ಮಂಗಳವಾರ, ಸೆಪ್ಟೆಂಬರ್ 28, 2021
25 °C

ಯಳಂದೂರು: ಬಿಳಿ ಜೋಳಕ್ಕೆ ಧಾರಣೆ ಕುಸಿತ– ಕೃಷಿಕ ಕಂಗಾಲು

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ತಾಲ್ಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಬಿಳಿ ಜೋಳ ಬಂಪರ್ ಫಸಲು ತಂದುಕೊಟ್ಟಿದೆ. ಆದರೆ, ಕೊಯ್ಲಿನ ಹಂತದಲ್ಲಿ ಸದಾ ತೂಗುವ ಮೋಡ, ತುಂತುರು ಹನಿಗೆ ತೆನೆ ಸಿಲುಕಿದ್ದು, ತೇವಾಂಶ ಹೆಚ್ಚಳದಿಂದ ಕಾಳು ಕಪ್ಪಾಗುವ ಭೀತಿ ಕೃಷಿಕರನ್ನು ಕಾಡಿದೆ.

ಅಲ್ಪಾವಧಿ ಬೆಳೆ ಹೈಬ್ರಿಡ್ ಬಿಳಿ ಜೋಳ 70 ದಿನದಲ್ಲಿ ಕಟಾವಿಗೆ ಬರುತ್ತದೆ. ಮುಂಗಾರು ಪೂರ್ವದಲ್ಲಿ ಬಿತ್ತನೆ ಮಾಡಿದ್ದ ಕೃಷಿಕರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿ ಇದ್ದರು. ಕಳೆದ ವಾರ ಬಿಸಿಲು ಹೆಚ್ಚಿದ್ದು ಜೋಳವನ್ನು ತಾಕಿನಿಂದ ಸಾಗಣೆ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ನಾಲ್ಕೈದು ದಿನಗಳಿಂದ ಉಂಟಾದ ಹವಾಮಾನ ವೈಪರೀತ್ಯದಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿಸಿದೆ. ಜಮೀನುಗಳಿಂದ ಹೊರ ಭಾಗಕ್ಕೆ ಕೊಯ್ಲು ಮಾಡಿದ ಜೋಳವನ್ನು ಸಂಗ್ರಹಿಸಿ ತರಲು ಹಿನ್ನಡೆಯಾಗಿದೆ.

'ಬಹುತೇಕ ಮೆಕ್ಕೆಜೋಳಕ್ಕೆ ಸೀಮಿತವಾಗಿದ್ದ ಬೇಸಾಯಗಾರರು ಈ ಬಾರಿ ಹೈಬ್ರಿಡ್ ಬಿಳಿಜೋಳ ಬಿತ್ತನೆ ಮಾಡಿದ್ದರು. ಮೂರ್ನಾಲ್ಕು ಬಾರಿ ಸುರಿದ ಮುಂಗಾರು ಪೂರ್ವ ಮಳೆಗೆ ಬೆಳೆ ಉತ್ತಮ ಫಸಲು ನೀಡಿತ್ತು. ಆಗಸ್ಟ್ ಮೊದಲವಾರ ಕ್ವಿಂಟಲ್ ಜೋಳಕ್ಕೆ ₹1,500 ಧಾರಣೆಯೂ ಇತ್ತು. ನಂತರ ₹1,200ಕ್ಕೆ ಕುಸಿಯಿತು. ಕೊಯ್ಲಿನ ಅವಧಿಯಲ್ಲಿ ತುಂತುರು ಮಳೆಗೆ ಜೋಳ ಸಿಲುಕಿದ್ದು, ಜೋಳ ತೆನೆಯಲ್ಲಿ ಕಪ್ಪಾಗುವ ಆತಂಕ ಮೂಡಿಸಿದೆ' ಎಂದು ಹಿಡುವಳಿದಾರ ಹೊನ್ನೂರು ಎಚ್.ಜಿ.ಗುರುಲಿಂಗಯ್ಯ ಹೇಳಿದರು.

‘ರೈತರು ಅಪರೂಪಕ್ಕೆ ಬಿಳಿಜೋಳ ಬೆಳೆದಿದ್ದರು. ಮಳೆಗೂ ಮೊದಲು ಕೊಯ್ಲಾಗದಿದ್ದರೆ, ಕಾಳು ಗುಣಮಟ್ಟ ಕಳೆದುಕೊಳ್ಳಲಿದೆ. ಕಪ್ಪಾದ ಬಿಳಿ ಜೋಳವನ್ನು ಹೆಚ್ಚು ದಿನ ಸಂಗ್ರಹಿಸಿ ಇಡಲು ಸಾಧ್ಯವಿಲ್ಲ. ಹಾಗಾಗಿ, ಕೃಷಿಕರು ಕೊಯ್ಲಾಗುತ್ತಿದ್ದಂತೆ ಕೇರಳ ಇಲ್ಲವೇ ತಮಿಳುನಾಡು ಮೂಲದ ಮಧ್ಯವರ್ತಿಗಳಿಗೆ ಮಾರಾಟ ಮಾಡಿ ಬಂದಷ್ಟು ಬೆಲೆ ಪಡೆಯುವ ನಿರೀಕ್ಷೆಯಲ್ಲಿ ಇದ್ದರು' ಎಂದು ಕೆಸ್ತೂರು ನಿಂಗಯ್ಯ ಅಳಲು ತೋಡಿಕೊಂಡರು.

‘ಬಿಸಿಲು ಕಂಡ ತಕ್ಷಣ ಕಟಾವು ಮಾಡಿ’

‘ಆಗಸ್ಟ್ ಅಂತ್ಯದವರೆವಿಗೂ ಮಳೆಗಾಲ ಮುಂದುವರಿಯಲಿದೆ. ಬಲಿತ ಹೈಬ್ರಿಡ್ ಜೋಳ ಮಳೆಯಲ್ಲಿ ಸಿಲುಕಿದರೆ, ಜೊಳ್ಳಾಗುತ್ತದೆ. ಹೆಚ್ಚು ದಿನಗಳ ಕಾಲ ತೇವಾಂಶದಲ್ಲಿ ಏರಿಕೆ ಕಂಡುಬಂದರೆ ಕಾಳು ತೆನೆಯ ಹಂತದಲ್ಲಿ ಕೊಳೆಯುತ್ತದೆ. ಇದರಿಂದ ಜೋಳ ಬೆಳೆಸಿದ ಖರ್ಚು-ವೆಚ್ಛದಲ್ಲಿ ಏರಿಕೆ ಆಗುತ್ತದೆ. ಹಾಗಾಗಿ, ಬಲಿತ ಬಿಳಿಜೋಳವನ್ನು ಬಿಸಿಲು ಕಂಡ ತಕ್ಷಣ ಕಟಾವು ಮಾಡಬೇಕು’ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಟಕರಂಗಶೆಟ್ಟಿ ಅವರು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು