ಗುರುವಾರ , ಮಾರ್ಚ್ 23, 2023
30 °C
ಪ್ರಕರಣ ಭೇದಿಸಿದ ಪೊಲೀಸರು: ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಶೌಚಾಲಯದಲ್ಲಿ ಶವ ಪತ್ತೆ ಪ್ರಕರಣ: ಪತ್ನಿ, ಪ್ರಿಯಕರನೇ ಹಂತಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನ ಗುಂಡಿಮಾಳ ಗ್ರಾಮದ ಮನೆಯ ಶೌಚಾಲಯದ ಗುಂಡಿಯಲ್ಲೇ ರಾಜಶೇಖರ ಮೂರ್ತಿ ಶವ ಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು; ರಾಜಶೇಖರ ಮೂರ್ತಿಯ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.   

ನಂದಿನಿ ಹಾಗೂ ಆಕೆಯ ಸ್ನೇಹಿತ ದಿನಕರ್‌ ಬಂಧಿತರು. ಇದು ಆಕಸ್ಮಿಕ ಸಾವಲ್ಲ, ಕೊಲೆಯಾಗಿರಬಹುದು ಎಂದು ಶಂಕಿಸಿದ್ದ ಪೊಲೀಸರು, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಿದ್ದರು. 

ರಾಜಶೇಖರ ಮೂರ್ತಿ ಕಾಣೆಯಾಗಿರುವ ಬಗ್ಗೆ ಅವರ ತಂದೆ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ಪತ್ತೆಗಾಗಿ ಹುಡುಕಾಟ ಆರಂಭಿಸಿದಾಗ ಮನೆಯ ಹಿಂಭಾಗದಲ್ಲಿರುವ ಶೌಚಾಲಯ ಗುಂಡಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ರಾಜಶೇಖರ ಮೂರ್ತಿ ಪತ್ನಿ ನಂದಿನಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಆಕೆ ನಿಜಾಂಶವನ್ನು ತಿಳಿಸಿದ್ದಾರೆ. 

‘ನಂದಿನಿ ಹಾಗೂ ವೃತ್ತಿಯಲ್ಲಿ ಟ್ರಾಕ್ಟರ್‌ ಚಾಲಕರಾಗಿರುವ ದಿನಕರ್‌ ನಡುವೆ ಸಲುಗೆ ಇರುವ ಬಗ್ಗೆ ರಾಜಶೇಖರ ಮೂರ್ತಿ ಅವರಿಗೆ ಅನುಮಾನ ಇತ್ತು. ಇದೇ ವಿಚಾರವಾಗಿ ಪತಿ ಮತ್ತು ಪತ್ನಿ ನಡುವೆ ಆಗಾಗ ಜಗಳವೂ ನಡೆಯುತ್ತಿತ್ತು. ಎರಡು ತಿಂಗಳ ಹಿಂದೆ ಇದೇ ವಿಚಾರವಾಗಿ ಹಾಸನೂರು ಗ್ರಾಮದಲ್ಲಿ ನ್ಯಾಯ ಪಂಚಾಯಿತಿಯೂ ನಡೆದು ಇನ್ನು ಮುಂದೆ ದಿನಕರ್, ನಂದಿನಿ ಜೊತೆ ಮಾತನಾಡದಂತೆ ಎಚ್ಚರಿಕೆಯನ್ನು ನೀಡಲಾಗಿತ್ತು’ ಎಂದು ಪೊಲೀಸರು ಹೇಳಿದ್ದಾರೆ. 

‘ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿ ಕೋವಿಡ್ ನಿಯಮದಂತೆ ತಪಾಸಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೃತದೇಹ ಪತ್ತೆಯಾಗುತ್ತಿದ್ದಂತೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದಾಗಿ ಪ್ರಕರಣವನ್ನು ಕನಿಷ್ಠ ಅವಧಿಯಲ್ಲೇ ಪತ್ತೆ ಹಚ್ಚಲು ಸಾಧ್ಯವಾಯಿತು’ ಎಂದು ಇನ್‌ಸ್ಪೆಕ್ಟರ್‌ ಸಂತೋಷ್ ಕಶ್ಯಪ್ ‘ಪ್ರಜಾವಾಣಿ’ಗೆ ತಿಳಿಸಿದರು.

ಖಾರದ ಪುಡಿ ಎರಚಿ, ದೊಣ್ಣೆಯಿಂದ ಹೊಡೆದು ಕೊಲೆ
‘ಜೂನ್‌ 23ರಂದು ರಾತ್ರಿ ನಂದಿನಿ ಮತ್ತು ದಿನಕರ್‌ ಅವರು ಮನೆಯಲ್ಲಿ ಇದ್ದಾಗ, ರಾಜಶೇಖರ ಮೂರ್ತಿ ಅವರು ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರ ಕಣ್ಣಿಗೆ ಖಾರದ ಪುಡಿ ಎರಚಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ದೇಹವನ್ನು ಶೌಚಾಲಯ ಗುಂಡಿಗೆ ಹಾಕಿದ್ದಾಗಿ ಆರೋಪಿಗಳಿಬ್ಬರೂ ವಿಚಾರಣೆ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು