಯರು ಕಾಡು-ಮೇಡು ಏರಿಳಿಯಬೇಕಾದ ದುಃಸ್ಥಿತಿ, ಕಚ್ಚಾ ರಸ್ತೆಯಲ್ಲಿ ಮುಖ್ಯ ಹಾದಿ ತಲುಪಬೇಕಾದ ಪರಿಸ್ಥಿತಿ..

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಪುರಾಣಿಪೋಡಿನ ಗ್ರಾಮದಲ್ಲಿ ದಿನನಿತ್ಯ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳಿವು. 

ಪುರಾಣಿಪೋಡು ಸೋಲಿಗರ ಪುರಾತನ ನೆಲೆ. ಸಾವಿರಕ್ಕೂ ಹೆಚ್ಚಿನ ಜನರು ಇದ್ದಾರೆ. ಇಲ್ಲಿ ಹಲವು ಕೊಳವೆ ಬಾವಿ, ನೀರಿನ ತೊಂಬೆಗಳಿವೆ. ವಿದ್ಯುತ್ ಪೂರೈಕೆಗೆ ಸೋಲಾರ್ ಹಾಕಲಾಗಿದೆ. ಆದರೆ, ಇವು ಕೆಟ್ಟು ಹಲವು ತಿಂಗಳಾಗಿವೆ. ಇದರಿಂದ ಸ್ತ್ರೀಯರು ನೀರಿಗಾಗಿ ಅಲೆಯಬೇಕಿದೆ. ದೀಪಗಳು ಬೆಳಕು ಚೆಲ್ಲದೆ ಬಹು ದಿನಗಳಾಗಿದ್ದು, ಜನರು ಮುಸ್ಸಂಜೆಗೂ ಮೊದಲೇ ಮನೆ ಸೇರಬೇಕಾದ  ಅನಿವಾರ್ಯತೆ ಸೃಷ್ಟಿಯಾಗಿದೆ.

ಹಾಡಿಯ ಸುತ್ತ ಕಂದಕ ನಿರ್ಮಿಸಲಾಗಿದೆ. ಆದರೆ, ಆನೆ, ಕರಡಿಗಳು ಇಲ್ಲಿಂದಲೇ ಬರುತ್ತವೆ. ಈಚೆಗೆ ಬೆಳಗಿನ ವೇಳೆಯಲ್ಲಿ ಗ್ರಾಮಸ್ಥರ ಮೇಲೆ ಆನೆ ದಾಳಿ ಮಾಡಿದೆ. 9 ತಿಂಗಳ ಹಿಂದೆ ವನ್ಯ ಜೀವಿಗಳ ದಾಳಿಗೆ ಸೋಲಾರ್ ಘಟಕ ನೆಲಕ್ಕೆ ಉರುಳಿದೆ.  ಪರಿಣಾಮ, ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಗ್ರಾಮ ಕತ್ತಲೆಯಲ್ಲಿ ಮುಳುಗಿದೆ. ಯಂತ್ರಗಳು ಚಾಲು ಮಾಡಲಾಗದೆ ನೀರು ಪೂರೈಕೆ ಸ್ಥಗಿತಗೊಂಡಿದೆ. ಈ ಬಗ್ಗೆ ದೂರು ನೀಡಿದರೂ ಜನ ಪ್ರತಿನಿಧಿಗಳು ದುರಸ್ತಿಗೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

‘ಸೋಲಾರ್ ಬೇಲಿ ಮತ್ತು ಘಟಕ ಮುರಿದುಬಿದ್ದಿದೆ. ಕೊಳವೆ ಬಾವಿಗಳನ್ನು ಆನೆ ನಜ್ಜುಗುಜ್ಜು ಮಾಡಿದೆ. ಕೈ ಪಂಪು ಬಳಸಿ ನೀರು ಸಂಗ್ರಹಿಸಲು ಯುವತಿಯರು ಬಹುದೂರ ತೆರಳಬೇಕು. ಇದರಿಂದ ದೈನಂದಿನ ಕೆಲಸಗಳಿಗೆ ಹಿನ್ನಡೆಯಾಗಿದೆ ಎಂದು ಮಾದಮ್ಮ ಆರೋಪಿಸಿದರು.

‘ಹಾಡಿಯಲ್ಲಿ ಬೀದಿ ದೀಪಗಳು ಬೆಳಗುತ್ತಿಲ್ಲ. ರಾತ್ರಿ ವೇಳೆ ವನ್ಯ ಪ್ರಾಣಿಗಳ ಭೀತಿಯಿಂದ ಬೆಳೆ ರಕ್ಷಿಸಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ.  ಗುಣಮಟ್ಟದ ರಸ್ತೆ ಇಲ್ಲಿಲ್ಲ. ಹಾಡಿ ಅಭಿವೃದ್ಧಿ ಕಾಣದೆ ಬಣಗುಟ್ಟುತ್ತಿವೆ’ ಎಂದು ಕುಂಬನ ಮಾದೇಗೌಡ ಹಾಗೂ ಜಡೇಗೌಡ ಸಮಸ್ಯೆ ಬಿಚ್ಚಿಟ್ಟರು.   

ವನ್ಯಪ್ರಾಣಿಗಳ ದಾಳಿಯಿಂದ ಸೋಲಾರ್ ಘಟಕ ಹಾನಿಗೀಡಾಗಿದೆ
ವನ್ಯಪ್ರಾಣಿಗಳ ದಾಳಿಯಿಂದ ಸೋಲಾರ್ ಘಟಕ ಹಾನಿಗೀಡಾಗಿದೆ

‘ಸಮಸ್ಯೆ ಬಗೆಹರಿಸಲು ಕ್ರಮ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಳಿಗಿರಿರಂಗನಬೆಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಲಿತಾ ‘ಇಲ್ಲಿನ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಈಚೆಗೆ ಮಾಹಿತಿ ನೀಡಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಲು ಸೂಚಿಸಲಾಗಿದೆ. ಶೀಘ್ರದಲ್ಲಿ ಗ್ರಾಮಸ್ಥರ ಸಮಸ್ಯೆ ನಿವಾರಿಸಲಾಗುವುದು’ ಎಂದು ಹೇಳಿದರು.  ‘ಕೆಲವು ವಾರಗಳ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಪೋಡಿನಲ್ಲಿರುವ ಸಮಸ್ಯೆಗಳು ಗಮನಕ್ಕೆ ಬಂದಿಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT