ಗುರುವಾರ , ಆಗಸ್ಟ್ 11, 2022
27 °C
ಬಿಳಿಗಿರಿಬೆಟ್ಟದ ಕಾನನದಲ್ಲಿ ಪ್ರಾಣಿ, ಪಕ್ಷಿ, ಓತಿಕ್ಯಾತಗಳ ದಿಬ್ಬಣ: ಉಲಿಯುತ್ತಿವೆ ಕಾಜಾಣ

ಯಳಂದೂರು: ನೀರ ದಾರಿಯಲ್ಲಿ ವನ್ಯಜೀವಿಗಳ ಸಂಚಾರ

ನಾ.ಮಂಜುನಾಥಸ್ವಾಮಿ‌ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ‘ಬಾರಪ್ಪೋ ಮಳೆರಾಯ, ನೀನ್ ಬರದಿದ್ರೆ ಬದುಕಿಲ್ಲ’ ಎಂದು ಮಳೆರಾಯನನ್ನು ಕರೆಯುವ ಜನಪದ ಪರಂಪರೆ ಜಿಲ್ಲೆಯಲ್ಲಿದೆ. ಈ ಬಾರಿ ವರುಣನಿಗೆ ಹರಕೆ ಸಲ್ಲಿಸುವ ಮೊದಲೇ ಮಳೆ, ಮಿಂಚು, ಗುಡುಗು, ಸಿಡಿಲು ದಾಂಗುಡಿ ಇಟ್ಟಿದೆ.

ಕಾದ ಭುವಿಗೆ ಹನಿಯೇ ಸಾಂತ್ವನ ತುಂಬಿದೆ. ಹಸಿರ ಐಸಿರಿ ವನ ಜೀವಗಳಿಗೆ ಆಶ್ರಯ ನೀಡಿದೆ. ಕಣ್ಣು ಬಿಟ್ಟ ಕಡೆಗಳಲ್ಲಿ ನೀರಿನ ಒರತೆ ಚಿಮ್ಮಿದೆ. ಕಾನನದ ಹಾದಿಯಲ್ಲಿ ಜಲಕ್ರೀಡೆಯ ಉತ್ಸವಕ್ಕೆ ಆನೆಗಳ ದಿಬ್ಬಣ, ಹಾಡು ಹಕ್ಕಿಗಳ ಸಂಗೀತ. ಪ್ರಾಣಿ, ಪಕ್ಷಿ, ಓತಿ ಕ್ಯಾತಗಳ ಉಳಿತವೂ ಸೇರಿದೆ.

ತಾಲ್ಲೂಕಿನಲ್ಲಿ ಪ್ರತಿದಿನ ಸುರಿಯುವ ಪ್ರತಿ ನೀರ ಹನಿ ಹಾಡಾಗಿ ಕಾಡಿದೆ. ಮೇಘಗಳ ಸಾಲು ಮುಂಜಾವಕ್ಕೂ ಮೊದಲೇ ಸ್ವಾಗತ ಕೋರುತ್ತಿವೆ. ಕಾನನದ ತುಂಬ ಹಸಿರು ಉಸುರುತ್ತಿವೆ. ಆನೆ, ಹಕ್ಕಿ, ಹಾವು ಸಂಭ್ರಮದಿಂದ ಸಂಚರಿಸುತ್ತಿದ್ದು, ಪ್ರಕೃತಿ ಮಾತೆಯ ತನುಮನದಲ್ಲಿ ಪ್ರಪುಲ್ಲತೆ ಅರಳಿಸಿದೆ. ಸಣ್ಣ, ಪುಟ್ಟ ಜಲಾವರಗಳು ತುಂಬಿ, ಕೆಳಪಾತ್ರಗಳತ್ತ ಇಳಿಯುತ್ತಿದ್ದು, ನೀರ ಹಾದಿಯ ನಡುವೆ ಅಡವಿಯ ಜೀವ ಜಗತ್ತು ಜಲ ಗಣಮನ ಹಾಡುತ್ತಿವೆ.

‘ವರ್ಷದ 12 ಮಾಸಗಳಲ್ಲಿ 27 ಮಳೆ ನಕ್ಷತ್ರಗಳು ಇವೆ. ಆದರೆ, ಕೆಲವು ಜಡಿ ಮಳೆ ತಂದರೆ, ಮತ್ತೆ ಹಲವು ಕಾಣದಂತೆ ಮಾಯವಾಗುತ್ತವೆ. ಈ ಬಾರಿ ಅಕಾಲ ಹಾಗೂ ಸಕಾಲ ಮಳೆಗಳು ಒಟ್ಟಾಗಿ ಜಲಾವರಗಳನ್ನು ತುಂಬಿಸಿವೆ. ಊರ ಕೆರೆ, ಕಾಡ ಕಟ್ಟೆ, ಬುಗ್ಗೆ, ಝರಿಗಳಲ್ಲಿ ನೀರಿನ ಸಪ್ಪಳ ಕೇಳುತ್ತಿದೆ. ಮಳೆ ವೈಭವ ಮತ್ತೆ ಮರುಕಳಿಸಿದ್ದು, ನೀರು ನಿಲ್ಲಿಸಿ, ಹಿಡಿದಿಡುವ ಪ್ರಯತ್ನ ಆಗಬೇಕು’ ಎನ್ನುತ್ತಾರೆ ನಿಸರ್ಗ ಪ್ರಿಯರು.

ಮಳೆ ನಕ್ಷತ್ರಗಳ ವೈಭವ: ‘ಭರಣಿ ಮಳೆ ಬಂದರೆ ಧರಣಿ ತುಂಬ ಬೆಳೆ ಎನ್ನುವ ಕಾಲ ಇತ್ತು. ರೋಹಿಣಿಯಲ್ಲಿ ಬಿತ್ತಿದರೆ ಓಣಿ ತುಂಬ ಜೋಳ ಕಾಣಬಹುದಿತ್ತು. ಹುರುಳಿ ಬಿತ್ತುವ ಸಮಯಕ್ಕೆ ಉತ್ತರೆ ಮಳೆ ಜಡಿ ಇಡಿಯುತ್ತಿತ್ತು. ಜೂನ್ ಮೊದಲ ವಾರ ಮಳೆ ಆಗಮನಕ್ಕೆ ಸಿದ್ಧತೆ ನಡೆಯುತ್ತಿತ್ತು. ಭರಣಿ, ಕೃತ್ತಿಕೆ, ರೋಹಿಣಿ, ಮೃಗಶಿರಾ ನಕ್ಷತ್ರಗಳಲ್ಲಿ ಕರಡಿ, ಕುಂಜರ, ಕೃಷ್ಣ ಮೃಗಗಳು ತಮ್ಮ ಸಂತಾನದೊಂದಿಗೆ ಅಡ್ಡಾಡುತ್ತಿದ್ದವು. ಜೂನ್-ಜುಲೈ ಮಾಸ ಆರಿದ್ರಾ, ಪುನರ್ವಸು, ಪುಷ್ಯ ಮಳೆಗಳಲ್ಲಿ ಹೊಳೆ ಬರುತ್ತಿತ್ತು. ವನ್ಯ ಜೀವಿಗಳಿಗೆ ಕಾನನದಲ್ಲಿ ಸಮೃದ್ಧ ಮೇವು ಸಿಗುತ್ತಿತ್ತು. ಹರಿಯುವ ನೀರಿನಲ್ಲಿ ಮರಿಗಳು ಜಳಕ ಆಡುತ್ತಿದ್ದವು. ಆದರೆ, ಈಚೆಗೆ ಮಳೆ ಚಕ್ರದಲ್ಲಿ ವ್ಯತ್ಯಯ ಉಂಟಾಗಿದೆ. ಬಂದರೆ ಉಂಟು, ಬರದಿದ್ದರೆ ಇಲ್ಲ ಎನ್ನುವ ಸ್ಥಿತಿಯೂ ಇದೆ' ಎಂದು ಮಳೆ ತಜ್ಞ ಬಿಆರ್‌ಟಿ ರಾಮಾಚಾರಿ 'ಪ್ರಜಾವಾಣಿ'ಗೆ ತಿಳಿಸಿದರು.

60 ಸೆಂ.ಮೀ ಮಳೆ
‘ಬನದ ಸುತ್ತಮುತ್ತ ಜನವರಿ- ಜೂನ್ ನಡುವೆ 60 ಸೆಂ.ಮೀ ಮಳೆ ಸುರಿದಿದೆ. ಕಳೆದೊಂದು ದಶಕದಿಂದ ಮುಂಗಾರು ಅಬ್ಬರ ಕಡಿಮೆ ಆಗಿತ್ತು. ಈ ಬಾರಿ ಹಿಂಗಾರಿನಿಂದ ಆರಂಭವಾದ ಮಳೆ ಮತ್ತೆ ಹಳೆ ನೆನಪುಗಳನ್ನು ಹೊತ್ತು ತಂದಿದೆ. ಮಳೆ ಸಂಭ್ರಮ ಮುಗಿಲು ಮುಟ್ಟಿದ್ದು, ಕಾಡು-ನಾಡಿನಲ್ಲಿ ಜೀವ ಜಲ ಮರು ಪೂರಣ ಆಗುತ್ತಿದೆ. ಈ ದಿಸೆಯಲ್ಲಿ ಹೆಚ್ಚಾದ ಮಳೆ ನೀರನ್ನು ನಿಲ್ಲಿಸಿ. ಇಳೆಯ ಜಲ ಜಾಗೃತಿ ಮೂಡಿಸಬೇಕು’ ಎಂದು ಎಆರ್‌ಎಫ್‌ಒ ರಮೇಶ್ ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು