ಬುಧವಾರ, ಜನವರಿ 22, 2020
24 °C
ಜಿಲ್ಲೆಯಲ್ಲಿ ಬನ್ನಿಸಾರಿಗೆ ಸರ್ಕಾರಿ ಶಾಲೆಯಲ್ಲಿ ನೂತನ ಯೋಜನೆ ಜಾರಿ

ಇಲ್ಲಿ ನಿತ್ಯ ರಿಂಗಣಿಸುತ್ತದೆ ‘ಬಾಯಾರಿಕೆ ಬೆಲ್‘

ನಾ,ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಮನುಕುಲಕ್ಕೆ ಜಲ ಜೀವನಾಧಾರ. ಕಲಿಯುವ ಮಕ್ಕಳ ಪಾಲಿಗೆ ಪರಿಶುದ್ಧ ನೀರಿನ ಸೇವನೆ ಹಿತಕರ. ಹಾಗಾಗಿ, ಶಾಲಾ ಸಮಯದಲ್ಲಿ ನೀರು ಕುಡಿಯುವುದನ್ನು ನೆನಪಿಸಲು ಕೇರಳ ಸರ್ಕಾರ ಅಲ್ಲಿನ ಶಾಲೆಗಳಲ್ಲಿ ‘ನೀರಿನ ಗಂಟೆ’ ಅಳವಡಿಸಿದೆ. 

ಇದೇ ಮಾದರಿಯಲ್ಲಿ ರಾಜ್ಯದಾದ್ಯಂತ ಶಾಲೆಗಳಲ್ಲಿ ಬೋಧಕರು ನೀರಿನ ಗಂಟೆ ಅಳವಡಿಸಲು ಮುಂದಾಗಿದ್ದಾರೆ. ಅಗರ ಹೋಬಳಿಯ ಬನ್ನಿಸಾರಿಗೆ ಗ್ರಾಮದ ಸರ್ಕಾರಿ ಶಾಲೆ ಈ ವ್ಯವಸ್ಥೆ ಅಳವಡಿಸಿಕೊಂಡಿದೆ. ಜಿಲ್ಲೆಯಲ್ಲಿ ಈ ನೀರಿನ ಗಂಟೆ ಅಳವಡಿಸಿದ ಮೊದಲ ಸರ್ಕಾರಿ ಶಾಲೆ ಇದು. 

‘ನಮ್ಮ ಶಾಲೆಯಲ್ಲಿ 100 ಮಕ್ಕಳು ಇದ್ದಾರೆ. ಊಟದ ಸಮಯದಲ್ಲಿ ಮಾತ್ರ ಇವರು ನೀರು ಕುಡಿಯುತ್ತಿದ್ದರು. ಈಗ ಪ್ರತಿದಿನ ಬೆಳಿಗ್ಗೆ 11, ಮಧ್ಯಾಹ್ನ 2.30 ಹಾಗೂ ಸಂಜೆ 4 ಗಂಟೆಗೆ ನೀರಿನ ಗಂಟೆ ಮೊಳಗಿಸಲಾಗುತ್ತದೆ. ಈ ಸಮಯದಲ್ಲಿ ಮಕ್ಕಳು ನೀರು ಕುಡಿಯುತ್ತಾರೆ. ಬೇಸಿಗೆಯಲ್ಲಿ 4 ಬಾರಿ ಗಂಟೆ ಬಾರಿಸಲಾಗುತ್ತದೆ’ ಎಂದು ಮುಖ್ಯಶಿಕ್ಷಕಿ ಜಯಮ್ಮ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಅವರು ಕೇರಳದಲ್ಲಿ ಜಾರಿ ಮಾಡಲಾಗಿದ್ದ ಪದ್ಧತಿಯನ್ನು ಕರ್ನಾಟಕದಲ್ಲೂ ಜಾರಿ ಮಾಡುವ ಚಿಂತನೆ ಇದೆ ಎಂದು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿ, ಶಾಲಾ ಸಿಬ್ಬಂದಿ ಚರ್ಚಿಸಿ ನೀರಿನ ಗಂಟೆ ಅಳವಡಿಸಿದ್ದಾರೆ. 

‘ಕಲುಷಿತ ನೀರಿನಿಂದ ವಾಂತಿ, ಭೇದಿ, ಕೆಮ್ಮು, ನೆಗಡಿ, ಗಂಟಲು ನೋವು, ಜ್ವರದಂತಹ ಸಾಮಾನ್ಯ ಕಾಯಿಲೆಗಳು ಬರಬಹುದು. ಹಾಗಾಗಿ, ಕುದಿಸಿ ಆರಿಸಿದ ನೀರನ್ನು ಮಕ್ಕಳು ತರುವಂತೆ ಪ್ರೇರೇಪಿಸಲಾಗಿದೆ. ಉತ್ತಮ ಆರೋಗ್ಯ ಮತ್ತು ನೀರನ್ನು ಸದಾ ಬಾಟಲಿಯಲ್ಲಿಟ್ಟು ಬೇಕೆಂದಾಗ ಸೇವಿಸುವ ಹವ್ಯಾಸ ಬೆಳೆಸುವುದರ ಉದ್ದೇಶವೂ ಇದರಲ್ಲಿ ಸೇರಿದೆ’ ಎಂದು ವಿಜ್ಞಾನ ಶಿಕ್ಷಕ ಮಹೇಶ್‌ ಹೇಳಿದರು. 

ನೆರವು: ಕೃಷಿಕರು ಮತ್ತು ಶ್ರಮಿಕರ ಮಕ್ಕಳೇ ಇಲ್ಲಿ ಹೆಚ್ಚು ಇದ್ದಾರೆ. 1ರಿಂದ 8ನೇ ತರಗತಿಯ 100 ಮಕ್ಕಳು ಕಲಿಯುತ್ತಿದ್ದಾರೆ. ಆಟದ ಮೈದಾನಕ್ಕೆ ₹ 45 ಸಾವಿರ ಮೊತ್ತವನ್ನು ಎಸ್‌ಡಿಎಂಸಿ ಮತ್ತು ಗ್ರಾಮಸ್ಥರು ಒದಗಿಸಿದ್ದಾರೆ. ಪ್ರವಾಸ, ಶಾಲಾ ವಾರ್ಷಿಕೋತ್ಸವ ಆಚರಣೆಗೆ ಪೋಷಕರ ಬೆಂಬಲವೂ ಇದೆ. ನೀರಿನ ಫಿಲ್ಟರ್, ಮೈಕ್‌ ಮತ್ತು ಪ್ರೊಜೆಕ್ಟರ್ ಒದಗಿಸಲು ದಾನಿಗಳು ಮುಂದೆ ಬಂದಿದ್ದಾರೆ. 

‘ರಾಜ್ಯದಲ್ಲಿ ನಾರಾಯಣಪುರ ಹಾಗೂ ಉಪ್ಪಿನಂಗಡಿಯ ಇಂದ್ರಪ್ರಸ್ಥ ಶಾಲೆಯಲ್ಲಿ ಈ ಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ. ಇದನ್ನು ಮನಗಂಡು ನಮ್ಮ ಮಕ್ಕಳಿಗೂ ಈ ಪದ್ಧತಿ ಪರಿಚಯಿಸಲು ಶಿಕ್ಷಣ ತಜ್ಞರಿಂದ ಮಾಹಿತಿ ಪಡೆದು ಕಾರ್ಯೋನ್ಮುಖರಾದೆವು’ ಎಂದು ಶಿಕ್ಷಕರಾದ ಸೌಮ್ಮ, ಉಷಾ, ವಿಜಯ ಮತ್ತು ಚಾಮರಾಜು ತಿಳಿಸಿದರು. 

ಕುಡಿಯುವುದಕ್ಕೂ ಮುನ್ನ ಹೀಗೆ ಮಾಡಿ
ನೀರನ್ನು ಆರೋಗ್ಯ ವರ್ಧಕವಾಗಿಸಲು 10 ನಿಮಿಷ ಕುದಿಸಬೇಕು. ಇದರಿಂದ ಬ್ಯಾಕ್ಟೀರಿಯಾ ಸೋಂಕಿನಿಂದ ರಕ್ಷಣೆ ಪಡೆಯಬಹುದು. ಚಳಿಗಾಲದಲ್ಲಿ ಶುಂಠಿ ಹಾಕಿ ಕುದಿಸುವುದರಿಂದ ಕಫ ಉಂಟಾಗುವುದಿಲ್ಲ. ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಆಹಾರ ಜೀರ್ಣವಾಗಲೂ ನೀರು ಸಹಕಾರಿ ಎಂದು ಹೇಳುತ್ತಾರೆ ವೈದ್ಯರು. 

‘ಗಂಟಲು ನೋವು, ಉಬ್ಬಸ ಇದ್ದಾಗ ಬಿಸಿ ನೀರು ಕುಡಿದರೆ ಒಳ್ಳೆಯದು. ಹೊರಗೆ ನೀರು ಕುಡಿಯಬೇಕಾದ ಸಂದರ್ಭ ಬಂದಾಗ ಆದಷ್ಟೂ ಎಚ್ಚರಿಕೆಯಿಂದ ಇರಬೇಕು. ಮಕ್ಕಳು ಪ್ರವಾಸ ಮತ್ತು ಸುತ್ತಾಟದಲ್ಲಿ ನೀರಿನ ಬಾಟಲಿಯನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಉತ್ತಮ’ ಎಂದು ಸಲಹೆ ನೀಡುತ್ತಾರೆ ಅಗರ–ಮಾಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅರುಣ್‌ ಕುಮಾರ್.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು